ಕರ್ಣನ ಪುತ್ರ ವೀರ ವೃಷಸೇನನ ದುರಂತ ಅಂತ್ಯ. ಕೃಷ್ಣನ ತಂತ್ರ , ಅರ್ಜುನನ ಅಬ್ಬರ ಎಲ್ಲವೂ ಪ್ರಸಂಗವನ್ನು ಎತ್ತಿ ಹಿಡಿಯುವಂತಹದ್ದು. ಪ್ರಸಂಗಕರ್ತರು ರಂಗಕ್ಕೆ ಬೇಕಾಗುವ ತೆರನಲ್ಲಿ ಪದ್ಯಗಳನ್ನು ರಚಿಸುವುದು,ಅವುಗಳನ್ನು ಸಂದರ್ಭಕ್ಕನುಗುಣವಾಗಿ ಹಾಡುವುದು ಭಾಗವತರಿಗೂ ಒಂದು ಸವಾಲು.
Advertisement
Related Articles
Advertisement
ಮಗನ ಶವದ ಬಳಿ ಕುಳಿತು ಮಗನೇ ನಿನ್ನ ಪೋಲ್ವರಾರು… ಎಂಬ ಪದ್ಯಕ್ಕೆ ಭಾವನಾತ್ಮಕವಾಗಿ ಅಭಿನಯಿಸುವುದು ಕರ್ಣನ ಪಾತ್ರಧಾರಿಗೆ ಸವಾಲು ಮತ್ತು ಈ ದೃಶ್ಯ ಕರ್ಣಾರ್ಜುನ ಕಾಳಗದ ಪ್ರಮುಖ ದೃಶ್ಯ. ಈ ಸನ್ನಿವೇಶವಿಲ್ಲದೆ ಪ್ರಸಂಗ ಪರಿಪೂರ್ಣ ವಾಗುವುದು ಅಸಾಧ್ಯ ಎನ್ನುವುದು ಪ್ರಸಂಗ ಪ್ರಿಯರ ಅಭಿಪ್ರಾಯ.
ಈಗೀಗ ಕರ್ಣಾರ್ಜುನ ಕಾಳಗ, ವೃಷಸೇನ ಕಾಳಗವಿಲ್ಲದೆ ನೇರವಾಗಿ ನಾಲ್ಕು ವೇಷಗಳ ಪ್ರವೇಶದಿಂದ ಆರಂಭವಾಗುತ್ತಿದ್ದು ಈ ಬಗ್ಗೆ ಪರಂಪರೆಯ ಅಭಿಮಾನಿಗಳು ಬೇಸರ ಪಟ್ಟಿದ್ದು ಇದೆ.
ದೊಡ್ಡ ಮುಂಡಾಸಿನ ವೇಷದಲ್ಲಿ ಕರ್ಣ ಕಾಣಿಸಿಕೊಳ್ಳಬೇಕಾಗಿದ್ದು, ಪಾತ್ರ ಚಿತ್ರಣವೇ ವಿಶಿಷ್ಠ ಮತ್ತು ವಿಭಿನ್ನವಾದುದ್ದು. ನಡುತಿಟ್ಟಿನ ಯಕ್ಷರಂಗದಲ್ಲಿ ಕರ್ಣನ ವೇಷಗಾರಿಕೆಯ ಗತ್ತೇ ವಿಭಿನ್ನವಾದದ್ದು,ಎಲ್ಲಾ ಪಾತ್ರಗಳಿಗಿಂತ ಮುಂಡಾಸು ವಿಭಿನ್ನವಾಗಿ ಕಂಡು ಬರುತ್ತದೆ. ಮುಂಡಾಸಿನ ಸುತ್ತ ಎಲೆವಸ್ತ್ರವನ್ನು ಕಟ್ಟುವುದು ಪಾತ್ರದ ಹೆಚ್ಚುಗಾರಿಕೆ. ಆ ಪರಂಪರೆಯನ್ನು ಇಂದಿಗೂ ಕೆಲ ಬೆರಳೆಣಿಕೆಯ ಕಲಾವಿದರು ಮುಂದುವರಿಸಿಕೊಂಡಿರುವುದು ಸಂಪ್ರದಾಯಗಳು ಉಳಿದುಕೊಂಡಿರುವುದಕ್ಕೆ ಸಾಕ್ಷಿ. ಕರ್ಣನ ದೊಡ್ಡ ಕಪ್ಪು ಮುಂಡಾಸು, ಶಲ್ಯನ ದೊಡ್ಡ ಕೆಂಪು ಮುಂಡಾಸು, ಅರ್ಜುನ ಕಪ್ಪು ಕೇದಗೆ ಮುಂದಲೆ, ನಿರಿ ಸೀರೆಯುಟ್ಟ ಕೃಷ್ಣನ ಪಾತ್ರ , ಕಟ್ಟು ಮೀಸೆಗಳು ರಣರಂಗಕ್ಕೆ ಬೇಕಾದ ಯಕ್ಷಗಾನದ ರಥ ವೇದಿಕೆಯ ಸೊಬಗನ್ನೆ ಹೆಚ್ಚಿಸುತ್ತಿದ್ದವು. ಇಂದು ಅವುಗಳನ್ನೆಲ್ಲಾ ಪರಿಗಣಿಸದೆ ಸಂದರ್ಭಕ್ಕನುಗುಣವಾಗಿ ಕರ್ಣಾರ್ಜುನ ಕಾಳಗ ನಡೆಯುತ್ತಿದೆ. ಕೀರ್ತಿ ಶೇಷ ದಿವಂಗತ ಹಾರಾಡಿ ರಾಮ ಗಾಣಿಗರು ಕರ್ಣನ ಪಾತ್ರಕ್ಕೆ ಹೊಸ ಆಯಾಮವನ್ನು ನೀಡಿದವರು ಎನ್ನುವುದು ಹಿರಿಯ ಪ್ರೇಕ್ಷಕರ ಅಭಿಪ್ರಾಯ. ಅವರ ಆಳ್ತನ, ಮಾತುಗಾರಿಕೆ ,ಗತ್ತುಗಾರಿಕೆ ಎನ್ನುವುದು ಕರ್ಣನ ಪಾತ್ರಕ್ಕೆ ಸೂಕ್ತವಾಗಿತ್ತು ಎನ್ನುವುದು ಅವರ ಪಾತ್ರ ನೋಡಿದ ಹಲವರ ಅಂಬೋಣ. ಹಾರಾಡಿ ರಾಮಗಾಣಿಗರ ಮಾದರಿಯನ್ನು ಅನುಸರಿಸಿ ಬಳಿಕ ಕರ್ಣನ ಪಾತ್ರಧಾರಿಯಾಗಿ ಯಕ್ಷರಂಗದಲ್ಲಿ ಮೆರೆದ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪನವರು. ಸದ್ಯ ನಡುತಿಟ್ಟಿನಲ್ಲಿ ಕರ್ಣಾರ್ಜುನ ಕಾಳಗ ಎಂದರೆ ಐರೋಡಿ ಗೋವಿಂದಪ್ಪನವರು ಅಭಿನವ ಕರ್ಣ ಎಂದೇ ಪ್ರಸಿದ್ಧರಾಗಿದ್ದಾರೆ. ಸಂಪ್ರದಾಯ ಬದ್ಧ ವೇಷಗಾರಿಕೆಯೊಂದಿಗೆ ಕರ್ಣನ ಪಾತ್ರಕ್ಕೆ ಸಮರ್ಥವಾಗಿ ಜೀವ ತುಂಬುವ ಬೆರಳೆಣಿಕೆಯ ಕಲಾವಿದರಲ್ಲಿ ಐರೋಡಿಯವರದ್ದು ಮೊದಲ ಸಾಲಿನಲ್ಲಿ ಕೇಳಿ ಬರುವ ಹೆಸರು.
ಕರ್ಣನ ಪಾತ್ರಧಾರಿಯಾಗಿ ಪದ್ಯ ಎತ್ತುಗಡೆ, ಭಾವಾನಾತ್ಮಕ ಅಭಿನಯ, ರಣರಂಗದಲ್ಲಿ ರೋಷ , ಮಗನನ್ನು ಕಳೆದುಕೊಂಡಾಗ ತೋರುವ ದುಃಖ, ಕೊನೆಯಲ್ಲಿ ಕೃಷ್ಣನಲ್ಲಿ ತನ್ನ ಬದುಕಿನ ಕೊನೆ ಕಾಣುವ ದುರಂತಮಯ ಸ್ಥಿತಿ ಎಲ್ಲವೂ ಐರೋಡಿ ಗೋವಿಂದಪ್ಪನವರ ಕರ್ಣನ ಪಾತ್ರದಲ್ಲಿ ಕಾಣಬಹುದಾಗಿದೆ.
ಪ್ರಸಂಗದಲ್ಲಿ ಶಲ್ಯ , ಅರ್ಜುನ ಮತ್ತು ಕೃಷ್ಣನ ಪಾತ್ರಧಾರಿಗೂ ಅಷ್ಟೇ ಪ್ರಾಮುಖ್ಯತೆ ಇದೆ. ಹಿಂದೆ ಬಯಲಾಟದಲ್ಲಿ ಪ್ರೇಕ್ಷಕರ ನೆಚ್ಚಿನ ಪ್ರಸಂಗವಾಗಿದ್ದ ಕರ್ಣಾರ್ಜುನ ಕಾಳಗ ಇಂದು ವಿರಳವಾಗಿ ಪ್ರದರ್ಶನ ಕಾಣುತ್ತಿರುವುದು ಬೇಸರದ ಸಂಗತಿ. ಅಲ್ಲಲ್ಲಿ ಕರ್ಣಾರ್ಜುನ ಕಾಳಗ ಪ್ರಸಂಗ ಆಯ್ದ ಕಲಾವಿದರಿಂದ ಸೊಗಸಾಗಿ ಪ್ರದರ್ಶನಗೊಳ್ಳುತ್ತಿದ್ದರೂ ಹಿಂದೆ ನೋಡಿದ ಕರ್ಣಾರ್ಜುನ ಈಗ ನೋಡಿದ ಕರ್ಣಾರ್ಜುನಕ್ಕಿಂತ ಭಿನ್ನ ಎನ್ನುವುದು ಹಿರಿಯ ಪ್ರೇಕ್ಷಕರ ಅಭಿಪ್ರಾಯವಾಗಿದೆ. ನರಾಡಿ ಭೋಜರಾಜ ಶೆಟ್ಟಿ,ಕೋಡಿ ವಿಶ್ವನಾಥ ಗಾಣಿಗ, ಆಜ್ರಿ ಗೋಪಾಲ ಗಾಣಿಗ ಅವರೂ ಬಯಲಾಟ ಮೇಳಗಳಲ್ಲಿ ಕರ್ಣನ ಪಾತ್ರಕ್ಕೆ ನಡುತಿಟ್ಟಿನ ಸಂಪ್ರದಾಯ ಬದ್ಧವಾಗಿ ಜೀವ ತುಂಬವ ಕಲಾವಿದರಲ್ಲಿ ಪ್ರಮುಖರು. ಭಾಗವತರ ಪದ್ಯದಿಂದ ಹಿಡಿದು ಎಲ್ಲಾ ವೇಷಧಾರಿಗಳ ಸಂಪ್ರದಾಯ ಬದ್ಧವಾದ ವೇಷಗಾರಿಕೆ, ಚೌಕಟ್ಟಿನೊಳಗಿನ ನೃತ್ಯ, ಅಭಿನಯ ನಡುತಿಟ್ಟಿನ ಶೈಲಿಯಿಂದ ಕೂಡಿದ್ದ ಕರ್ಣಾರ್ಜುನ ಕಾಳಗ ಅಪರೂಪವಾಗಿದೆ ಎನ್ನುವುದು ನಡುತಿಟ್ಟಿನ ಅಭಿಮಾನಿಗಳ ಬೇಸರದ ಮಾತಾಗಿದೆ. ಹಾರಾಡಿ ರಾಮ ಗಾಣಿಗರು ಮೆರೆಸಿದ, ಐರೋಡಿ ಗೋವಿಂದಪ್ಪನವರು ಬೆಳಗಿಸಿದ ಕರ್ಣನ ಪಾತ್ರಕ್ಕೆ ಇಂದಿನ ಯುವ ವೃತ್ತಿ ಕಲಾವಿದರು ಯಾವ ರೀತಿಯಲ್ಲಿ ನ್ಯಾಯ ಒದಗಿಸುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಆರಂಭದಿಂದ ಕೊನೆಯವರೆಗೆ ರಂಗಸ್ಥಳದ ಕಾವು, ಪ್ರೇಕ್ಷಕರ ಕುತೂಹಲ ಉಳಿಸಿಕೊಳ್ಳುವ ಪ್ರಸಂಗ ಮುಂದೆ ನಡುತಿಟ್ಟಿನಲ್ಲಿ ಹೇಗೆ ಮುಂದುವರಿಯುತ್ತದೆ ಎನ್ನುವ ಕುರಿತು ಸದ್ಯ ಚಿಂತಿಸಬೇಕಾಗಿದೆ. ಚಿತ್ರಗಳು: ಉದಯವಾಣಿ ಸಂಗ್ರಹ, ಬಯಲಾಟ ಡಾಟ್ ಕಾಂ