ಕರ್ಣ ಇಂದಿಗೂ ಮಹಾಭಾರತದ ಯಾವ ರೂಪದ ಪಾತ್ರ ಎಂಬ ಬಗ್ಗೆ ಜಿಜ್ಞಾಸೆಗಳಿವೆ. ಒಂದೆಡೆ ಆತ ದುರಂತಮಯ ನಾಯಕನಾದರೆ ಮತ್ತೂಂದೆಡೆ ವೀರಾಧಿವೀರ ಮಗದೊಂದೆಡೆ ದಾನಶೂರ, ಜೊತೆಗೆ ಅನ್ಯಾಯವನ್ನು ಕಂಡು ಕಣ್ಣು ಮುಚ್ಚಿ ಕೂರುವ ಹೇಡಿ, ಆಸಹಾಯಕ.
ಮಂಗಳೂರಿನಲ್ಲಿ ನೀನಾಸಂ ತಿರುಗಾಟ 2019ರ ನಾಟಕ ಕರ್ಣ ಸಾಂಗತ್ಯ ನಾಟಕ ಪ್ರದರ್ಶನಗೊಂಡಿತು. ಇಡೀ ಮಹಾಭಾರತವೇ ಕರ್ಣ ರಸಾಯನವೆಂದು ಪಂಪ ಹತ್ತನೇ ಶತಮಾನದಲ್ಲೇ ಹೇಳಿದ್ದ. ವ್ಯಾಸರು ಶಿಷ್ಟ ರೂಪದ ಮಹಾಭಾರತದಲ್ಲಿ, ಕುಮಾರವ್ಯಾಸ ತನ್ನ ಅಭಿವ್ಯಕ್ತಿಯಲ್ಲಿ, ಜನಪದರು ತಮ್ಮ ಶೈಲಿಯಲ್ಲಿ ಹೇಳಿರುವ ಎಲ್ಲ ವಿಧದಿಂದಲೂ ನಮಗೀಗಾಗಲೇ ತಿಳಿದಿರುವ ಮಹಾಭಾರತದ ಅನಧಿಕೃತ ಹೀರೊ ಕರ್ಣನನ್ನು ನೀನಾಸಂ ತಂಡ ಪರಿಪರಿಯಾಗಿ ಕಡೆದು ತುಸು ದೀರ್ಘವೇ ಎನ್ನಬಹುದಾದ ಸರಿಯಾಗಿ ಎರಡೂವರೆ ತಾಸುಗಳ ಕಾಲ ನಮ್ಮೆದುರು ರಂಗದಲ್ಲಿ ತಂದಿಟ್ಟಾಗ ಒಂದು ಅಪೂರ್ವ ಅನುಭವವಾದದ್ದು ಮಾತ್ರ ಸುಳ್ಳಲ್ಲ.
ಕರ್ಣ ಇಂದಿಗೂ ಮಹಾಭಾರತದ ಯಾವ ರೂಪದ ಪಾತ್ರ ಎಂಬ ಬಗ್ಗೆ ಜಿಜ್ಞಾಸೆಗಳಿವೆ. ಒಂದೆಡೆ ಆತ ದುರಂತಮಯ ನಾಯಕನಾದರೆ ಮತ್ತೂಂದೆಡೆ ವೀರಾಧಿವೀರ ಮಗದೊಂದೆಡೆ ದಾನಶೂರ, ಜೊತೆಗೆ ಅನ್ಯಾಯವನ್ನು ಕಂಡು ಕಣ್ಣು ಮುಚ್ಚಿ ಕೂರುವ ಹೇಡಿ, ಆಸಹಾಯಕ. ಹೀಗೆ ನಾನಾ ರೀತಿಯಲಿ ಆತನನ್ನು ಹಾಡಿ ಹೊಗಳಿ ತೆಗಳಿರುವ ಭಾರತದ ಪರಂಪರೆಗೆ ಕರ್ಣನ ಮನಸ್ಥಿತಿ ಹುಟ್ಟಿನಿಂದ ಸಾಯುವ ಕೊನೆ ಕ್ಷಣದವರೆಗೂ ಆತನೊಳಗಿರುವ ಪ್ರಶ್ನೆ – ಉತ್ತರಗಳನ್ನು ಸೇರಿಸಿಕೊಂಡು ಇಂದೂ ಅಲ್ಲಲ್ಲಿ ಚಾಲ್ತಿಯಲ್ಲಿರುವ ಜಾತಿ ಪದ್ಧತಿಯೂ ಸೇರಿದಂತೆ ಸಾಮಾಜಿಕವಾದ ಅನೇಕ ಆಯಾಮಗಳನ್ನು ತನ್ನೊಳಗೆ ಹೊತ್ತು ಕೊಂಡೆ ಸುಲಭ ಸಾಧ್ಯವಲ್ಲದ ಕರ್ಣ ಸಾಂಗತ್ಯ ಹೊರಬಂದಿದೆ.
ಕರ್ಣ ಸಾಂಗತ್ಯ ಒಂದಿಷ್ಟು ಲಘುವಾಗಿ ಆರಂಭಗೊಂಡ ನಾಟಕ ಮತ್ತು ಇತ್ತೀಚಿನ ವರ್ಷಗಳ ನೀನಾಸಂನ ಕೆಲವು ನಾಟಕಗಳಂತೆ ಬರೀ ಓಲಾಟದ ಪ್ರಹಸನದೆಡೆಗೆ ಸಾಗುತ್ತಿದೆಯೋ ಎಂಬ ಶಂಕೆ ಒಂದರೆಕ್ಷಣ ಮೂಡಿಸಿದರೂ ಬರುಬರುತ್ತಾ ಗಟ್ಟಿಯಾಗಿ ಭಾಗವತ ಮತ್ತವರ ತಂಡದ ಪ್ರಸ್ತುತಿಯ ರೂಪದಲ್ಲಿ ಹಾಡು ಸಂಗೀತದ ಜೊತೆಗೆ ಸಾಗಿ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯಿತು. ಕರ್ಣನ ಹುಟ್ಟು, ಹುಟ್ಟಿನೊಂದಿಗೆ ಬಂದ ಬವಣೆ ತನ್ಮೂಲಕ ಇಡೀ ಮಹಾಭಾರತದ ಮತ್ತು ಮಹಾಭಾರತದ ಅನೇಕ ಜನರ ಹುಟ್ಟಿನ ಗೂಡಾರ್ಥವನ್ನು ಬಯಲಿಗೆಳೆಯುವ, ಕರ್ಣನ ಎಲ್ಲಾ ಮುಖದ ಸಾಧು ಮತ್ತು ಸಾಧ್ಯತೆಯನ್ನು ಪೂರಕವಾಗಿ ಮಹಾಭಾರತದ ಸವಿಸ್ತರತೆಯನ್ನು ಕುಂತಿ ಅರ್ಜುನ ಧರ್ಮರಾಯ, ಶಕುನಿ… ಹೀಗೆ ನಾನಾ ಪಾತ್ರಗಳ ಜೊತೆಗೆ ಬೇರೆ ಬೇರೆ ದೃಷ್ಟಿಕೋನ ಮತ್ತು ಸನ್ನಿವೇಶದೊಂದಿಗೆ ಹೊಸ ರೂಪ- ರಸದಲ್ಲಿ ರಂಗದಲ್ಲಿ ಹೇಳುವಂತಹ ಒಂದು ಪ್ರಯೋಗ ನೀನಾಸಂನ ವಿಶೇಷತೆಯೇ ಸರಿ.
ಪ್ರತಿಯೊಂದು ಸನ್ನಿವೇಶಕ್ಕೂ ಒಂದೊಂದು ಶೈಲಿಯ ಅಳವಡಿಕೆ, ಅದಕ್ಕೆ ಸೂಕ್ತ ಹಾಡುಗಳು, ಆಧುನಿಕ ರಂಗ ಪರಿಕರ,ರಂಗಸಜ್ಜಿಕೆ, ಸಂಗೀತ ಬೆಳಕು ಹೆಚ್ಚು ಕಡಿಮೆ ಒಂದಕ್ಕೊಂದು ಪೂರಕವಾಗಿದ್ದರೆ ಬಹುಶಃ ಧ್ವನಿ ತುಸು ಗಟ್ಟಿಯಾಗಿರಬೇಕಿತ್ತು ಎಂದೆನಿಸುತ್ತಿತ್ತು. ನೂತನ ರೀತಿಯ ಪ್ರಸಾಧನ ವಸ್ತ್ರ ವಿನ್ಯಾಸದ ಬಳಕೆ ಈಗ ಸಾಮಾನ್ಯವಾಗಿದ್ದರೂ, ಇಂದಿಗೂ ಕೆಲವೊಮ್ಮೆ ಅದು ಅಲ್ಲಲ್ಲಿ ಅಪ್ಯಾಯಮಾನದ ಜೊತೆಗೆ ಕೆಲವೊಮ್ಮೆ ಅಭಾಸ ಅನಿಸುವುದಿದೆ . ಅದರಲ್ಲೂ ಹೇರಿದ ಹಾಸ್ಯ ಲೇಪನದ ನೃತ್ಯ ಇತ್ಯಾದಿಗಳನ್ನು ಸೇರಿಸಿಕೊಂಡಲ್ಲಿ ಪ್ರಬುದ್ಧ ಪ್ರೇಕ್ಷಕ ಖಂಡಿತ ಒಪ್ಪಿಕೊಳ್ಳಲಾರ. ಇದೇನಿದ್ದರೂ ಜನಪ್ರಿಯತೆಗೆ ಸೈ ಅಷ್ಟೇ. ಇಂತಹ ಒಂದೆರಡು ಅನಗತ್ಯ ಆನಿವಾರ್ಯತೆಗಳನ್ನು ಈ ನಾಟಕವೂ ತನ್ನೊಳಗೆ ಇಟ್ಟುಕೊಂಡಿದ್ದದ್ದು ಬೇಕಾಗಿರಲ್ಲಿಲ್ಲ.
ಕರ್ಣನ ಪ್ರಮುಖ ಸನ್ನಿವೇಶಗಳೆಲ್ಲ ನಾಟಕದ ದೃಶ್ಯ ರೂಪದಿ ಬಂದರೂ ಕರ್ಣ ಭಾನುಮತಿಯರ ಪಗಡೆಯಾಟದಿ ಲಂಬಣದ ಮುತ್ತುಗಳು ರಂಗದೊಳಗೆ ಬೀಳದೆ ಬರೀ ಬಾಯಿ ಮಾತಿನಲೆ ಹಾದು ಹೋದದು ಸಾಂಗತ್ಯದ ರಸಾಯನದಲ್ಲಿ ಹುಳಿ ಹಿಂಡಿದಂತಾಗಿತ್ತು. ಹಳೆ – ನಡುಗನ್ನಡ ಸೇರಿದ ಅಧುನಿಕ ಭಾಷ ಬಳಕೆ ಚೇತೋಹಾರಿ.ಗಣಪತಿಯನ್ನು ಬಿಡದಂತೆ ಮಹಾಭಾರತ ರಚನೆಯ ಎಲ್ಲಾ ಸಮಕಾಲೀನರ ಜೊತೆಗೆ ಸ್ವಲ್ಪವಾದರೂ ಪ್ರಾಯೋಗಿಕವಾಗಿ ರನ್ನನನ್ನು ಬಳಸಬಹುದಾಗಿತ್ತು. ಒಟ್ಟಾರೆಯಾಗಿ ಒಂದು ದಶಕದ ಹಿಂದಿನ ನೀನಾಸಂ ನೋಡಿದ ಸಣ್ಣ ಅನುಭವದ ನೆನಪನ್ನು ಮರುಕಳಿಸಲು ಸಾಥ್ ನೀಡಿದ ಕರ್ಣ ಸಾಂಗತ್ಯದ ರಸಾಯನ ಮತ್ತೂಮ್ಮೆ ಬಲಗೊಂಡಿರುವ ನಾಲ್ಕು ದಶಕದ ಕರಾವಳಿಯ ರಂಗಮಂದಿರದ ಬೇಡಿಕೆಯ ಕೂಗನ್ನು ಇನ್ನಷ್ಟು ಗಟ್ಟಿ ಗೊಳಿಸುತ್ತದೆ.
ಕಲ್ಲಚ್ಚು ಮಹೇಶ ಆರ್. ನಾಯಕ್