ಉಡುಪಿ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಯಗಳ ಕಾರ್ಮಿಕರಿಗೆ ಸರಕಾರ ನೀಡಿರುವ ಕಾರ್ಮಿಕ ಕಾರ್ಡ್ ನವೀಕರಣ ವಿಳಂಬವಾಗುತ್ತಿದ್ದು, ಇದರಿಂದಾಗಿ ಫಲಾನುಭವಿಗಳು ಸರಕಾರದ ಯಾವುದೇ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಮಂಡಳಿಯಿಂದ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗಿದೆ. ಸರಕಾರ ಹಾಗೂ ಮಂಡಳಿಯ ವಿವಿಧ ಸೌಲಭ್ಯವನ್ನು ಈ ಕಾರ್ಡ್‌ದಾರರಿಗೆ ಆದ್ಯತೆ ಮೇರೆಗೆ ನೀಡಲಾಗುತ್ತದೆ. ಗುರುತಿನ ಚೀಟಿ ಅವಧಿ ಮುಗಿದ ಬಳಿಕ ಅದನ್ನು ಆನ್‌ಲೈನ್ ಮೂಲಕವೇ ನವೀಕರಿಸಿಕೊಳ್ಳಬೇಕು.
ನವೀಕರಣಕ್ಕೆ ಅರ್ಜಿ ಸಲ್ಲಿಸಿ 15ರಿಂದ 20 ದಿನವಾದರೂ ಕಾರ್ಡ್ ಸಿಗುತ್ತಿಲ್ಲ. ಆನ್‌ಲೈನ್‌ನಲ್ಲೇ ಅಪ್‌ಲೋಡ್ ಮಾಡಿದ್ದರಿಂದ ಆನ್‌ಲೈನ್‌ನಲ್ಲೇ ಡೌನ್ ಲೋಡ್ ಮಾಡಿಕೊಳ್ಳಬೇಕು. ಡೌನ್‌ಲೋಡ್ ಮಾಡಿಕೊಳ್ಳುವಾಗ ಸಂಬಂಧಪಟ್ಟ ಅಧಿಕಾರಿಯ ಡಿಜಿಟಲ್ ಸಹಿ ಇದ್ದರೆ ಮಾತ್ರ ಅದನ್ನು ಮಾನ್ಯ ಮಾಡಲಾಗುತ್ತದೆ. ಡಿಜಿಟಲ್ ಸಹಿ ಇಲ್ಲದೆಯೇ ಕೆಲವು ಕಾರ್ಡ್ ಡೌನ್‌ಲೋಡ್ ಆಗುತ್ತಿರುವುದರಿಂದ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಸರಕಾರದ ಸೌಲಭ್ಯ ಪಡೆಯುವ ಸಂದರ್ಭದಲ್ಲಿ ಈ ಕಾರ್ಡ್ ಮಾನ್ಯತೆ ಹೊಂದಿಲ್ಲ ಎನ್ನಲಾಗುತ್ತಿದೆ. ಸಮಸ್ಯೆಗೆ ಅಧಿಕಾರಿಗಳಿಂದಲೂ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎನ್ನುವುದು ಕಾರ್ಮಿಕರ ಗೋಳು.
ನವೀಕರಣ ಪ್ರಕ್ರಿಯೆ ಹೇಗೆ?
ಆನ್‌ಲೈನ್ ಮೂಲಕ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಬಳಿಕ ತಾಲೂಕಿನಲ್ಲಿರುವ ಕಾರ್ಮಿಕ ನಿರೀಕ್ಷಕರು(ಲೇಬರ್ ಇನ್‌ಸ್ಪೆಕ್ಟರ್) ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಒಪ್ಪಿಗೆ ನೀಡುತ್ತಾರೆ. ಅವರು ಒಪ್ಪಿಗೆ ನೀಡಿದ ಬಳಿಕ ಡಿಜಿಟಲ್ ಸಹಿ ಬೀಳಲಿದೆ. ಅನಂತರ ಡೌನ್‌ಲೋಡ್ ಮಾಡಿಕೊಳ್ಳಬೇಕು.
Related Articles
ಸಮಸ್ಯೆಯೇನು?
ಕಾರ್ಮಿಕ ಕಾರ್ಡ್ ನವೀಕರಣ ಆಗದೇ ಇರುವುದರಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ, ಕಾರ್ಮಿಕರಿಗೆ ವೈದ್ಯಕೀಯ ನೆರವು, ಮೃತ ಕಾರ್ಮಿಕರ ಅಂತ್ಯಸಂಸ್ಕಾರಕ್ಕೆ ಸಹಾಯಧನ ಹೀಗೆ ಹಲವು ಸೌಲಭ್ಯಗಳನ್ನು ಪಡೆಯಲು ಸಮಸ್ಯೆಯಾಗುತ್ತಿದೆ. ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂಬುದು ಕಾರ್ಮಿಕರ ಆಗ್ರಹ.
2019-20ನೇ ಸಾಲಿನಲ್ಲಿ ಉಡುಪಿಯ 2,942 ಫಲಾನುಭವಿಗಳು 1,20,38,000 ರೂ.ಗಳಷ್ಟು ಶೈಕ್ಷಣಿಕ ಪ್ರೋತ್ಸಾಹಧನ ಹಾಗೂ 3 ಮೃತ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೆ ತಲಾ 5 ಸಾವಿರದಂತೆ 15 ಸಾವಿರ ರೂ. ನೀಡಲಾಗಿದೆ.
ದ.ಕ. ಜಿಲ್ಲೆಯಲ್ಲಿ 1,590 ಫಲಾನುಭವಿಗಳು 66,81,000 ರೂ.ಗಳಷ್ಟು ಶೈಕ್ಷಣಿಕ ಪ್ರೋತ್ಸಾಹಧನ ಹಾಗೂ 10 ಮೃತ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೆ ತಲಾ 5 ಸಾವಿರದಂತೆ 50 ಸಾವಿರ ರೂ. ನೀಡಲಾಗಿದೆ.
ಕಾರ್ಮಿಕ ಕಾರ್ಡ್ ನವೀಕರಣ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿ ನಡೆಯುತ್ತದೆ. ಲೇಬರ್ ಇನ್‌ಸ್ಪೆಕ್ಟರ್ ಅದನ್ನು ಪರಿಶೀಲಿಸಿ, ಡಿಜಿಟಲ್ ಸಹಿ ಹಾಕುತ್ತಾರೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಬಗೆಹರಿಸಲಾಗುವುದು. ಸಾಫ್ಟವೇರ್ ಬದಲಾವಣೆ ಇತ್ಯಾದಿಗಳನ್ನು ಜಿಲ್ಲಾ ಕೇಂದ್ರದಿಂದ ಮಾಡಲು ಸಾಧ್ಯವಿಲ್ಲ.
-ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಉಡುಪಿ