Advertisement

ಕಾರ್ಕಳ: 52 ಸರಕಾರಿ ಶಾಲೆಗಳಲ್ಲಿ ದೈಹಿಕ ಶಿ. ಶಿಕ್ಷಕರೇ ಇಲ್ಲ !

09:40 PM Jun 25, 2019 | Team Udayavani |

ಬೆಳ್ಮಣ್‌: ಹಲವು ರಂಗಗಳಲ್ಲಿ ನಾವು ಮುಂದುವರಿಯುತ್ತಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಫ‌ಲಿತಾಂಶ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಪ್ರಾಥಮಿಕ ಹಂತದಲ್ಲೇ ಪ್ರತಿಭೆಗಳನ್ನು ಗುರುತಿಸುವ, ತರಬೇತಿ ನೀಡುವ ಕೊರತೆ. ಗ್ರಾಮೀಣ ಪ್ರದೇಶದಲ್ಲಂತೂ ಕ್ರೀಡಾ ಶಿಕ್ಷಕರೂ ಇಲ್ಲದೆ ಗ್ರಾಮೀಣ ಪ್ರತಿಭೆಗಳು ಮಂಕಾಗುತ್ತಿವೆ.

Advertisement

ಕಾರ್ಕಳ ತಾಲೂಕಿನಲ್ಲಿ ಒಟ್ಟು 85 ಸರಕಾರಿ ಪ್ರಾಥಮಿಕ ಶಾಲೆಗಳಿದ್ದು 33 ಶಾಲೆಗಳಲ್ಲಿ ದೈಹಿಕ ಶಿಕ್ಷಕರಿದ್ದರೆ, ಉಳಿದ 52 ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಅಷ್ಟೇ ಅಲ್ಲ ಸಾಮಾನ್ಯ ಶಿಕ್ಷಕರೇ ಮೈದಾನದಲ್ಲೂ ಮಕ್ಕಳ ಆಟೋಟ ಚಟುವಟಿಕೆಗಳನ್ನು ನಿರ್ವಹಿಸಬೇಕಾಗಿದೆ.

ದೈ.ಶಿ. ಶಿಕ್ಷಕರೂ ಪಾಠ ಮಾಡಬೇಕು!
ದೈ. ಶಿ. ಶಿಕ್ಷಕರು ಇಲ್ಲದ ಶಾಲೆಗಳದ್ದು ಒಂದು ಕಥೆಯಾದರೆ, ದೈ. ಶಿ. ಶಿಕ್ಷಕರು ಇರುವ ಶಾಲೆಗಳ ಕಥೆ ವಿಭಿನ್ನ. ಕೆಲವೆಡೆ ಶಿಕ್ಷಕರ ಕೊರತೆ ಬಾಧಿಸುತ್ತಿರುವುದರಿಂದ ಅವರು ಪಾಠವನ್ನೂ ಮಾಡಬೇಕಿದೆ. ಶಾಲೆ ಒಳಗೆ ಮತ್ತು ಹೊರಗೂ ಅವರು ತೊಡಗಿಸಿಕೊಳ್ಳಬೇಕಾದ ಅನಿವಾರ್ಯವಿದೆ.

ಸರಕಾರದ ಧೋರಣೆಯಿಂದ ಸಮಸ್ಯೆ
ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ದೈ. ಶಿ. ಶಿಕ್ಷಕರನ್ನು ಸರಕಾರ ಹೆಚ್ಚುವರಿ ಶಿಕ್ಷಕರೆಂದು ಕಳೆದ ವರ್ಷ ಗುರುತಿಸಲು ಶುರು ಮಾಡಿತ್ತು. ಆದರೆ ದೈ. ಶಿ. ಶಿಕ್ಷಕರ ಅಗತ್ಯ ಮನವರಿಕೆಯಾದ ಬಳಿಕ ಆ ಪ್ರಕ್ರಿಯೆ ಕೈಬಿಡಲಾಗಿತ್ತು. ಇನ್ನು, 200 ವಿದ್ಯಾರ್ಥಿಗಳಿಗಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ದೈ. ಶಿ. ಶಿಕ್ಷಕರ ನೇಮಕಾತಿ ಇಲ್ಲ ಎಂಬ ಮಸೂದೆ ಮಾಡಿದ್ದರೂ ಕಳೆದ ವರ್ಷ ಸರಕಾರಿ ಶಾಲೆಗಳಲ್ಲಿ ದೈ.ಶಿ. ಶಿಕ್ಷಕರಿರಬೇಕೆಂಬ ಮೌಖೀಕ ಆದೇಶವನ್ನು ಶಿಕ್ಷಣ ಇಲಾಖೆ ಹೊರಡಿಸಿತ್ತು. ಇನ್ನು ಕೆಲವು ಶಾಲೆಗಳಲ್ಲಿ 200ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದು ಅಲ್ಲಿ ದೈಹಿಕ ಶಿ. ಶಿಕ್ಷಕರು ವಯೋ ನಿವೃತ್ತಿ ಹೊಂದಿದರೂ ಮತ್ತೆ ಆ ಸ್ಥಾನವನ್ನು ಉಳಿಸಲಾಗುತ್ತಿಲ್ಲ.

ನೇಮಕಾತಿಯಾದರೆ ಉತ್ತಮ
ಕಾರ್ಕಳದ 52 ಪ್ರಾ. ಶಾಲೆಗಳಲ್ಲಿ ದೈ. ಶಿ. ಶಿಕ್ಷಕರಿಲ್ಲ. ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಪಾಠ ಬೋಧಿಸುವ ಹೊರೆಯಿದೆ. ಎಲ್ಲ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಯಾದರೆ ಉತ್ತಮ. ಇದರಿಂದ ಕ್ರೀಡೆಯನ್ನೂ ಪ್ರೋತ್ಸಾಹಿಸಿದಂತಾಗುತ್ತದೆ.
-ಆನಂದ ಪೂಜಾರಿ, ಅಧ್ಯಕ್ಷರು, ಕಾರ್ಕಳ ತಾ. ದೈ. ಶಿ. ಶಿಕ್ಷಕರ ಸಂಘ

Advertisement

ಕಡ್ಡಾಯ ನೇಮಕ
ಗ್ರಾಮೀಣ ಸರಕಾರಿ ಶಾಲೆಗಳಲ್ಲಿ ಕ್ರೀಡಾಸಕ್ತ ವಿದ್ಯಾರ್ಥಿಗಳು ಇರುತ್ತಾರೆ. ಇವರಿಗೆ ಉತ್ತಮ ತರಬೇತಿ ನೀಡಿದರೆ, ಉನ್ನತ ಮಟ್ಟಕ್ಕೇರಬಹುದು. ಆದ್ದರಿಂದ ಶಾಲೆಗಳಲ್ಲಿ ದೈ. ಶಿ. ಶಿಕ್ಷಕರ ಅನಿವಾರ್ಯತೆ ಇದೆ. ಕಾರ್ಕಳ ತಾ. ನ ವಿದ್ಯಾರ್ಥಿಗಳು ಈಗಾಗಲೇ ಕ್ರೀಡಾರಂಗದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೇರಿದ್ದಾರೆ. ಆದ್ದರಿಂದ ಸರಕಾರ ಪ್ರಾ. ಶಾಲೆಗಳಿಗೆ ಕಡ್ಡಾಯವಾಗಿ ಶಿಕ್ಷಕರನ್ನು ನೇಮಿಸಬೇಕಿದೆ.
-ಸಿದ್ದಪ್ಪ, ತಾ. ದೈ.ಶಿ. ಪರಿವೀಕ್ಷಣಾಧಿಕಾರಿ ಕಾರ್ಕಳ

– ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next