Advertisement
“ಉದಯವಾಣಿ’ ಜನಮನದ ಜೀವನಾಡಿಯಾದರೆ ಏಜೆಂಟರು ಮತ್ತು ವಿತರಕರೇ ಉದಯವಾಣಿಯ ಜೀವನಾಡಿ. ಬೆಳಗ್ಗಿನ ಸಿಹಿನಿದ್ರೆಯನ್ನು ತ್ಯಾಗ ಮಾಡಿ ದುಡಿಯುತ್ತಿರುವ ನೀವೇ ನಮ್ಮ ಹೆಮ್ಮೆಯಾಗಿದ್ದೀರಿ. ಯಾವುದೇ ಕ್ಲಿಷ್ಟ ಸಂದರ್ಭದಲ್ಲಿಯೂ ಪಾವತಿಯಲ್ಲಿಯೂ ಜಾಗರೂಕತೆ ವಹಿಸಿ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೀರಿ. ಸಂಸ್ಥೆಯು ಈಗಿರುವ 3.5 ಲಕ್ಷ ಪ್ರಸರಣವನ್ನು ಇನ್ನಷ್ಟು ಹೆಚ್ಚಿಸಲು 2017-18ರಲ್ಲಿ ಕಾರ್ಯ ಯೋಜನೆ ಹಾಕಿಕೊಂಡಿದೆ. ನಿಮ್ಮ ಸಹಕಾರ ನಿರಂತರವಾಗಿ ಇರಲಿ ಎಂದು ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಡಿಜಿಎಂ (ಹಣಕಾಸು) ಸುದರ್ಶನ್ ಶೇರಿಗಾರ್ ಹೇಳಿದರು.
ದೇಶದ ಅಭಿವೃದ್ಧಿಯಲ್ಲಿ ಕರಾವಳಿಯ ಅಭಿವೃದ್ಧಿಯೂ ಸೇರಿಕೊಂಡಿದೆ. ಇದರಲ್ಲಿ ಏಜೆಂಟರು, ವಿತರಕರ ಕೊಡುಗೆ ಅಪಾರ. ಸ್ವಾರ್ಥಪರ ಸಮಾಜದ ನಡುವೆ ಪತ್ರಿಕೆಯನ್ನು ಓದುಗರಿಗೆ ತಲುಪಿಸಬೇಕೆಂಬ ನಿಮ್ಮ ತಾಳ್ಮೆ, ಬದ್ಧತೆ ವರ್ಣಿಸಲು ಸಾಧ್ಯವಿಲ್ಲ. ಏಜೆಂಟರು, ವಿತರಕರು ಉದಯವಾಣಿಯ ಎಲ್ಲ ಸುಖಕಷ್ಟಗಳಲ್ಲಿ ಸಹಭಾಗಿಗಳು ಎಂದು ನ್ಯಾಶನಲ್ ಹೆಡ್ (ಮ್ಯಾಗಜಿನ್ಸ್ ಆ್ಯಂಡ್ ಸ್ಪೆಶಲ್ ಇನೀಶಿಯೇಟಿವ್ಸ್) ರಾಮಚಂದ್ರ ಮಿಜಾರು ಹೇಳಿದರು. ಪತ್ರಿಕೆಯನ್ನು ವಿತರಿಸಿ ಬಂದ ಆದಾಯದಿಂದ ಕಲಿತು ರ್‍ಯಾಂಕ್ ಪಡೆದ ಉದಾಹರಣೆ ಬೆಂಗಳೂರು ಆರ್‌ಟಿ ನಗರದಲ್ಲಿದೆ ಎಂದರು. ಎಜಿಎಂ (ವ್ಯಾಪಾರ ಅಭಿವೃದ್ಧಿ) ಸತೀಶ್ ಶೆಣೈ ಸ್ವಾಗತಿಸಿ, ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಆನಂದ್ ಕೆ. ವಂದಿಸಿದರು. ಸಂಪಾದಕ ಎ.ವಿ. ಬಾಲಕೃಷ್ಣ ಹೊಳ್ಳ ಉಪಸ್ಥಿತರಿದ್ದರು.
ಪ್ರಸರಣ ವಿಭಾಗದ ಸೀನಿಯರ್ ಎಕ್ಸಿಕ್ಯೂಟಿವ್ ಪ್ರಕಾಶ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಪತ್ರಿಕಾ ಏಜೆಂಟರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.