Advertisement

ಸಿದ್ದರಾಮಯ್ಯ ಸಮರ್ಥನೆ ತಪ್ಪೆಂದ ಶಾಸಕ,ತಾನು ತಪ್ಪುಮಾಡಿಲ್ಲ ಎಂದ ಎಸ್ ಐ:ಏನಿದು ಕಾರ್ಕಳ ಘಟನೆ?

02:49 PM Jul 09, 2021 | Team Udayavani |

ಮಣಿಪಾಲ: ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ವಿಚಾರಣೆ ನೆಪದಲ್ಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ವಿಚಾರ ಇದೀಗ ರಾಜಕೀಯ ಬಣ್ಣ ಪಡೆಯುತ್ತಿದೆ. ಕಾಂಗ್ರೆಸ್- ಬಿಜೆಪಿ ನಾಯಕರ ಆರೋಪ- ಪ್ರತ್ಯಾರೋಪಗಳಿಗೆ ಕೇಳಿಬರುತ್ತಿದೆ.

Advertisement

ಏನಿದು ಘಟನೆ: ರಾಧಾಕೃಷ್ಣ ಹಿರ್ಗಾನ ಎಂಬಾತ ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ಯೋಧರ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಕೆಲವರು ಇದರ ಬಗ್ಗೆ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಕಾರ್ಕಳ ಟೌನ್ ಪೊಲೀಸರು ವಿಚಾರಣೆಗೆ ಕರೆದಿದ್ದರು. ಆದರೆ ರಾಧಾಕೃಷ್ಣ ಹಿರ್ಗಾನ ಪೊಲೀಸರು ತನಿಖೆಗೆ ಹಾಜರಾಗುತ್ತಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:ಸುಳ್ಳು ಕೇಸ್ ಆಧರಿಸಿ ಕಾರ್ಕಳ ಕೈ ಕಾರ್ಯಕರ್ತನ ಮೇಲೆ ಪೊಲೀಸರಿಂದ ದೌರ್ಜನ್ಯ: ಸಿದ್ದರಾಮಯ್ಯ

ಆದರೆ ಗುರುವಾರ ರಾಧಾಕೃಷ್ಣ ಹಿರ್ಗಾನರನ್ನು ಠಾಣೆಗೆ ಕರೆಸಿದ ಕಾರ್ಕಳ ಟೌನ್ ಎಸ್ ಐ ಮಧು ಅವರಿಗೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಅವರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಸತ್ಯಕ್ಕೆ ದೂರವಾದ ವಿಚಾರ: ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾರ್ಕಳ ಎಸ್ ಐ ಮಧು, ಆತ ನಮ್ಮ ವಿಚಾರಣೆಗೆ ಸಹಕಾರ ನೀಡಿಲ್ಲ, ಹೀಗಾಗಿ ನಾವು ಗದರಿಸಿದ್ದು ಹೌದು, ಆದರೆ ಹೊಡೆದಿಲ್ಲ. ಈ ಆರೋಪಗಳು ಸತ್ಯಕ್ಕೆ ದೂರವಾದವು ಎಂದಿದ್ದಾರೆ.

Advertisement

ನಮ್ಮ ತನಿಖೆಯ ಹಾದಿಯಲ್ಲಿ ಎಲ್ಲೂ ತಪ್ಪು ಮಾಡಿಲ್ಲ. ನಾವು ಆತನಿಗೆ ಹೊಡೆದಿಲ್ಲ. ಕಾನೂನಾತ್ಮಕವಾಗಿ ನಾವು ಸರಿ ಇದ್ದೇವೆ. ನಾವು ಯಾರ ಪರ ಅಥವಾ ವಿರೋಧವಾಗಿ ಕೆಲಸ ಮಾಡಿಲ್ಲ. ಆತನ ದೇಶದ ಯೋಧರ ಬಗ್ಗೆ ಅವಮಾನಕಾರಿಯಾಗಿ ಪೋಸ್ಟ್ ಹಾಕಿದ್ದ, ಅದಕ್ಕಾಗಿ ತನಿಖೆಗೆ ಕರೆದಿದ್ದೇವೆ ಎಂದು ಎಸ್ ಐ ಮಧು ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ ಖಂಡನೆ- ಸುನೀಲ್ ತಿರುಗೇಟು: ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇವರ ಅನಾರೋಗ್ಯವನ್ನೂ‌ ಲೆಕ್ಕಿಸದೆ, ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಟ್ವೀಟ್ ಗೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಟ್ವಿಟರ್ ನಲ್ಲೇ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಜಾಲತಾಣದಲ್ಲಿ ಈ ಹಿಂದೆ ಯಾವ ಪೋಸ್ಟ್ ಹಾಕಿದ್ದಾನೆ ಎಂಬ ಅರಿವಿಲ್ಲದೆ ಸಿದ್ದರಾಮಯ್ಯ ಸಮರ್ಥಿಸಿರುವುದು ಅವರ ಬದ್ಧತೆಯನ್ನು ಪ್ರಶ್ನಿಸುತ್ತದೆ. ಸಮರ್ಥಿಸುವ ಭರದಲ್ಲಿ ಸೈನಿಕರನ್ನು ಸಿದ್ದರಾಮಯ್ಯ ಅವಮಾನಿಸುತ್ತಿದ್ದಾರೆ. ದೇಶದ್ರೋಹಿ ವ್ಯಕ್ತಿಯನ್ನು ಬೆಂಬಲಿಸುವುದು ನಾಚಿಕೆಗೇಡಿನ ಸಂಗತಿ ಎಂದು ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

“ದೇಶದ್ರೋಹ ಎಂದರೇನು ಎಂದು ಸಿದ್ದರಾಮಯ್ಯರಿಂದ ಪ್ರತ್ಯೇಕವಾಗಿ ಕೇಳಬೇಕಿಲ್ಲ. ಅವರು ಸಿಎಂ ಆಗಿದ್ದಾಗ ದೇಶದ್ರೋಹದ ಹೇಳಿಕೆ ಕೊಡುವಂತವರನ್ನು ಜೊತೆಯಲ್ಲಿಟ್ಟುಕೊಂಡೆ ಕೆಲಸ ಮಾಡಿದವರು. ಅದು ನಿಮ್ಮ ಕಾಲ. ಸೈನಿಕರು, ಸೈನ್ಯದ ಬಗ್ಗೆ ದೇಶದ್ರೋಹದ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಈಗ ಕಾರ್ಕಳದಲ್ಲಿ ಪೊಲೀಸ್ ಬಂಧಿಸಿದೆ. ಇದು ನಮ್ಮ ಕಾಲ. ಅತ್ತಂತೆ ನಟಿಸುವವರ ಸಮರ್ಥನೆಗೆ ನೀವು ಬೇಗ ಬರುತ್ತಿರಿ ಎಂದು ಶಾಸಕರು ತಿರುಗೇಟು ನೀಡಿದ್ದಾರೆ.

ಕೆಜೆ ಹಳ್ಳಿ ಗಲಭೆ – ನಿಮ್ಮ ಸಮರ್ಥನೆ, ಮಂಗಳೂರು ಗಲಭೆ- ನಿಮ್ಮ ಸಮರ್ಥನೆ, ಬೆಂಗಳೂರಿನ ಗೌರಿಪಾಳ್ಯದಲ್ಲಿ ವೈದ್ಯರ ಮೇಲೆ ಹಲ್ಲೆ – ನಿಮ್ಮ ಸಮರ್ಥನೆ,  ಹಿಂದು ಕಾರ್ಯಕರ್ತರ ಕಗ್ಗೊಲೆ – ನಿಮ್ಮ ಸಮರ್ಥನೆ, ಕೊಲೆಗಡುಕ ಎಸ್ ಡಿ ಪಿಐ, ಪಿಎಫ್ ಐ ಸಂಘಟನೆ – ನಿಮ್ಮ ಸಮರ್ಥನೆ ಎಂದು ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next