Advertisement
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಪರಶುರಾಮ ಮೂರ್ತಿ ಪ್ರತಿಷ್ಠಾಪನೆಗೆ ಕಾರಣರಾದ ಶಾಸಕ ಸುನೀಲ್ ಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರ ಹಾಗೂ ನಕಲಿ ಪರಶುರಾಮ ಪ್ರತಿಮೆ ನಿರ್ಮಾಣದ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲ ಹೆಬ್ಬಾಳ್ಕರ್ ಪ್ರತಿಭಟನಾನಿರತರ ಉದ್ದೇಶಿಸಿ ಮಾತನಾಡಿ, ನಕಲಿ ಪರಶುರಾಮ ಮೂರ್ತಿ ಸ್ಥಾಪಿಸುವ ಮೂಲಕ ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಸುಳ್ಳನ್ನ ನೂರು ಬಾರಿ ಹೇಳಿ ನಿಜ ಮಾಡುವ ಕಲೆ ಸುನೀಲ್ ಕುಮಾರ್ ಅವರಿಗಿದೆ. ಕೇವಲ 3 ತಿಂಗಳಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಕಂಚಿನ ಪರಶುರಾಮ ಪ್ರತಿಮೆ ನಿರ್ಮಿಸಲಾಗಿದೆ. ಇಂತಹ ಪ್ರತಿಮೆಗಳನ್ನು ನಿರ್ಮಿಸುವಾಗ ವರ್ಷಾನುಗಟ್ಟಲೆ ಸಮಯ ಹಿಡಿಯುತ್ತದೆ. ಚುನಾವಣೆಗಾಗಿ ಕೇವಲ 3 ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಸಿದ್ದು ಕೇಳಿ ಆಶ್ಚರ್ಯ ಉಂಟಾಯಿತು. ಪರಶುರಾಮನ ನಕಲಿ ಪ್ರತಿಮೆ ಸ್ಥಾಪಿಸಿ ಜನರ ದಿಕ್ಕನ್ನು ತಪ್ಪಿಸುತ್ತಿರುವ ಸುನೀಲ್ ಕುಮಾರ್ ಮಾಡಿದ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದು ಟೀಕಾ ಪ್ರಹಾರ ನಡೆಸಿದರು.
Related Articles
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ತು ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಕಾರ್ಕಳದಲ್ಲಿ ಧರ್ಮದ ಹೆಸರಿನಲ್ಲಿ ಉದ್ಘಾಟನೆಗೊಂಡ ಪರಶುರಾಮನ ಪ್ರತಿಮೆ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ವಿಗ್ರಹವನ್ನು ಉದ್ಘಾಟನೆ ಮಾಡುವುದು ಬೇಡ ಎಂದು ಹೇಳಿದರೂ ಹಿಂದಿನ ಸರ್ಕಾರದ ಒತ್ತಾಯದ ಮೇರೆಗೆ ಮಾಡಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ನೈಜತೆಯಲ್ಲಿ ರಾಜಕಾರಣ ಮಾಡೋಣ. ಕೇವಲ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬೇಕೆಂದು ಧರ್ಮ ಮುಂದಿಟ್ಟು ಮತ ಕೇಳಬೇಡಿ ಎಂದರು.
Advertisement
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜ, ಕಾಂಗ್ರೆಸ್ ಮುಖಂಡರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಳ್, ಮಿಥುನ್ ರೈ, ದಿನೇಶ್ ಹೆಗ್ಡೆ ಮೊಳಹಳ್ಳಿ, ಸುಧೀರ್ ಕುಮಾರ್ ಮೊರಳ್ಳಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಹರೀಶ್ ಕುಮಾರ್, ಕಿಶನ್ ಹೆಗ್ಡೆ, ಕಿರಣ್ ಹೆಗ್ಡೆ, ರಮೇಶ್ ಕಾಂಚನ್, ಕೃಪಾ ಆಳ್ವ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.