Advertisement

Karkala: ಬೀದಿ ವ್ಯಾಪಾರಿಗಳಿಂದ ಸುಗಮ ಸಂಚಾರಕ್ಕೆ ಅಡ್ಡಿ

01:18 PM Dec 24, 2024 | Team Udayavani |

ಕಾರ್ಕಳ: ಪುರಸಭೆ ವ್ಯಾಪ್ತಿ ಕೆಲವು ಮುಖ್ಯ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಮತ್ತು ರಸ್ತೆ ಬದಿಯಲ್ಲಿಯೇ ವ್ಯಾಪಾರಿಗಳು ಬೀಡು ಬಿಟ್ಟಿದ್ದು, ಇದರಿಂದಾಗಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಸುಗಮ ಸಂಚಾರಕ್ಕೆ ತೊಂದರೆಯಾಗುವಲ್ಲಿ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಪುರಸಭೆ ಸದಸ್ಯರು ಒತ್ತಾಯಿಸಿದ್ದಾರೆ. ಸೋಮವಾರ ಪುರಸಭೆ ಅಧ್ಯಕ್ಷ ಯೋಗೀಶ್‌ ದೇವಾಡಿಗ ಅಧ್ಯಕ್ಷತೆಯಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ಪುರಸಭೆ ವ್ಯಾಪ್ತಿ ಸುಗಮ ಸಂಚಾರ ವ್ಯವಸ್ಥೆ ಮತ್ತು ಪಾದಚಾರಿಗಳ ಓಡಾಟಕ್ಕೆ ಆಗುತ್ತಿರುವ ಸಮಸ್ಯೆ ಬಗ್ಗೆ ಸದಸ್ಯೆ ಪ್ರಭಾ ಅವರು ವಿಷಯ ಪ್ರಸ್ತಾವಿಸಿದರು.

Advertisement

ಎಲ್‌ವಿಟಿಯಿಂದ ಮುಂದಕ್ಕೆ ಗ್ಯಾಲಾಕಿ ಸಭಾಂಗಣವರೆಗೂ ಬೀದಿ ವ್ಯಾಪಾರಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ. ಈ ಪರಿಸರ ತುಂಬ ಇಕ್ಕಟ್ಟಾಗಿದ್ದು, ಟ್ರಾಫಿಕ್‌ ಜಾಮ್‌ ಮತ್ತು ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದರು.

ಇದಕ್ಕೆ ಸದಸ್ಯರಾದ ಶುಭದ್‌ ರಾವ್‌, ಸೋಮನಾಥ್‌, ಪ್ರತಿಮಾ, ರೆಹಮತ್‌, ಸುಮಾ ಕೇಶವ್‌, ಹರೀಶ್‌, ದನಿಗೂಡಿಸಿ ಈ ಬಗ್ಗೆ ಪೊಲೀಸ್‌ ಇಲಾಖೆ, ಪುರಸಭೆ ಆಡಳಿತ ವ್ಯವಸ್ಥಿತವಾಗಿ ಕ್ರಮರೂಪಿಸಬೇಕಿದೆ ಎಂದರು.

ಈಗಾಗಲೇ ಮಾರುಕಟ್ಟೆ ಪ್ರದೇಶದಲ್ಲಿ ಸಕಲ ಮೂಲ ಸೌಕರ್ಯ ಸರಿಪಡಿಸಬೇಕು. ವ್ಯಾಪಾರಿಗಳ ಬದುಕಿಗೂ ಸಮಸ್ಯೆಯಾಗದಂತೆ ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗದಂತೆ ಕ್ರಮವಾಗಬೇಕಿದೆ ಎಂದು ಆಗ್ರಹಿಸಿದರು.

ಸಮಸ್ಯೆಯಾಗದಂತೆ ಕಾರ್ಯಾಚರಣೆ
ಈಗಾಗಲೇ ಮಾರಿಗುಡಿ ಸಮೀಪ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ವ್ಯಾಪಾರಿಗಳನ್ನು ತೆರವುಗೊಳಿಸಿದ್ದೇವೆ. ಮುಂದೆಯೂ ಸುಗಮ ಸಂಚಾರಕ್ಕೆ ಸಮಸ್ಯೆಯಾಗದಂತೆ ಪೊಲೀಸ್‌ ಇಲಾಖೆ ಸಹಕಾರದಲ್ಲಿ ಪುರಸಭೆ ಕಾರ್ಯಾಚರಣೆ ನಡೆಸಲಿದೆ ಎಂದು ಮುಖ್ಯಾಧಿಕಾರಿ ರೂಪಾ ಶೆಟ್ಟಿ ತಿಳಿಸಿದರು.

Advertisement

ಅಡ್ಡಾದಿಡ್ಡಿ ವಾಹನ ಓಡಾಟ ಸಹಿತ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಓಡಿಸುವ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದಲೂ ಸುಗಮ ಸಂಚಾರ ಸಮಸ್ಯೆಯಾಗುತ್ತಿದೆ ಎಂದು ಪ್ರತಿಮಾ ಹೇಳಿದರು.

ನಿಯಮ ಉಲ್ಲಂ ಸುವ, ಅಡ್ಡಾದಿಡ್ಡಿ ವಾಹನ ಸಂಚಾರ, ಪಾರ್ಕಿಂಗ್‌ ಸಹಿತ, ಸುಗಮ ಸಂಚಾರ ವ್ಯವಸ್ಥೆಗೆ ಅಡ್ಡಿ ಉಂಟು ಮಾಡುವ ವಾಹನ ಚಾಲಕರು, ವ್ಯಾಪಾರಿಗಳ ವಿರುದ್ಧ ಸೂಕ್ತಕ್ರಮ ತೆಗೆದುಕೊಳ್ಳಬೇಕು ಎಂದು ಅಧ್ಯಕ್ಷ ಯೋಗೀಶ್‌ ದೇವಾಡಿಗ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದರು. ಎಎಸ್‌ಐ ರತ್ನಾಕರ್‌ ಪ್ರತಿಕ್ರಿಯಿಸಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗದಂತೆ ಪೊಲೀಸ್‌ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದರು. ಉಪಾಧ್ಯಕ್ಷ ಪ್ರಶಾಂತ್‌ ಕೋಟ್ಯಾನ್‌ ಉಪಸ್ಥಿತರಿದ್ದರು.

ರಾಮ ಸಮುದ್ರಕ್ಕೆ ಕಲುಷಿತ ನೀರು ಬಿಡುವರ ವಿರುದ್ಧ ಕ್ರಮ
ರಾಮ ಸಮುದ್ರ ಕೆರೆಗೆ ಕಲುಷಿತ ನೀರು ಬಿಡುತ್ತಿರುವ ಬಗ್ಗೆ ಈಗಾಗಲೇ ಕಳೆದ ಸಭೆಯಲ್ಲಿಯೂ ಗಂಭೀರ ಚರ್ಚೆಯಾಗಿದ್ದು, ಯಾವ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶುಭದ್‌ ರಾವ್‌ ವಿಷಯ ಪ್ರಸ್ತಾವಿಸಿದರು. ಈಗಾಗಲೇ ಅಧಿಕಾರಿಗಳ ಸಮಿತಿ ಪರಿಶೀಲನೆ ನಡೆಸಿ ವರದಿಯನ್ನು ತಯಾರಿಸಿದ್ದು, ಕಲುಷಿತ ನೀರು ಬಿಡುವರ ವಿರುದ್ಧ ನೋಟಿಸ್‌ ನೀಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಯೋಗೀಶ್‌ ದೇವಾಡಿಗ, ರೂಪಾ ಶೆಟ್ಟಿ ಪ್ರತಿಕ್ರಿಯೆ ನೀಡಿದರು. ನೋಟಿಸ್‌ ನೀಡುವ ಕ್ರಮ ಬಿಟ್ಟು ಕಲುಷಿತ ನೀರು ಸಂಪರ್ಕ ಪೈಪುಗಳನ್ನೇ ಬಂದ್‌ ಮಾಡಿಸುವಂತೆ ಕ್ರಮ ತೆಗೆದುಕೊಳ್ಳಿ ಎಂದು ಅಶ್ಫಕ್‌ ಅಹಮ್ಮದ್‌, ವಿನ್ನಿ ಬೋಲ್ಡ್‌ ಒತ್ತಾಯಿಸಿದರು.

ಅರಣ್ಯ ಇಲಾಖಾಧಿಕಾರಿಗೆ ನೊಟೀಸ್‌
ಮೆಸ್ಕಾಂ ವ್ಯಾಪ್ತಿ ಸಂಬಂಧಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್‌ ತಂತಿಗೆ ಅಡ್ಡಲಾಗಿರುವ ಅಪಾಯಕಾರಿ ಮರಗಿಡ ಮತ್ತು ಗೆಲ್ಲುಗಳ ತೆರವು ಮಾಡುವಂತೆ ಸದಸ್ಯರಾದ ಮಮತಾ, ಪ್ರತಿಮಾ ವಿಷಯ ಪ್ರಸ್ತಾವಿಸಿದರು. ಗೆಲ್ಲು ತೆರವು ಮೆಸ್ಕಾಂ ವತಿಯಿಂದ ಮಾಡಬಹುದು. ಮರ ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ಬೇಕಾಗುತ್ತದೆ ಎಂದು ಮೆಸ್ಕಾಂ ಎಂಜಿನಿಯರ್‌ ಸುನೀಲ್‌ ದೇವಾಡಿಗ ತಿಳಿಸಿದರು. ಅರಣ್ಯ ಇಲಾಖೆ ಅಧಿಕಾರಿ ಅನುಪಸ್ಥಿತಿ ಬಗ್ಗೆ ಅಧ್ಯಕ್ಷ ಯೋಗೀಶ್‌ ದೇವಾಡಿಗ ಸಹಿತ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಸಂಬಂಧಪಟ್ಟವರಿಗೆ ನೋಟೀಸ್‌ ನೀಡಿ, ಈ ಬಗ್ಗೆ ಸಭೆಯ ನಿರ್ಣಯ ತೆಗೆದುಕೊಂಡು ಜಿಲ್ಲಾಧಿಕಾರಿಗಳಿಗೆ ವರದಿ ಮುಟ್ಟಿಸುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಟ್ರೇಡ್‌ ಲೈಸೆನ್ಸ್‌ ಜಟಾಪಟಿ
ದೇವಸ್ಥಾನಗಳ ಸಭಾ ಭವನಕ್ಕೆ ಟ್ರೇಡ್‌ ಲೈಸೆನ್ಸ್‌ ನವೀಕರಣ ನೊಟೀಸ್‌ ಹೊರಡಿಸಿದ ಬಗ್ಗೆ ಸದಸ್ಯರ ನಡುವೆ ವಾಗ್ವಾದ, ಮಾತಿನ ಜಟಾಪಟಿ ನಡೆಯಿತು. ಟ್ರೇಡ್‌ ಲೈಸೆನ್ಸ್‌ ನಿಯಮಾವಳಿಯಿಂದ ಧಾರ್ಮಿಕ ಸ್ಥಳಗಳ ಸಭಾ ಭವನ ವ್ಯಾಪ್ತಿಯಿಂದ ಹೊರಗಿಡುವಂತೆ ಮತ್ತು ನೊಟೀಸ್‌ ನೀಡಿದ ಅಧಿಕಾರಿಗಳ ಕ್ರಮವನ್ನು ಸದಸ್ಯರಾದ ಪ್ರಭಾ, ನಳಿನಿ ಆಚಾರ್ಯ, ಪ್ರದೀಪ್‌ ಖಂಡಿಸಿದರು. ಸದಸ್ಯ ಅಶ³ಕ್‌ ಅಹಮ್ಮದ್‌ ಅವರು ಪ್ರತಿರೋಧ ವ್ಯಕ್ತಪಡಿಸಿ, ವಕ್ಫ್ ಆಸ್ತಿ ಮಸೀದಿ ಕಟ್ಟಡಕ್ಕೂ ನೊಟೀಸ್‌ ನೀಡಿದ್ದಾರೆ. ಹಾಗೆಂದು ಅಧಿಕಾರಿಗಳ ಕ್ರಮವನ್ನು ಖಂಡಿಸಲು ಸಾಧ್ಯವಿಲ್ಲ. ಪುರಸಭೆ ನಿಯಮಾವಳಿಯಂತೆ ಕಾನೂನು ರೀತಿ ಕ್ರಮ ತೆಗೆದುಕೊಂಡಿದ್ದಾರೆ. ಧಾರ್ಮಿಕ ಸಭಾ ಭವನಗಳ ಟ್ರೇಡ್‌ ಲೈಸೆನ್ಸ್‌ ನಿಯಮಾವಳಿ ಪರಿಶೀಲಿಸುವಂತೆ ಸಭೆಯಲ್ಲಿ ನಿರ್ಣಯಿಸಿ ಸರಕಾರಕ್ಕೆ ವರದಿ ಮಾಡುವ ಬಗ್ಗೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next