ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ಪ್ರಥಮ ಪ್ರಾಂಶುಪಾಲರಾಗಿದ್ದ ದಾಮೋದರ ಕಿಣಿ ಅವರ ವ್ಯಕ್ತಿತ್ವ ಮತ್ತು ಆಸಕ್ತಿಗಳು ವಿದ್ಯಾರ್ಥಿಗಳ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರಿವೆ. ಅವರ ನಡೆನುಡಿ, ಪ್ರಾಮಾಣಿಕತೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಇ ಮಾರ್ಕ್ ಲಿಮಿಟೆಡ್‌ನ ಹಣಕಾಸು ನಿರ್ದೇಶಕ ಸಿಎ ರೆಂಜಾಳ ಲಕ್ಷ್ಮಣ ಶೆಣೈ ಹೇಳಿದರು.
ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಪೊ.ಕೆ. ದಾಮೋದರ್ ಕಿಣಿ ಸ್ಮಾರಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುವೆಂಪು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ಬರಹಗಾರ ಡಾ| ಶ್ರೀಕಾಂತ್ ಕುಡಿಗೆ ಮಾತನಾಡಿ, ನಾಡನ್ನು ಕಟ್ಟಲು ಸಹಾಯ ಮಾಡಿದಂತಹ ಅನೇಕ ಸಾಧಕರು ಕಣ್ಣಿಗೆ ಕಾಣುವುದು ಅಪರೂಪ. ಅಂತಹ ಅಪರೂಪ ವ್ಯಕ್ತಿಗಳಲ್ಲಿ ದಾಮೋದರ ಕಿಣಿಯವರು ಕೂಡ ಒಬ್ಬರು ಎಂದರು.
ಈ ಬಾರಿ ರ್‍ಯಾಂಕ್ ಗಳಿಸಿದ ಕಾಲೇಜಿನ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಪ.ಪೂ. ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್.ಸಿ, ಸಿ.ಎ. ಶಿವಾನಂದ ಪೈ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿ ಅದ್ಯಕ್ಷ ಅನಂತ ಪೈ ಸ್ವಾಗತಿಸಿ, ಪ್ರಾಂಶುಪಾಲ ಡಾ| ಮಂಜುನಾಥ ಎ. ಕೋಟ್ಯಾನ್ ವಂದಿಸಿದರು. ವಾಣಿಜ್ಯ ವಿಭಾಗ ಉಪನ್ಯಾಸಕ ನಂದಕಿಶೋರ್ ನಿರೂಪಿಸಿದರು.
ಸ್ವಚ್ಛತೆ, ಶಿಸ್ತಿಗೆ ಮಹತ್ವ
ದಾಮೋದರ ಕಿಣಿಯವರು ಸಮಯ, ಕಾಲ, ಸ್ವಚ್ಛತೆ, ಶಿಸ್ತಿಗೆ ಹೆಚ್ಚು ಮಹಣ್ತೀ ನೀಡಿ ಎಲ್ಲ ಕಾಲಕ್ಕೂ ಮಾರ್ಗದರ್ಶನ ನೀಡುತ್ತಿದ್ದರು.
– ಡಾ| ಶ್ರೀಕಾಂತ್ ಕುಡಿಗೆ, ಕುವೆಂಪು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್