Advertisement

Karkala: ಪರಶುರಾಮನ ಪ್ರತಿಮೆ ಬಿಡಿಭಾಗ ಬೆಂಗಳೂರಿನಲ್ಲಿ ಜಪ್ತಿ

01:34 AM Aug 05, 2024 | Team Udayavani |

ಕಾರ್ಕಳ: ಕಾರ್ಕಳದ ಬೈಲೂರು ಉಮಿಕ್ಕಳ ಬೆಟ್ಟದ ಮೇಲಿನ ಪರಶುರಾಮ ಥೀಂ ಪಾರ್ಕ್‌ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

Advertisement

ನಕಲಿ ಪ್ರತಿಮೆ ಎನ್ನುವ ದೂರಿನ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ಸಂಬಂಧ ಕಾರ್ಕಳ ನಗರ ಠಾಣೆ ಪೊಲೀಸರು ಆ.3ರಂದು ಪರಶುರಾಮ ಪ್ರತಿಮೆ ನಿರ್ಮಿಸಿದ ಕ್ರಿಷ್‌ ಆರ್ಟ್‌ ವರ್ಲ್ಡ್ ಮಾಲಕ ಕೃಷ್ಣ ನಾಯ್ಕ ಅವರಿಗೆ ಸೇರಿದ ಬೆಂಗಳೂರಿನ ಕೆಂಗೇರಿ ಬಳಿಯ ಗೋಡೌನ್‌ನಲ್ಲಿ ಸ್ಥಳ ಮಹಜರು ನಡೆಸಿ ಮೂರ್ತಿಯ ಸೊಂಟದ ಮೇಲಿನ ಸುಮಾರು 9 ಟನ್‌ ತೂಕದ ಪ್ರತಿಮೆಯ ಬಿಡಿಭಾಗಗಳನ್ನು ವಶಕ್ಕೆ ಪಡೆದು ಕಾರ್ಕಳಕ್ಕೆ ತಂದಿದ್ದಾರೆ.

ಪೊಲೀಸರು ಸ್ಥಳ ತನಿಖೆಗೆ ತೆರಳಿದ ಸಂದರ್ಭ ಶಿಲ್ಪಿ ಕೃಷ್ಣ ನಾಯ್ಕ ಅವರು ಫೇಸ್‌ಬುಕ್‌ ಲೈವ್‌ಗೆ ಬಂದು ಯಾವುದೇ ನೊಟೀಸ್‌ ನೀಡದೆ ಮೂರ್ತಿಯ ಭಾಗಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಅನ್ಯ ಮತೀಯ ವ್ಯಕ್ತಿಗಳು ಬಿಡಿಭಾಗಗಳನ್ನು ಅಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ಶಿಲ್ಪಿಯ ಮನೆಗೆ ತೆರಳಿದ ಕಾರ್ಕಳ ಕಾಂಗ್ರೆಸ್‌ ಮುಖಂಡ ಉದಯಕುಮಾರ್‌ ಶೆಟ್ಟಿ ಮುನಿಯಾಲು ದಬ್ಟಾಳಿಕೆ ನಡೆಸಿ, ಜಾತಿ ಹೆಸರಲ್ಲಿ ಅವಮಾನಿಸಿದ ಬಗ್ಗೆಯೂ ಹೇಳಿ ಕೊಂಡಿದ್ದಾರೆ. ಪೊಲೀಸರೂ ದೌರ್ಜನ್ಯ ಎಸಗಿದ್ದಾರೆಂದು ಶಿಲ್ಪಿ ದೂರಿದ್ದಾರೆ.

ಕಾನೂನು ಉಲ್ಲಂಘನೆ ಆಗಿದ್ದರೆ ಪರಿಶೀಲನೆ: ಎಸ್‌ಪಿ
ಈ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ಪ್ರಸಾರವಾಗಿದ್ದು, ಈ ಕುರಿತು ಸ್ಪಷ್ಟನೆ ನೀಡಿರುವ ಉಡುಪಿ ಎಸ್ಪಿ ಡಾ| ಅರುಣ್‌ ಅವರು, ಪರಶುರಾಮ ಮೂರ್ತಿಯ ಭಾಗಗಳನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿ ಜಪ್ತಿ ಮಾಡಲಾಗಿದೆ. ಈ ವೇಳೆ ದೂರುದಾರರಿಗೆ ಮಹಜರು ವೇಳೆ ಸಹಿ ಹಾಕಲು ಬರುವಂತೆ ಹೇಳಿದ್ದೆವು. ಅದರಂತೆ ಅವರು ಬಂದಿದ್ದರು.

ಅಲ್ಲದೆ ವಿಗ್ರಹ ನಿರ್ಮಾಣ ಮಾಡುವವರಿಗೂ ಮೊದಲೇ ನೋಟಿಸ್‌ ನೀಡಲಾಗಿತ್ತು. ಜಪ್ತಿ ಮಾಡುವ ಎಲ್ಲ ಪ್ರಕ್ರಿಯೆಗಳನ್ನು ವೀಡಿಯೋ ದಾಖಲಿಸಿಕೊಂಡಿದ್ದೇವೆ. ಈ ಸಂದರ್ಭ ಉಪಸ್ಥಿತರಿದ್ದ ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಬಾಡಿ ಕೆಮರಾ ಧರಿಸಿದ್ದರು. ಹಾಗಿದ್ದರೂ ಈ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿದ್ದರೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

ಪ್ರತಿಮೆ ಕಂಚಿನದ್ದೇ: ಭಾರೀ ಚರ್ಚೆ
ಪೊಲೀಸರು ವಶಪಡಿಸಿಕೊಂಡ ಮೂರ್ತಿಯ ಕಂಚಿನ ಭಾಗಗಳನ್ನು ನಗರ ಠಾಣೆಯ ಶಟಲ್‌ ಕೋರ್ಟ್‌ನಲ್ಲಿ ಸಂಗ್ರಹಿಸಿಡಲಾಗಿದೆ. ಜಪ್ತಿ ಮಾಡ ಲಾದ ಭಾಗಗಳಲ್ಲಿ ಪರಶುರಾಮ ಮೂರ್ತಿಯ ಎರಡು ಕಾಲುಗಳು ಕಾಣಿಸಿಕೊಂಡಿವೆ. ಬೆಟ್ಟದಲ್ಲಿ ಅರ್ಧ ಮೂರ್ತಿಯಲ್ಲಿ ಎರಡು ಕಾಲುಗಳಿದ್ದರೆ, ಇನ್ನೆರಡು ಪೊಲೀಸ್‌ ಠಾಣೆಯಲ್ಲಿವೆ.

ಪರಶುರಾಮನಿಗೆ ನಾಲ್ಕು ಕಾಲುಗಳ್ಳೋ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ. ಬೆಟ್ಟದ ಮೇಲಿನ ಮೂರ್ತಿ ಫೈಬರ್‌ನದ್ದು ಎಂದು ಅಂದು ಕಾಂಗ್ರೆಸ್‌ ಟೀಕಿಸಿ ಫೈಬರ್‌ ಬಿಡಿಭಾಗಗಳನ್ನು ಪ್ರದರ್ಶಿಸಿತ್ತು. ಮೂರ್ತಿಯಲ್ಲಿ ಕೆಲವೊಂದು ಬದಲಾವಣೆಗೆ ಅರ್ಧ ಭಾಗವನ್ನು ಶಿಲ್ಪಿ ಕೊಂಡೊಯ್ದ ಬಗ್ಗೆ ನಿರ್ಮಾಣ ಸಂಸ್ಥೆಯವರು ಸ್ಪಷ್ಟನೆ ನೀಡಿದ್ದರೂ, “ಇದು ಸುಳ್ಳು. ಕಂಚು ಎಲ್ಲಿದೆ’ ಎಂದು ಕಾಂಗ್ರೆಸ್‌ ಪ್ರಶ್ನಿಸಿತ್ತು. ಈಗ ಟನ್‌ಗಟ್ಟಲೆ ಕಂಚನ್ನು ಪೊಲೀಸರು ಜಪ್ತಿ ಮಾಡಿದ್ದರಿಂದ, ಪ್ರತಿಮೆ ಕಂಚಿನದ್ದೇ ಆಗಿತ್ತು. ನಕಲಿ ಅಲ್ಲ ಎನ್ನುವ ಮಾತುಗಳು ಹರಿದಾಡುತ್ತಿವೆ.

ಕುಂಬಳೆ: ಬ್ಯಾಂಕ್‌ ಕಳವಿಗೆ ಯತ್ನ
ಕುಂಬಳೆ: ಕುಂಬಳೆ ಸಹಕಾರಿ ಬ್ಯಾಂಕಿನ ಪೆರುವಾಡು ಶಾಖೆಯಿಂದ ಶನಿವಾರ ಕಳವು ನಡೆಸಲು ಯತ್ನಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಎರಡಂತಸ್ತಿನ ಕಟ್ಟಡದಲ್ಲಿ ಬ್ಯಾಂಕ್‌ ಕಾರ್ಯಾಚರಿಸುತ್ತದೆ. ಎಲೆಕ್ಟ್ರಿಕ್‌ ಕಟ್ಟರ್‌ ಬಳಸಿ ಕಟ್ಟಡದ ಬದಿಯಲ್ಲಿರುವ ಕಿಟಿಕಿಯ ಕಬ್ಬಿಣ ರೋಡ್‌ ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದರು.

ಕಟ್ಟರ್‌ಗೆ ಬ್ಯಾಂಕ್‌ನಿಂದಲೇ ವಿದ್ಯುತ್‌ ಸಂಪರ್ಕ ಪಡೆಯಲಾಗಿತ್ತು. ಘಟನೆ ಸಂದರ್ಭದಲ್ಲಿ ಬ್ಯಾಂಕ್‌ನ ವಾಚ್‌ಮೆನ್‌ ಕೊಠಡಿಯಲ್ಲಿ ನಿದ್ದೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬ್ಯಾಂಕ್‌ನ ಹೊರಗೆ ಹಾಗೂ ಒಳಗೆ ಮೆಣಸಿನ ಹುಡಿ ಹಾಕಲಾಗಿದೆ. ಶ್ವಾನ ದಳ ಪತ್ತೆಹಚ್ಚುವುದನ್ನು ತಡೆಯಲು ಈ ತಂತ್ರ ಬಳಸಲಾಗಿದೆ ಎಂದು ಶಂಕಿಸಲಾಗಿದೆ. ಆದರೆ ಕಳ್ಳರಿಗೆ ಕಳವು ನಡೆಸಲು ಸಾಧ್ಯವಾಗಿಲ್ಲ.

ಕಿಟಕಿ ಮುರಿದ ಭಾಗದಲ್ಲಿ ಫ್ಲೆಕ್ಸ್‌ ಬೋರ್ಡ್‌ ಇರಿಸಿ ಕಳ್ಳರು ಪರಾರಿ ಯಾಗಿದ್ದಾರೆ. ಕುಂಬಳೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೆ.ಪಿ.ವಿನೋದ್‌ ಕುಮಾರ್‌, ಎಸ್‌.ಐ.ಗಳಾದ ಕೆ.ಶ್ರೀಜೇಶ್‌, ವಿ.ಕೆ.ವಿಜಯನ್‌ ನೇತೃತ್ವದಲ್ಲಿ ಪೊಲೀಸ್‌ ತಂಡ ತನಿಖೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next