ಕಾರ್ಕಳ: ತುಳುನಾಡಿನ ಪ್ರತೀಕವಾಗಿ ಕಾರ್ಕಳದ ಬೈಲೂರಿನ ಬೆಟ್ಟದ ಮೇಲೆ ಕೊಡಲಿ ಎತ್ತಿ ಹಿಡಿದು ನಿಂತ ಪರಶುರಾಮನ ಮಹಿಮೆಗೆ ಜನಸಾಗಾರವೇ ಸಾಕ್ಷಿಯಾಯಿತು. ಮೂರು ದಿನಗಳ ಲೋಕಾರ್ಪಣೆ ಸಮಾರಂಭ ರವಿವಾರ ರಾತ್ರಿ ಸಮಾಪನಗೊಂಡಿತು.
ಕರಾವಳಿಯ ವಿವಿಧ ಜಿಲ್ಲೆಗಳಿಂದ ಕುತೂಹಲಿಗರು ಬೆಟ್ಟದ ಕಡೆಗೆ ಪ್ರವಾಸಕ್ಕಾಗಿ ಆಗಮಿಸುತ್ತಿದ್ದಾರೆ. ಹಗಲು-ರಾತ್ರಿ ಎರಡೂ ಹೊತ್ತು ಜನ ಸಾಗರದಂತೆ ಬೆಟ್ಟದ ಕಡೆಗೆ ತೆರಳುತ್ತಿದ್ದರು. ದಿನದಿಂದ ದಿನಕ್ಕೆ ಇಲ್ಲಿಗೆ ಆಗಮಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ಕಳೆದ ಮೂರು ದಿನಗಳಲ್ಲಿ ಬೈಲೂರಿನ ಕಾಲೇಜು ಮೈದಾನದ ಪ್ರಧಾನ ವೇದಿಕೆಯಲ್ಲಿ ಹಾಗೂ ಥೀಂ ಪಾರ್ಕ್‌ನ ಉಪ ವೇದಿಕೆಯಲ್ಲಿ ನಾಡಿನ ಪ್ರಖ್ಯಾತ ಸಾಂಸ್ಕೃತಿಕ ತಂಡಗಳಿಂದ ವಿವಿಧ ಮನೋರಂಜನೆ ಕಾರ್ಯಕ್ರಮ ನಡೆದವು. ಶನಿವಾರ ಹಾಗೂ ರವಿವಾರ ರಜಾ ದಿನಗಳಾಗಿದ್ದರಿಂದ ಎರಡೂ ಹೊತ್ತಿನಲ್ಲಿ ಭಾರೀ ಜನಸಂದಣಿ ಇತ್ತು. ರಾತ್ರಿ ಸಾಂಸ್ಕೃತಿಕ, ವಿದ್ಯುತ್ ದೀಪಗಳ ಅಲಂಕಾರ ನೋಡಲು ಜನ ಮುಗಿಬೀಳು ತ್ತಿದ್ದರು. ಈ ಸಂದರ್ಭ ಒಂದಷ್ಟು ಟ್ರಾಫಿಕ್ ಸಮಸ್ಯೆ ಸೃಷ್ಟಿಯಾದರೂ ಪಾರ್ಕಿಂಗ್ ಉಸ್ತುವಾರಿ ವಹಿಸಿಕೊಂಡ ಸಮಿತಿ, ಪೊಲೀಸ್ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿ, ಸಿಬಂದಿ, ಸ್ವಯಂ ಸೇವಕರು ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾದರು.
ಇಲ್ಲಿಯ ಉದ್ದಕ್ಕೂ ಅಚ್ಚುಕಟ್ಟಾದ ವ್ಯವಸ್ಥೆ ಜನ ಮೆಚ್ಚುಗೆ ಪಡೆಯಿತು. ಕಾರ್ಯಕ್ರಮದ ಯಶಸ್ಸಿಗೆ ರಚಿಸಿದ 18 ಸಮಿತಿಗಳು ಹಗಲು, ರಾತ್ರಿಯೆನ್ನದೆ ಶ್ರಮಿಸುತ್ತಿದ್ದರು. ಪರಿಸರ ಸ್ವತ್ಛತೆಗೆ ಹೆಚ್ಚಿನ ಗಮನ ನೀಡಲಾಗಿತ್ತು. ಪ್ರತೀ ಗ್ರಾ.ಪಂನ ಎಸ್‌ಎಲ್‌ಆರ್‌ಎಂ ಘಟಕ, ಸ್ವತ್ಛತ ಸಮಿತಿ ಕಸಗಳನ್ನು ಬಿದ್ದ ಕ್ಷಣದಲ್ಲೆ ಹೆಕ್ಕಿ ಸ್ವತ್ಛಗೊಳಿಸುತ್ತಿದ್ದರು. ಕರಕುಶಲ ವಸ್ತು ಪ್ರದರ್ಶನ, ಸಂಜೀವಿನಿ ಉತ್ಪನ್ನಗಳ ಪ್ರದರ್ಶನ, ತೋಟಗಾರಿಗೆ ಇಲಾಖೆಯ ಸಿರಿಧಾನ್ಯ ಪ್ರದರ್ಶನ, ಫಲಪುಷ್ಪ ಪ್ರದರ್ಶನ ಮೊದಲಾದ ಮಳಿಗೆಗಳ ಮುಂದೆ ಜನದಟ್ಟಣೆ ಇದ್ದಿತ್ತು. ಆಹಾರ ಮೇಳಗಳಲ್ಲಿ ಶುಚಿ-ರುಚಿಯ ಖಾದ್ಯಗಳಿಗೆ ಜನ ಮುಗಿಬೀಳುತ್ತಿದ್ದರು.
ಕಾರ್ಕಳದಲ್ಲಿ ಕಾಣಬರುತ್ತಿದ್ದಾರೆ ಹೊರ ಜಿಲ್ಲೆಗಳ ಪ್ರವಾಸಿಗರು!
ಮೂರು ದಿನಗಳಲ್ಲಿ ಜಿಲ್ಲೆ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಪ್ರತಿಮೆ ವೀಕ್ಷಣೆಗೆ ಆಗಮಿಸಿದ್ದರು. ಮುಖ್ಯಮಂತ್ರಿಗಳು ಪ್ರತಿಮೆ ಲೋಕಾರ್ಪಣೆಗೊಳಿಸಿದ ಬಳಿಕ ಬೆಟ್ಟ ಜನಾಕರ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿದೆ. ನಾಡಿನೆಲ್ಲೆಡೆಯ ಜನ ಪರಶುರಾಮನ ಬಗ್ಗೆ ಅರಿತುಕೊಳ್ಳುವುದಕ್ಕೆ ಸಾಧ್ಯವಾಯಿತು.ಪರಶುರಾಮನ ಬಗ್ಗೆ ಮಾಹಿತಿ ಪಡೆದುಕೊಂಡು ಕಾರ್ಕಳದ ಕಡೆಗೆ ಹಿಂದಿರುಗುತ್ತಿದ್ದರು.
ಜ. 30: ಪೊಲೀಸ್ ಕವಾಯತು, ಆಕರ್ಷಕ ಪಂಜಿನ ಮೆರವಣಿಗೆ
ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ಅಂಗವಾಗಿ ಜ.30ರಂದು ಸಂಜೆ 6ಕ್ಕೆ ನಗರದ ಸ್ವರಾಜ್ ಮೈದಾನದಲ್ಲಿ ಆಕರ್ಷಕ ಪೊಲೀಸ್ ಕವಾಯತು, ಪಂಜಿನ ಮೆರವಣಿಗೆ ನಡೆಯಲಿದೆ. ಮೈಸೂರು ದಸರಾ ಸಂದರ್ಭ ನಡೆಯುವಂತೆ ಆಕರ್ಷಕ ಕವಾಯತು ಇಲ್ಲಿ ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್‌ನ 3 ಬ್ಯಾಂಡ್ ಸೆಟ್, ಮೈಸೂರು, ಮಂಗಳೂರು ಪೊಲೀಸ್ ವಿಭಾಗದ ವಿವಿಧ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಡಾಗ್ ಶೋ, ಪೊಲೀಸ್ ಕವಾಯತು, ಕಾಲೇಜು ವಿದ್ಯಾರ್ಥಿಗಳಿಂದ ಪಂಜಿನ ಕವಾಯತು, ವಿದ್ಯಾರ್ಥಿ ಕೆಡೆಟ್ ತಂಡಗಳಿಂದ ಆಕರ್ಷಕ ಕವಾಯತು, ಸಾಹಸಿ ಪ್ರದರ್ಶನಗಳು ನೋಡುಗರನ್ನು ಆಕರ್ಷಿಸಲಿವೆ. ಸ್ವರಾಜ್ ಮೈದಾನದಲ್ಲಿ ಈಗಾಗಲೇ ಸಿದ್ಧತೆ ನಡೆಸಲಾಗಿದೆ.