ಕಾರ್ಕಳ : ಕಾರ್ಕಳದ ಹೃದಯಭಾಗದಲ್ಲಿ ಕೋಟೆಕಣಿ ಎಂಬಲ್ಲಿ ಖಾಸಗಿ ಸ್ಥಳದಲ್ಲಿ ಕಾಮಗಾರಿಗೆಂದು ನೆಲ ಅಗೆಯುತಿದ್ದ ವೇಳೆ ಪುರಾತನ ಕಾಲದಲ್ಲಿ ಫಿರಂಗಿಗಳಿಗೆ ಬಳಸುತ್ತಿದ್ದ ನೂರಾರು ಕಲ್ಲಿನ ಮದ್ದುಗುಂಡುಗಳು ಪತ್ತೆಯಾಗಿವೆ.
ಈ ಸ್ಥಳದಲ್ಲಿ ಕೆಲವು ಸಮಯಗಳಿಂದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ನೆಲ ಅಗೆಯಲಾಗುತ್ತಿದ್ದು, ಈ ವೇಳೆ ಮದ್ದುಗುಂಡುಗಳು ಶನಿವಾರ ಕಾಮಗಾರಿ ವೇಳೆ ಇವುಗಳು ಮದ್ದುಗುಂಡುಗಳು ಕಂಡುಬಂದಿವೆ. ಕೋಟೆಕಣಿ ಪುರಾತನ ಕಾಲದಿಂದಲೂ ರಾಜರುಗಳ ಕೋಟೆಯಾಗಿತ್ತು ಎಂದು ಹೇಳುತ್ತ ಬರಲಾಗಿದೆ.
ಮೈಸೂರಿನ ಸುಲ್ತಾನ್ ಟಿಪ್ಪು ಸಾಮ್ರಾಜ್ಯ ಕಾರ್ಕಳ ತನಕವೂ ವಿಸ್ತರಿಸಿತ್ತು. ಆಂಗ್ಲರ ದಾಳಿಯಿಂದ ತನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಕಾರ್ಕಳ ನಗರದಲ್ಲಿ ಟಿಪ್ಪು ಅಗಳು ನಿರ್ಮಿಸಿದ್ದನು. ಅದು ಕೋಟೆಕಣಿಯೆಂದೇ ಪ್ರಸಿದ್ಧಿ ಪಡೆದು ಪ್ರಚಲಿತದಲ್ಲಿದೆ. ಈ ಸ್ಥಳವು ಬಳಿಕ ಖಾಸಗಿ ಪಾಲಾಗಿದೆ.
ಮದ್ದುಗುಂಡುಗಳು ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶನಿವಾರ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿ ಇನ್ನಷ್ಟು ಪುರಾತನ ವಸ್ತುಗಳ ಹುದುಗಿರುವ ಸಾಧ್ಯತೆ ಬಗ್ಗೆ ಜನರಾಡಿಕೊಳ್ಳುತಿದ್ದು. ದೊರೆತ ಫಿರಂಗಿ ಮದ್ದುಗುಂಡುಗಳನ್ನು ಪುರಾತತ್ವ ಇಲಾಖೆಗೆ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಮದ್ದುಗುಂಡುಗಳು ಸುಮಾರು 2 ಕೆ.ಜಿ. ತೂಕದಷ್ಟು ಭಾರ ಹೊಂದಿದೆ. ಒಟ್ಟು ಸುಮಾರು 3 ಸಾವಿರದಷ್ಟು ಮದ್ದುಗುಂಡುಗಳು ಸಿಕ್ಕಿವೆ.