ಬೆಂಗಳೂರು: ಜೈನ ಕಾಶಿ ಎಂದು ಖ್ಯಾತವಾಗಿರುವ ಕಾರ್ಕಳ ಮತ್ತು ಮೂಡುಬಿದಿರೆ ಪ್ರದೇಶಗಳನ್ನು ಕೇಂದ್ರ ಸರಕಾರದ ಜೈನ್ ಸರ್ಕ್ಯೂಟ್ ಯೋಜನೆಯಡಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿಯ ಉಮಾನಾಥ ಎ. ಕೋಟ್ಯಾನ್ ಪ್ರಸ್ತಾವಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪರವಾಗಿ ಉತ್ತರಿಸಿದ ಸುನಿಲ್, ಕಾರ್ಕಳ ಮತ್ತು ಮೂಡುಬಿದಿರೆಯನ್ನು ಜೈನ್ ಸರ್ಕ್ಯೂಟ್ ಯೋಜನೆಯಡಿ ಸೇರಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಸಸಿಹಿತ್ಲು ಬೀಚ್ ಅಭಿವೃದ್ಧಿ:
ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲು ಬೀಚ್ ಅಭಿವೃದ್ಧಿಗೆ ಸಿಆರ್‌ಝಡ್ ಅನುಮತಿ ಪಡೆಯಲು ಸರಕಾರ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ಈ ಬೀಚ್ ಅನ್ನು ಅಂತಾರಾಷ್ಟ್ರೀಯ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಸರಕಾರದ ಉದ್ದೇಶವಾಗಿದ್ದರೂ ಸಿಆರ್‌ಝಡ್ ನಿಯಮಗಳು ಅಡ್ಡಿಯಾಗುತ್ತಿವೆ. ಅದನ್ನು ಪರಿಹರಿಸಲು ಶ್ರಮಿಸಲಾಗುವುದು ಎಂದರು.
ಈ ಮಧ್ಯೆ ಸಸಿಹಿತ್ಲಿನಲ್ಲಿ ಜೆಎಲ್‌ಆರ್ ಸಂಸ್ಥೆ ವತಿಯಿಂದ 5.36 ಕೋಟಿ ರೂ. ವೆಚ್ಚದಲ್ಲಿ ಸರ್ಫಿಂಗ್ ಮತ್ತಿತರ ಪ್ರವಾಸೋದ್ಯಮಕ್ಕೆ ಪೂರಕವಾದ ಅಭಿವೃದ್ಧಿಗೆ ತಾತ್ಕಾಲಿಕ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.