Advertisement

ಕಂದಾಯ ಸಚಿವರಿಗೆ ಕಾರ್ಕಳ ಶಾಸಕರ ಮನವಿ

07:00 AM Sep 12, 2017 | |

ಕಾರ್ಕಳ: ನೂತನ ತಾಲೂಕಾಗಿ ಘೋಷಣೆಯಾಗಿರುವ ಹೆಬ್ರಿಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ಪ್ರಕ್ರಿಯೆಯನ್ನು ಕ್ಷೀಪ್ರಗೊಳಿಸುವಂತೆ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಕಾರ್ಕಳ ಶಾಸಕ ಹಾಗೂ ವಿಪಕ್ಷದ ಮುಖ್ಯ ಸಚೇತಕ ವಿ. ಸುನಿಲ್‌ ಕುಮಾರ್‌ ಮನವಿ ಸಲ್ಲಿಸಿದರು.

Advertisement

ಮಲೆನಾಡು ಹಾಗೂ ಬಯಲು ಸೀಮೆಯನ್ನು ಬೆಸೆಯುವ ಕಾಡು -ನಾಡು ಪ್ರಕೃತಿಯ ರಮ್ಯ ತಾಣಗಳನ್ನೊಳಗೊಂಡ ಪ್ರೇಕ್ಷಣೀಯ ಸ್ಥಳ, ಪ್ರಮುಖ ವಾಣಿಜ್ಯ ಕೇಂದ್ರ ಹೆಬ್ರಿ. ಇನ್ನು ತಾಲೂಕು ಕೇಂದ್ರವಾಗಲಿದೆ. ತಾ| ಮಟ್ಟದ ಎಲ್ಲ ಸರಕಾರಿ ಇಲಾಖೆಗಳ ಕಚೇರಿಯನ್ನು ತೆರೆಯಲು ಬೇಕಾಗಿರುವ ಮೂಲಭೂತ ವ್ಯವಸ್ಥೆಗಳು ಹೆಬ್ರಿಯಲ್ಲಿವೆ. ನೂತನ ತಾಲೂಕು ಅಧಿಕೃತವಾಗಿ ಕಾರ್ಯಾರಂಭ ಮಾಡಲು ಅನುಕೂಲವಾಗುವಂತೆ ನೂತನ ತಾಲೂಕು ಕಚೇರಿ ಹಾಗೂ ಹೊಸ ತಹಶೀಲ್ದಾರರನ್ನು ನೇಮಕ ಮಾಡಿ ತಾಲೂಕಿಗೆ ಒಳಪಡಬೇಕಾದ ಕಂದಾಯ ಗ್ರಾಮಗಳ, ವಿವಿಧ ಇಲಾಖಾವಾರು ಕಚೇರಿಗಳು ಸೇರಿದಂತೆ ತಾಲೂಕು ಆಡಳಿತ ಪ್ರಾರಂಭಿಸಬೇಕಾದ ಎಲ್ಲ ಆಡಳಿತಾತ್ಮಕ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಅನುದಾನ ಬಿಡುಗಡೆ ಗೊಳಿಸುವಂತೆ ಮನವಿ ಸಲ್ಲಿಸಿದರು.           

ಡಿಸಿ ಮನ್ನಾ ಜಮೀನು 94ಸಿ ಮಂಜೂರು ಮಾಡಲು ಮನವಿ ಪ.ಜಾತಿ ಮತ್ತು ಪ.ಪಂಗಡದವರಿಗೆ ಕೃಷಿ ಮಾಡುವ ಸಲುವಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಕೆಲವು ಗ್ರಾಮಗಳಲ್ಲಿ ಜಮೀನನ್ನು ಕಾಯ್ದಿರಿಸಲಾಗಿದ್ದು ಇವರೆಗೂ ಅಂತಹ ಜಮೀನನ್ನು ವಿತರಣೆ ಮಾಡದೇ ಇರುವುದರಿಂದ ಹಲವಾರು ಪ. ಜಾತಿ, ಪ. ಪಂಗಡ ಜನಾಂಗ ವಂಚಿತರಾಗಿರುತ್ತಾರೆ. ಕೆಲವು ಪ್ರದೇಶಗಳಲ್ಲಿ ಕಾಯ್ದಿರಿಸಿದ ಜಮೀನಿನಲ್ಲಿ ಬೇರೆಯವರು ಆಕ್ರಮಣ ಮಾಡಿ ಕೃತ್ಯಾವಳಿ ಮಾಡಿರುವುದರಿಂದ ಇಂತಹ ಜಮೀನಿನ ಬದಲಾಗಿ ಬೇರೆ ಜಮೀನನ್ನು ಗುರುತಿಸಬೇಕಾಗಿದೆ. ಕರ್ನಾಟಕ ಭೂ ಮಂಜೂರಾತಿ ಕಾಯ್ದೆ 1969 ರಂತೆ ಪ್ರತಿ ಜು.1ಕ್ಕೆ ಲಭ್ಯತಾ ಪಟ್ಟಿ ಪ್ರಕಟಿಸಬೇಕಾಗಿದ್ದು ಪ.ಜಾತಿ / ಪ.ಪಂಗಡ ಜನಾಂಗದವರಿಗೆ ಮಂಜೂರು ಮಾಡಲು ಕಾಯ್ದಿರಿಸಿರುವ (ಡಿಸಿ ಮನ್ನಾ) ಜಮೀನುಗಳನ್ನು ಭೂ ವಂಚಿತ ಬಡ ಪ.ಜಾತಿ / ಪ.ಪಂಗಡದ ಜನಾಂಗದವರಿಗೆ ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಸಚಿವರಲ್ಲಿ ವಿನಂತಿಸಿದರು.
    
94 ಸಿ ಮತ್ತು 94 ಸಿಸಿ ಯಡಿ ಹಲವಾರು ಮಂದಿ ಜಮೀನು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದು ಡೀಮ್ಡ್ ಫಾರೆಸ್ಟ್‌ ಸಮಸ್ಯೆಗಳಿಂದಾಗಿ ಜಮೀನು ಮಂಜೂರಾತಿಗೆ ಅಡಚಣೆಯುಂಟಾಗಿದೆ, ಸಚಿವರು ಮಧ್ಯ ಪ್ರವೇಶಿಸಿ 94ಸಿ ಮತ್ತು 94ಸಿಸಿ ಅರ್ಜಿಗಳನ್ನು ಶೀಘ್ರ ವಿಲೇ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next