ಕಾರ್ಕಳ: ರಾಜ್ಯದ 56 ಲಕ್ಷ ರೈತರ ಮನೆಗೆ ಪ್ರಮಾಣಪತ್ರ, ಕಂದಾಯ ದಾಖಲೆಗಳನ್ನು ಉಚಿತವಾಗಿ ನೀಡುವ “ಮನೆ ಬಾಗಿಲಿಗೆ ಬರುತ್ತಿದೆ ನೋಡಿ ದಾಖಲೆ’ ಅಭಿಯಾನ ಶೀಘ್ರವೇ ನಡೆಯಲಿದೆ ಎಂದು ಸಚಿವ ಆರ್. ಅಶೋಕ್ ಹೇಳಿದರು.
ಕಾರ್ಕಳದಲ್ಲಿ ಬೃಹತ್ ಕಂದಾಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಕುಮ್ಕಿ, ಡೀಮ್ಡ್ ಫಾರೆಸ್ಟ್ ಎಂದು ಒಟ್ಟು 68,794 ಹೆಕ್ಟೇರ್ ಜಮೀನು ಉಡುಪಿ ಜಿಲ್ಲೆಯೊಂದರಲ್ಲೇ ಇದೆ. ಜಿಲ್ಲೆಯಲ್ಲಿ 34,918 ಹೆಕ್ಟೇರ್ ಜಮೀನು, ರಾಜ್ಯದಲ್ಲಿ 15 ಲಕ್ಷ ಎಕರೆ ಭೂಮಿಯನ್ನು ಉಳುಮೆದಾರ ಬಡವರಿಗೆ ನೀಡುತ್ತೇವೆ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಹಾಕಿದ್ದೇವೆ. ಅರಣ್ಯ ಇಲಾಖೆ ಜತೆಗೂ ಮಾತುಕತೆ ನಡೆಸಿದ್ದೇವೆ ಎಂದರು.
ಸರ್ವೇ ಇಲಾಖೆಯಲ್ಲಿ 2 ಲಕ್ಷ ಕಡತ ವಿಲೇ ಬಾಕಿ ಇದ್ದು, 6 ತಿಂಗಳಲ್ಲಿ ಇತ್ಯರ್ಥ ಪಡಿಸುತ್ತೇವೆ. 800 ನೋಟಿಫೈಡ್ ಸರ್ವೇಯರ್‌ಗಳ ನೇಮಕ ವಾಗಿದ್ದು, ಶೀಘ್ರ ಮತ್ತೆ 800 ಮಂದಿ ಯನ್ನು 2 ತಿಂಗಳಲ್ಲಿ ನೇಮಕ ಮಾಡ ಲಾಗುವುದು. ಪ್ರತೀ ವರ್ಷ 7,500 ಕೋ.ರೂ. ಹಣ ಪಿಂಚಣಿಗೆ ನೀಡ ಲಾಗುತ್ತದೆ. ಬೋಗಸ್ ಪಿಂಚಣಿ ದಾರರರನ್ನು ಸೃಷ್ಟಿಸಿ ಹಣ ಕಬಳಿಸುತ್ತಿದ್ದ ಮಧ್ಯವರ್ತಿಗಳನ್ನು ಪತ್ತೆ ಹಚ್ಚಿ 400 ಕೋಟಿ ರೂ. ಉಳಿಸಿ, 6 ತಿಂಗಳಲ್ಲಿ 35 ಸಾವಿರ ಹೊಸ ಅರ್ಹರಿಗೆ ಪಿಂಚಣಿ ವಿತರಿಸಲಾಗಿದೆ. ಕಾರ್ಕಳದಲ್ಲಿ ಆರಂಭಗೊಂಡ ಕಡತ ವಿಲೇ ಸಪ್ತಾಹವನ್ನು ರಾಜ್ಯದ ಎಲ್ಲ ತಾಲೂಕು ಗಳಿಗೆ ವಿಸ್ತರಿಸಲಾಗುವುದು ಎಂದರು. ಸಚಿವ ಸುನಿಲ್ ಕುಮಾರ್ ಅವರು ಸವಲತ್ತು ವಿತರಣೆ, ಅಭಿವೃದ್ಧಿಯಲ್ಲಿ “ಪವರ್‌ಫುಲ್ ‘ ಎಂದು ಶ್ಲಾಘಿ ಸಿದರು.
ಸಚಿವ ಸುನಿಲ್ ಮಾತನಾಡಿ, ಸಚಿವ ಅಶೋಕ್ ಈ ಹಿಂದೆ ಮಡಿಲು, 108 ಯೋಜನೆ ಜಾರಿಗೆ ತಂದವರು. ಕಂದಾಯ ಸಚಿವರಾದ ಬಳಿಕ 60 ವರ್ಷ ತಲುಪಿದ ಎಲ್ಲರಿಗೂ ಪಿಂಚಣಿ ನೀಡುವ ಯೋಜನೆ ತಂದಿದ್ದು, ಕಾರ್ಕಳದಲ್ಲಿ 1,700 ಮಂದಿ ಪಿಂಚಣಿ ಪಡೆಯುತ್ತಿದ್ದಾರೆ ಎಂದರು.
ಹಿಜಾಬ್ ಹದ್ದು ಮೀರಿದರೆ ಬಿಗಿ
ಹಿಜಾಬ್ ವಿವಾದ ಕ್ಷಿಪ್ರಗತಿಯಲ್ಲಿ ಎಲ್ಲೆಡೆ ವ್ಯಾಪಿಸಿದ್ದರ ಹಿಂದೆ ಮತೀಯ ಸಂಘಟನೆಗಳ ಕೈವಾಡವಿದೆ. ಪ್ರತಿಭಟನೆನಿರತ ಮಕ್ಕಳಿಗೆ ತಿದ್ದಿಕೊಳ್ಳಲು, ತಿಳಿವಳಿಕೆ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ. ಮಕ್ಕಳಾದ್ದರಿಂದ ಒಮ್ಮೆಲೇ ಕ್ರಮ ತೆಗೆದುಕೊಂಡಿಲ್ಲ. ಹದ್ದು ಮೀರಿ ವರ್ತಿಸಿದರೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ಗೊತ್ತಿದೆ ಎಂದು ಸಚಿವ ಅಶೋಕ್ ಹೇಳಿದರು.