Advertisement

ಕಾರ್ಕಳ: 1,103 ಕುಟುಂಬಗಳಿಗೆ ಹಕ್ಕುಪತ್ರ

11:44 PM Jan 21, 2020 | mahesh |

ಕಾರ್ಕಳ: ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ಮಾಡಿಕೊಂಡಿರುವ ಮನೆಯನ್ನು ಸಕ್ರಮಗೊಳಿಸುವ 94 ಸಿ ಯೋಜನೆಯಡಿ ಕಾರ್ಕಳ ತಾಲೂಕಿನಲ್ಲಿ 1,103 ಮನೆಗಳಿಗೆ ಹಕ್ಕುಪತ್ರ ನೀಡಲಾಗಿದೆ. 2012ಕ್ಕೂ ಮುನ್ನ ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿ ವಾಸವಾಗಿರುವ ಕುಟುಂಬಕ್ಕೆ ಹಕ್ಕುಪತ್ರ ನೀಡುವ ಯೋಜನೆಯಡಿ ಕಾರ್ಕಳದಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂದರೆ ಸುಮಾರು 5,712 ಅರ್ಜಿ ಕಂದಾಯ ಇಲಾಖೆಗೆ ಸಲ್ಲಿಕೆಯಾಗಿದ್ದು, ಅದರಲ್ಲಿ 1,103 ಮನೆಗಳಿಗೆ ಹಕ್ಕುಪತ್ರ ಮಂಜೂರಾಗಿದೆ.

Advertisement

3,375 ಅರ್ಜಿಗಳು ತಿರಸ್ಕೃತ
3,375 ಅರ್ಜಿಗಳು ನಾನಾ ಕಾರಣಗಳಿಂದ ತಿರಸ್ಕೃತಗೊಂಡಿದ್ದು, 1,150 ಅರ್ಜಿಗಳು ಡೀಮ್ಡ್ ಫಾರೆಸ್ಟ್‌ ಸಂಬಂಧಿಸಿದ ಜಾಗದ್ದಾಗಿವೆ. 84 ಅರ್ಜಿಗಳು ಆಕ್ಷೇಪಣೆ, ಮರುಪರಿಶೀಲನೆ ಸೇರಿದಂತೆ ಇನ್ನಿತರ ಕಾರಣಗಳಿಂದ ಬಾಕಿ ಹಂತದಲ್ಲಿದೆ. 2013ರ ಡಿಸೆಂಬರ್‌ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಸರಕಾರ ಜಾರಿಗೊಳಿಸಿದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ 94 ಸಿ (ಗ್ರಾಮೀಣ ಪ್ರದೇಶ), 94 ಸಿಸಿ (ನಗರ ಪ್ರದೇಶ) ಯೋಜನೆ ನಿವೇಶನ ರಹಿತ ಕುಟುಂಬಗಳಿಗೆ ವರದಾನವಾಗಿದ್ದು ಇದರಿಂದ ಸರಕಾರಿ ಸ್ಥಳದಲ್ಲಿ ಮನೆ ಕಟ್ಟಿಕೊಂಡಿದ್ದ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು.

ಕಾರ್ಕಳ ಸುತ್ತಮುತ್ತ 3,250 ಅರ್ಜಿ
ಪುರಸಭೆ ವ್ಯಾಪ್ತಿ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಾದ ಕುಕ್ಕುಂದೂರು, ನಿಟ್ಟೆ, ಹಿರ್ಗಾನ ಪ್ರದೇಶ ಗಳಿಂದ ಸುಮಾರು 3,250 ಅರ್ಜಿಗಳು ಕಂದಾಯ ಇಲಾಖೆಗೆ ಬಂದಿದ್ದು, ಅವುಗಳಲ್ಲಿ 689 ಕುಟುಂಬಗಳಿಗೆ ಮಾತ್ರ ನಿವೇಶನ ಮಂಜೂರುಗೊಂಡು ಹಕ್ಕುಪತ್ರ ದೊರೆತಿದೆ. 788 ಅರ್ಜಿಗಳು ಡೀಮ್ಡ್ ಫಾರೆಸ್ಟ್‌ಗೊಳಪಟ್ಟಿದ್ದಾದರೆ ಉಳಿದವು ಇನ್ನಿತರ ಕಾರಣಗಳಿಂದ ಬಾಕಿ ಇವೆ. ಕೆಲವು ಇನ್ನೂ ತೀರ್ಮಾನವಾಗಬೇಕಿವೆ.

ಡೀಮ್ಡ್ ಫಾರೆಸ್ಟ್‌ನದ್ದೇ ಸಮಸ್ಯೆ
ತಾಲೂಕು ಹೆಚ್ಚಾಗಿ ಡೀಮ್ಡ್ ಫಾರೆಸ್ಟ್‌ ಗೆ ಒಳಪಡುವ ಪ್ರದೇಶವಾಗಿರುವುದರಿಂದ ಇಂತಹ ಕಡೆ ಮನೆ ಮಾಡಿಕೊಂಡಿರುವ ಕುಟುಂಬಗಳಿಗೆ ಹಕ್ಕುಪತ್ರ ದೊರೆತಿಲ್ಲ. ಕಾರ್ಕಳ ಗ್ರಾಮಾಂತರ ಪ್ರದೇಶದಲ್ಲಿ 1,150 ಅರ್ಜಿಗಳು ಮತ್ತು ನಗರ ಪ್ರದೇಶದಲ್ಲಿ 788 ಅರ್ಜಿಗಳು ಡೀಮ್ಡ್ ಫಾರೆಸ್ಟ್‌ನದ್ದಾಗಿದೆ. ಕೆಲವೊಂದು ಕುಟುಂಬಗಳು ಕಳೆದ ಹತ್ತಿಪ್ಪತ್ತೂ ವರ್ಷಗಳಿಂದ ವಾಸವಾಗಿದ್ದರೂ ಡೀಮ್ಡ್ ಫಾರೆಸ್ಟ್‌ ಕಾರಣದಿಂದಾಗಿ ಹಕ್ಕುಪತ್ರ ಪಡೆಯಲು ಸಾಧ್ಯವಾಗಿಲ್ಲ. ಇದರಿಂದ ಸರಕಾರದಿಂದ ಮನೆ ನಿರ್ಮಾಣಕ್ಕೆ ಅನುದಾನ ಸೇರಿದಂತೆ ಯಾವೊಂದು ಪ್ರಯೋಜನವನ್ನು ಪಡೆಯುವಲ್ಲಿ ತೊಂದರೆ ಅನುಭವಿಸುವಂತಾಗಿದೆ.

ಸಮಸ್ಯೆ
ಕಾರ್ಕಳದಲ್ಲಿ ಡೀಮ್ಡ್ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಹಕ್ಕುಪತ್ರ ನೀಡುವಲ್ಲಿ ಮಾತ್ರ ಸಮಸ್ಯೆಯಾಗಿದೆ. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ ಸರಕಾರವಾಗಲಿ ಅಥವಾ ಜಿಲ್ಲಾಡಳಿತವಾಗಲೀ ಯಾವೊಂದು ನಿರ್ಧಾರಕ್ಕೂ ಬರಲು ಸಾಧ್ಯವಿಲ್ಲ. ಕೋರ್ಟ್‌ ತೀರ್ಪಿಗಾಗಿ ಎದುರುನೋಡುತ್ತಿದ್ದೇವೆ.
-ವಿ. ಸುನಿಲ್‌ ಕುಮಾರ್‌, ಶಾಸಕರು

Advertisement

ನಿರ್ದೇಶನದಂತೆ ಕ್ರಮ
ಡೀಮ್ಡ್ ಫಾರೆಸ್ಟ್‌ನಲ್ಲಿ ಮನೆ ಮಾಡಿಕೊಂಡಿರುವವರಿಗೆ ಹಕ್ಕುಪತ್ರ ನೀಡುವ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ತೀರ್ಪು ಬಂದ ಬಳಿಕ ಸರಕಾರ ನೀಡುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು.
-ಪುರಂದರ ಹೆಗ್ಡೆ, ತಹಶೀಲ್ದಾರರು, ಕಾರ್ಕಳ

ಅನುಕೂಲ
94 ಸಿಯಡಿ ಹಕ್ಕುಪತ್ರ ದೊರೆತ ಕಾರಣ ನಾವಿಂದು ಸ್ವಂತ ಮನೆ ಹೊಂದಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಮನೆಗೆ ವಿದ್ಯುತ್‌ ಸಂಪರ್ಕ, ಪಡಿತರ ಚೀಟಿ ಸೇರಿದಂತೆ ಸರಕಾರದಿಂದ ದೊರೆಯುವ ಸೌಲಭ್ಯ ಪಡೆಯಲು ಅನುಕೂಲವಾಗಿದೆ.
-ಉಮೇಶ್‌, ಕಾರ್ಕಳ

94ಸಿ, 94ಸಿಸಿ ಅಂದರೇನು?
ಗ್ರಾಮೀಣ ಪ್ರದೇಶಗಳಲ್ಲಿ 2012ಕ್ಕೂ ಮುನ್ನ ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿ ವಾಸವಾಗಿರುವವರಿಗೆ ಹಕ್ಕುಪತ್ರ ನೀಡುವ ಯೋಜನೆ. ಇದಕ್ಕೆ 94ಸಿ ಅಡಿಯಲ್ಲಿ ಅರ್ಜಿ ನೀಡಲಾಗುತ್ತದೆ. ನಗರ ಪ್ರದೇಶದ (ನಗರಸಭೆ, ಪುರಸಭೆ, ಪ.ಪಂ., ಮುಡಾ, ಮಹಾನಗರ ಪಾಲಿಕೆ) ಸರಕಾರಿ ಭೂಮಿಯಲ್ಲಿ ವಾಸವಾಗಿರುವವರಿಗೆ ಹಕ್ಕುಪತ್ರ ನೀಡುವ ಯೋಜನೆಗೆ 94 ಸಿಸಿ ಅಡಿಯಲ್ಲಿ ಅರ್ಜಿ ನೀಡಲಾಗುತ್ತದೆ.

1103 ಹಕ್ಕುಪತ್ರ ನೀಡಲಾದ ಮನೆಗಳು
5712 ಅರ್ಜಿ ಕಂದಾಯ ಇಲಾಖೆಗೆ ಸಲ್ಲಿಕೆಯಾದ ಅರ್ಜಿ
3375 ತಿರಸ್ಕೃತಗೊಂಡ ಅರ್ಜಿಗಳು
1150 ಡೀಮ್ಡ್ ಫಾರೆಸ್ಟ್‌ಗೆ ಸಂಬಂಧಿಸಿದ ಜಾಗದ್ದು (ಅರ್ಜಿಗಳು)

ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next