Advertisement
ದ.ಕ. ಜಿಲ್ಲೆಯಲ್ಲಿ ರವಿವಾರ ಸಂಜೆ ಆರಂಭವಾಗಿದ್ದ ಮಳೆ ತಡ ರಾತ್ರಿವರೆಗೂ ಸುರಿದಿತ್ತು. ಆದರೆ ಸೋಮವಾರ ಹಗಲಿನಲ್ಲಿ ಮಳೆ ಸುರಿದಿಲ್ಲ. ಸಂಜೆ ಬಳಿಕ ಗ್ರಾಮಾಂತರ ಪ್ರದೇಶಗಳ ಕೆಲವು ಕಡೆ ಸಾಧಾರಣ ಮಳೆಯಾಗಿದೆ.
ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವರ್ಷಧಾರೆ ಮುಂದುವರಿದಿದ್ದು, ರವಿವಾರ ತಡರಾತ್ರಿ, ಸೋಮವಾರ ಹಗಲು ಹಲವೆಡೆ ಮಳೆ ಸುರಿದಿದೆ. ಕುಂದಾಪುರ ಭಾಗದಲ್ಲಿ ಗುಡುಗು, ಮಿಂಚು ಸಹಿತ ಹೆಚ್ಚು ಮಳೆ ಸುರಿದಿದ್ದು, ಮಧ್ಯಾಹ್ನ ಬಳಿಕ ತೆಕ್ಕಟ್ಟೆ, ಬೈಂದೂರು, ಉಪ್ಪುಂದ, ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಹಳ್ಳಿ ಹೊಳೆ, ಅಂಪಾರು, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಅಮಾಸೆಬೈಲು, ಕೊಲ್ಲೂರು ಪರಿಸರದಲ್ಲಿ ಧಾರಾಕಾರ ಮಳೆಯಾಗಿದೆ. ಈ ಭಾಗದಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಹಾನಿ ಸಂಭವಿಸಿದೆ. ಉಡುಪಿ, ಮಣಿಪಾಲ, ಮಲ್ಪೆ, ಕಾಪು, ಪಡುಬಿದ್ರಿ, ಕಾರ್ಕಳ, ಅಜೆಕಾರು, ಬೈಲೂರು, ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ.
Related Articles
Advertisement
ಸಿಡಿಲು ಬಡಿದು ಸಾವು ಕಾರ್ಕಳ: ಬೈಲೂರು ಸಮೀಪದ ನೀರೆ ಎಂಬಲ್ಲಿ ಸೋಮವಾರ ಸಂಜೆ 4ರ ವೇಳೆಗೆ ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ನೀರೆ ರಾಜೀವ ನಗರದ ವಾದಿರಾಜ ಆಚಾರ್ಯ(60) ಮೃತಪಟ್ಟವರು. ಸಿಡಿಲು ಬಡಿದ ಪರಿಣಾಮ ಮನೆಯ ವಿದ್ಯುತ್ ಪರಿಕರಗಳು ಸುಟ್ಟು ಕರಕಲಾಗಿವೆ. ಮನೆಗೂ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಈ ಮನೆಯ ಪರಿಸರದಲ್ಲಿ ಇರುವ ಇತರ ಹಲವು ಮನೆಗಳಿಗೂ ಹಾನಿ ಸಂಭವಿಸಿದೆ. ಸಿಡಿಲು ಬಡಿದು ನೆಲಕ್ಕೆ ಬಿದ್ದ ವಾದಿರಾಜ ಆಚಾರ್ಯ ಅವರನ್ನು ಕೂಡಲೇ ಬೈಲೂರಿನ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕಾರ್ಕಳ ಪ್ರಭಾರ ತಹಶೀಲ್ದಾರ್ ಪುರಂದರ, ಕಂದಾಯ ನಿರೀಕ್ಷಕ ಶಿವಪ್ರಸಾದ್ ಭಟ್ ಇನ್ನಿತರರು ಭೇಟಿ ನೀಡಿದ್ದಾರೆ.