Advertisement

Karkala: ಕೆಮ್ಮಣ್ಣು ತಿರುವಿನಲ್ಲಿ ಅಪಾಯಕಾರಿ ಮರ !

02:35 PM Oct 01, 2024 | Team Udayavani |

ಕಾರ್ಕಳ: ಸಹಸ್ರಾರು ಜನ, ವಾಹನ ಓಡಾಡುವ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯ ಕೆಮ್ಮಣ್ಣು ತಿರುವಿನಲ್ಲಿ ರಸ್ತೆಗೆ ತಾಗಿಕೊಂಡೇ ಬೃಹತ್‌ ಮರವೊಂದಿದೆ. ಸಂಪೂರ್ಣವಾಗಿ ರಸ್ತೆಗೆ ಬಾಗಿಕೊಂಡಿರುವ ಮರ ಯಾವುದೇ ಕ್ಷಣ ಉರುಳಿ ಬೀಳುವ ಅಪಾಯವಿದೆ. ಆದರೆ, ಸ್ಥಳೀಯಾಡಳಿತ ಈ ಬಗ್ಗೆ ಯಾವುದೇ ಮುನ್ನೆಚ್ಚರಿಕೆಯನ್ನು ವಹಿಸಿಲ್ಲ.

Advertisement

ಕಲ್ಯಾ ಗ್ರಾಮ ಪಂಚಾಯತ್‌ ಹಾಳೆಕಟ್ಟೆ ಹಾಗೂ ನಿಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆಮಣ್ಣಿನ ನಡುವಿನ ತಿರುವಿನಲ್ಲಿ ಈ ಮರವಿದೆ. ಸಮೃದ್ಧವಾಗಿ ಬೆಳೆದು ನಿಂತ ಮರದ ಕೊಂಬೆಗಳು ರಸ್ತೆಯನ್ನು ಆವರಿಸಿಕೊಂಡಿವೆ. ಈ ಹೆದ್ದಾರಿಯಲ್ಲಿ ಕಂಟೇನರ್‌ ಹಾಗೂ ಘನ ವಾಹನಗಳು ಸಂಚರಿಸುವಾಗ ಚಾಚಿಕೊಂಡ ಕೊಂಬೆಗಳು ವಾಹನಗಳಿಗೆ ತಾಗುತ್ತವೆ. ಇಂಥಹುದೇ ಘಟನೆಗಳು ಮರುಕಳಿಸಿದಾಗ ಕೊಂಬೆಗಳು ಉರುಳಿ ಬೀಳುವ ಸಾಧ್ಯತೆಯೂ ಇರುತ್ತದೆ. ಶಾಲಾ ಕಾಲೇಜು ತೆರಳುವ ವಿದ್ಯಾರ್ಥಿಗಳು ಇದೇ ಮರದಡಿಯಲ್ಲಿ ಸಾಗುತ್ತಿರುತ್ತಾರೆ. ಮಕ್ಕಳು ಮಳೆ, ಬಿಸಿಲಿಗೆ ಇದೇ ಮರದಿ ವಿಶ್ರಾಂತಿ ಪಡೆಯುತ್ತಾರೆ.

ಮರದ ಬುಡವು ಬಿರುಕು ಬಿಟ್ಟಿದ್ದು, ಜೋರಾಗಿ ಗಾಳಿ ಬೀಸಿದರೆ ಇಡೀ ಮರವೇ ಬುಡದಿಂದ ಕಿತ್ತುಕೊಂಡು ರಸ್ತೆಗೆ ಬೀಳುವ ಆತಂಕವೂ ಇದೆ. ಅರಣ್ಯ ಇಲಾಖೆ ಎಚ್ಚೆತ್ತು ಕೂಡಲೇ ಅಪಾಯಕಾರಿ ಮರವನ್ನು ತೆರವುಗೊಳಿಸುವಂತೆ ಗ್ರಾಮಸ್ಥರು, ವಾಹನ ಸವಾರರು ಒತ್ತಾಯಿಸಿದ್ದಾರೆ.

ಗ್ರಾ.ಪಂಗಳು ತಮ್ಮ ವ್ಯಾಪ್ತಿಯ ಅಪಾಯಕಾರಿ ಮರದ ಗಂಭೀರತೆಯನ್ನು ಅರಣ್ಯ ಇಲಾಖೆಗೆ ವಿವರಿಸಿ ತ್ವರಿತ ಕ್ರಮಕ್ಕೆ ಮನವಿ ಮಾಡಬೇಕಾಗಿದೆ.

ಪರಿಶೀಲಿಸಿ ಕ್ರಮ
ಈ ಮರದ ಬಗ್ಗೆ ದೂರುಗಳು ಬಂದ ಬಗ್ಗೆ ಗಮನವಿಲ್ಲ. ಕಡತ ಪರಿಶೀಲಿಸಿ ದೂರು ಸ್ವೀಕಾರವಾಗಿದಲ್ಲಿ ಕ್ರಮ ವಹಿಸಲಾ ಗುವುದು. ಜತೆಗೆ ಅಪಾಯಕಾರಿ ಮರ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು.
-ಹುಕ್ರಪ್ಪ ಗೌಡ, ಅರಣ್ಯಾಧಿಕಾರಿ

Advertisement

ಎಚ್ಚೆತ್ತುಕೊಳ್ಳಲಿ
ಮರ ತೆರವುಗೊಳಿಸಿ ಅಪಾಯವನ್ನು ತಪ್ಪಿಸಬೇಕು. ಅವಘಡ ಆದ ಅನಂತರ ಎಚ್ಚೆತ್ತುಕೊಳ್ಳುವ ಇಲಾಖೆಗಳು ಪೂರ್ವದಲ್ಲಿ ಮರೆಯುವುದು ಸರಿಯಲ್ಲ.
-ಸುರೇಂದ್ರ ಶೆಟ್ಟಿ, ವಾಹನ ಸವಾರ

ಯಾರಿಗೆಲ್ಲ ಅಪಾಯ?

  • ಈ ಮರದ ಬುಡದಲ್ಲಿ ಬಸ್ಸಿಗಾಗಿ ಕಾಯುವುದು ಸೇರಿದಂತೆ ವಿಶ್ರಾಂತಿ ಪಡೆದು ಕೊಳ್ಳುವುದೂ ಇದೆ.
  • ಹಿರಿಯ ನಾಗರಿಕರು, ಮಹಿಳೆಯರು ಇದೇ ಮರದಿಡಿಯ ಮೂಲಕವೇ ವಾಕಿಂಗ್‌ಗೆ ಹೋಗುತ್ತಾರೆ.
  • ನೂರಾರು ವಾಹನಗಳು, ಶಾಲೆ, ಕಾಲೇಜು ವಿದ್ಯಾರ್ಥಿಗಳು ಈ ಮರದ ಅಡಿಯಿಂದಲೇ ಹೋಗುತ್ತಾರೆ.
Advertisement

Udayavani is now on Telegram. Click here to join our channel and stay updated with the latest news.

Next