ಕಾರ್ಕಳ: ತಾಲೂಕಿನ ವರಂಗ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಚಿರತೆಯೊಂದು ಕಂಡುಬಂದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಗ್ರಾಮದ ಪಟ್ರಬೆಟ್ಟು ಕುಮಾರ ಪೂಜಾರಿ ಎಂಬವರ ಮನೆಯ ಕೋಳಿಗೂಡಿನಲ್ಲಿ ಸೇರಿಕೊಂಡಿದ್ದ ಚಿರತೆ ಕೆಲಕಾಲ ಸ್ಥಳೀಯರನ್ನು ಆತಂಕಕ್ಕೀಡು ಮಾಡಿತು.
ಬುಧವಾರ ಮುಂಜಾನೆ 3ರ ವೇಳೆ ಕೋಳಿಗಳು ಕೂಗಲಾಂಭಿಸಿವೆ. ಇದರಿಂದ ಎಚ್ಚೆತ್ತ ಕುಮಾರ ಪೂಜಾರಿ ಅವರು ಕೋಳಿ ಗೂಡಿನತ್ತ ಧಾವಿಸಿದಾಗ ಚಿರತೆ ಗೋಚರಿಸಿದ್ದು, ತತ್‌ಕ್ಷಣವೇ ಅವರು ಕೋಳಿ ಗೂಡಿನ ಬಾಗಿಲು ಮುಚ್ಚಿದ್ದಾರೆ. ಬಳಿಕ ಈ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
5 ಗಂಟೆ ವೇಳೆಗೆ ಅರಣ್ಯ ರಕ್ಷಕ ಅವಿನಾಶ್ ಸ್ಥಳಕ್ಕೆ ಭೇಟಿ ನೀಡಿದರು. 9 ಗಂಟೆಯ ಸುಮಾರಿಗೆ ಅರಣ್ಯಾಧಿಕಾರಿಗಳು ನೆಟ್ ಬಳಸಿ ಸುರಕ್ಷಿತವಾಗಿ ಚಿರತೆಯನ್ನು ಬೋನ್‌ನೊಳಗೆ ತುಂಬಿದರು. ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ರಾಘವೇಂದ್ರ ಶೆಟ್ಟಿ, ಅರಣ್ಯ ರಕ್ಷಕರಾದ ಹೊನ್ನಪ್ಪ, ಆನಂದ್, ಅವಿನಾಶ್ ಉಪಸ್ಥಿತ ರಿದ್ದರು.
ಚಿರತೆ ನೋಡಲು ಈ ಸಮಯ ದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿ ಸಿದ್ದರು. ಮಾತಿಬೆಟ್ಟು ಗುಡ್ಡ ದಿಂದ ಚಿರತೆ ಬಂದಿರಬಹುದು. ಕೋಳಿ ಗೂಡಿನಲ್ಲಿ ಸುಮಾರು 25 ಕೋಳಿಗಳಿದ್ದರೂ ಚಿರತೆ ಕೋಳಿಗಳನ್ನು ತಿಂದಿಲ್ಲ. ಒಂದು ಕೋಳಿಯನ್ನು ಮಾತ್ರ ಗಾಯಗೊಳಿಸಿದೆ ಎಂದು ಎಸ್. ಕುಮಾರ ಪೂಜಾರಿ ತಿಳಿಸಿದ್ದಾರೆ.
ಚಿರತೆ ಹಾವಳಿ
ಕಾರ್ಕಳದಲ್ಲಿ ಆಗಿಂದಾಗ್ಗೆ ಚಿರತೆ ಹಾವಳಿ ಕಂಡುಬರುತ್ತಿದ್ದು, ಜನರನ್ನು ಆತಂಕಕ್ಕೀಡು ಮಾಡುತ್ತಿದೆ. ಕೆಲ ತಿಂಗಳ ಹಿಂದೆ ಕಾಂತಾವರ ಪ್ರದೇಶದಲ್ಲಿ ಚಿರತೆಯಿಂದ ದನ ಸಾವಿಗೀಡಾಗಿತ್ತು. ಆ ಬಳಿಕ ರಾತ್ರಿ ವೇಳೆ ಕಾಂತಾವರ ಪ್ರದೇಶದಲ್ಲಿ ಜನ ಓಡಾಡಲು ಭಯಪಡುತ್ತಿದ್ದರು. ಕಳೆದ ವಾರ ವರಂಗ ಗ್ರಾಮದ ಪೆರ್ಮಾಣುವಿನಲ್ಲಿ ಸತೀಶ್ ಪೂಜಾರಿ, ಪ್ರೇಮಾ ಪೂಜಾರ್ತಿ ಎಂಬವರ ನಾಯಿಗಳನ್ನು ಚಿರತೆ ಕೊಂದು ಹಾಕಿತ್ತು.