Advertisement

Karkala: ಶಿರ್ಲಾಲು ಕಾಡಿನಲ್ಲಿದೆ ಪ್ರಾಚೀನ ಹೆರಿಗೆ ಕಲ್ಲು!

03:23 PM Oct 17, 2024 | Team Udayavani |

ಕಾರ್ಕಳ: ಪ್ರಾಚೀನ ಕಾಲದಲ್ಲಿ ದೇಶಿಯ ವೈದ್ಯ ಪದ್ಧತಿ ಮೂಲಕ ಹೆರಿಗೆಗಳು ನಡೆಯುತ್ತಿದ್ದವು. ಅದರ ಪಳೆಯುಳಿಕೆ ಎಂಬಂತೆ ಕಾರ್ಕಳ ತಾಲೂಕಿನ ಅಂಡಾರಿನಲ್ಲೊಂದು (ಶಿರ್ಲಾಲು) ವಿಶೇಷ ಕಲ್ಲಿದೆ. ಇದು ಹಿರಿಯರ ನಂಬಿಕೆಯ ಪೆದೆ³ತಿ ಕಲ್ಲು. ಮಹಿಳೆಯೊಬ್ಬಳು ಕುಳಿತು ಪ್ರಸವಿಸುವ ಮಾದರಿಯ ಕಲ್ಲಿದು. ವಿಶಿಷ್ಟ ಸಂಪ್ರದಾಯ, ಪದ್ಧತಿಗೆ ಸಾಕ್ಷಿಯಾಗಿರುವ ಕಲ್ಲು ಈಗ ಅಳಿವಿನಂಚಿನಲ್ಲಿದೆ.

Advertisement

ಆದಿವಾಸಿಗಳ ಹೆಚ್ಚು ವಾಸವಿದ್ದ ಜಾಗ
ಅಂಡಾರು ಸಮೀಪ ಬೈತಾಳ ಶಾಲೆಯಿಂದ 8 ಕಿ.ಮೀ. ದೂರದಲ್ಲಿ ಈ ಕಲ್ಲಿದೆ. ಅಜ್ಜಿಕುಂಜ ರಸ್ತೆ ಬಳಿಯ ಅಭಯಾರಣ್ಯದೊಳಗೆ ಈ ಕಲ್ಲು ಕಾಣ ಸಿಗುತ್ತದೆ. ಆದಿವಾಸಿಗಳೆ ಈ ಭಾಗದಲ್ಲಿ ಹೆಚ್ಚಾಗಿ ವಾಸವಿದ್ದರು. ಆ ದಿನಗಳಲ್ಲಿ ಮಹಿಳೆಯರು ಪ್ರಸವ ವೇದನೆ ಸಂದರ್ಭ ಹೆರಿಗೆಗಾಗಿ ಈ ಕಲ್ಲಿನ ಬಳಿ ಬರುತಿದ್ದರು ಎನ್ನುವ ಪ್ರತೀತಿಯಿದೆ.

ಮುಂದೆ ಇಲ್ಲಿ ಸಂಪ್ರದಾಯವೊಂದು ಪಾಲನೆಯಾಗಿ ಜಾರಿಗೆ ಬಂದಿದೆ. ಪ್ರಸವ ವೇದನೆ ಸಂದರ್ಭ ಇಲ್ಲಿನ ಕಲ್ಲಿನ ಮೂರ್ತಿಗೆ ಹರಕೆ ಹೇಳಲಾಗುತ್ತದೆ. ಹಿರಿಯರು ಹೇಳುವ ಪ್ರಕಾರ ಅವಲಕ್ಕಿ ಹರಕೆ ಇಲ್ಲಿ ಕಲ್ಲಿಗೆ ಸಮರ್ಪಣೆಯಾಗುತ್ತಿತ್ತು.

ಸರ್ವ ಋತುವಿನಲ್ಲಿ ತೋಡಲ್ಲಿ ನೀರು
ಬಂಡೆ ಕಲ್ಲಿನ ಬದಿಯಲ್ಲಿ 2 ಅಡಿ ಎತ್ತರದ ಮೂರ್ತಿ ಇದೆ. ಇದು ಮಹಿಳೆ ಕುಳಿತು ಹೆರಿಗೆ ಮಾಡುವ ವಿಧಾನದ ಮೂರ್ತಿಯಾಗಿದೆ. ಅಲ್ಲಿರುವ ಬಂಡೆಯ ಮೇಲೆ ಸಮತಟ್ಟಿದೆ. ಪಕ್ಕದಲ್ಲೇ ಸಣ್ಣ ತೋಡು ಹರಿಯುತ್ತಿದೆ. ಇಲ್ಲಿ ವರ್ಷದ ಎಲ್ಲ ಋತುಗಳಲ್ಲಿ ನೀರು ಹರಿಯುತ್ತಿರುತ್ತದೆ. ಹಿಂದೆ ಹೆರಿಗೆ ತೊಂದರೆಗಳಿಗೆ ಇಲ್ಲಿ ಪ್ರಾರ್ಥಿಸಿ ಅದಾದ ಬಳಿಕ ಸುಗಮ ಹೆರಿಗೆ ಆದ ಬಳಿಕ ಅಲ್ಲಿಗೆ ತೆರಳಿ ಹರಕೆ ಸಲ್ಲಿಸುತ್ತಿದ್ದರು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

ಕಾಡಿನೊಳಗಿನ ಅನಾಥ ಕಲ್ಲು
ಕಾಲ ಕಳೆದಂತೆ ಆಧುನಿಕತೆ ಈ ಪ್ರದೇಶವನ್ನು ಪ್ರವೇಶಿಸಿದೆ. ಇಲ್ಲಿರುವ ಕಲ್ಲಿನ ಆರಾಧನೆಯೂ ಕಡಿಮೆಯಾಗುತ್ತ ಬಂದಿದೆ. ಬಳಿಕ ಈ ಕಲ್ಲಿರುವ ಕಡೆ ತೆರಳುವವರು ಇಲ್ಲದೆ ಅನಾಥವಾಗಿದೆ. ಈ ನಿಗೂಢ ಪ್ರದೇಶ ಅಭಯಾರಣ್ಯ ವ್ಯಾಪ್ತಿಗೆ ಒಳಪಟ್ಟಿದೆ. ಅರಣ್ಯ ಇಲಾಖೆ, ಪೊಲೀಸರ ಅನುಮತಿ ಇಲ್ಲದೆ ಅತ್ತ ಕಡೆ ಸುಳಿದಾಡುವಂತಿಲ್ಲ. ಈ ಹಿಂದೆ ಇದು ನಕ್ಸಲ್‌ ಬಾಧಿತ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿತ್ತು.

Advertisement

ಪ್ರಾಚೀನ ಸಾಕ್ಷ್ಯ ಉಳಿಯಲಿ; ಸಂರಕ್ಷಣೆ ಕಾರ್ಯ ನಡೆಯಲಿ
ಪ್ರಾಚೀನ ವೈದ್ಯಪದ್ಧತಿ ಕಣ್ಮರೆಯಾಗುತ್ತಿದೆ. ಆಧುನಿಕತೆಯಿಂದ ಹಿಂದಿನ ಕಾಲದ ಪದ್ಧತಿ ಆಚರಣೆಗಳು ದೂರವಾಗುತ್ತಿದೆ. ಇಂತಹ ಕೆಲವೊಂದು ಸ್ಥಳಗಳು ಹಿಂದಿನ ಕಾಲದ ವಿಶಿಷ್ಟ ಸಂಪ್ರದಾಯಗಳ ಸಾಕ್ಷ್ಯಗಳನ್ನು ಸಂರಕ್ಷಿಸುವ ಪ್ರಯತ್ನಗಳು ಆಗಬೇಕು. ಈ ನಿಟ್ಟಿನಲ್ಲಿ ಪೆದ್ಬೆತಿ ಕಲ್ಲಿನ ಸಂರಕ್ಷಣೆ ಕಾರ್ಯ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಕಲ್ಲಿನ ಬಗ್ಗೆ ಮಾಯಕದ ಕಥೆ
ಇಲ್ಲಿರುವ ಹೆರಿಗೆ ಕಲ್ಲಿನ ಬಗ್ಗೆ ಬೇರೆ ಬೇರೆ ಕಥೆಗಳೂ ಹರಿದಾಡುತ್ತಿವೆ. ಇಲ್ಲಿ ಹೆರಿಗೆಗೆ ಕುಳಿತ ಮಹಿಳೆ ಮಾಯವಾಗಿದ್ದಳು. ಅವಳ ನೆನಪಿಗಾಗಿ ಈ ಕಲ್ಲನ್ನು ಹಾಕಲಾಗಿದೆ. ಪಕ್ಕದಲ್ಲೇ ಮಗುವಿನ ಚಿತ್ರದ ಕೆತ್ತನೆ ಇತ್ತು ಅದೀಗ ಗೋಚರಿಸುತಿಲ್ಲ. ಇಲ್ಲಿನ ಕಲ್ಲನ್ನು ಆರಾಧಿಸಬೇಕು. ಮುಂದೆ ಜೀರ್ಣೋದ್ಧಾರಗೊಳಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಆರಾಧಿಸುವ ಚಿಂತನೆ ಮಾಡಬೇಕು ಎನ್ನುವ ಸಲಹೆಯನ್ನು ಜೋತಿಷಿಯೊಬ್ಬರು ಈ ಹಿಂದೆ ನೀಡಿದ್ದರು ಎನ್ನುತ್ತಾರೆ ಸ್ಥಳೀಯರು.

ಇಲ್ಲೇ ಪಕ್ಕದಲ್ಲಿ ಶಿರಕಲ್ಲು ಎಂಬ ಜಾಗವೂ ಇದೆ. ಈ ಪರಿಸರದಲ್ಲಿ ದೈವಗಳ ಮೂಲ ಸ್ಥಾನವೂ ಇದ್ದ ಬಗ್ಗೆ ಹಿರಿಯರೂ ಹೇಳುತ್ತಾರೆ. ಅಂಡಾರು ಕೊಡಮಣಿತ್ತಾಯಿ ದೈವದ ಮೂಲ ಆರಾಧನೆ ಇಲ್ಲಿ ನಡೆಯುತ್ತಿತ್ತು ಎನ್ನುವುದು ಹಿರಿಯರಿಂದ ಕೇಳಿ ಬರುವ ಸಂಗತಿಗಳಾಗಿವೆ.

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next