Advertisement

ಕಾರ್ಕಳ: 442 ಅನರ್ಹ ಪಡಿತರ ಚೀಟಿ ಪತ್ತೆ

11:57 PM Nov 07, 2019 | Sriram |

ಕಾರ್ಕಳ: ಸರಕಾರದ ಮಾನದಂಡಕ್ಕೆ ವಿರುದ್ಧವಾಗಿ ಈವರೆಗೆ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ 442 ಕುಟುಂಬಗಳು ಕಾರ್ಕಳದಲ್ಲಿ ಪತ್ತೆಯಾಗಿವೆ. ಆರ್‌ಟಿಒ ಮಾಹಿತಿ ಪ್ರಕಾರ 102, ಸ್ವಯಂ ಪ್ರೇರಿತರಾಗಿ 340 ಕುಟುಂಬಗಳು ಈಗಾಗಲೇ ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆಯಾಗಿದ್ದು, ಅನರ್ಹರು ಕೂಡಲೇ ಕಾರ್ಡ್‌ ತಂದೊಪ್ಪಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.ಕಾರ್ಕಳ ತಾಲೂಕಿನಲ್ಲಿ 17,161 ಎಪಿಎಲ್‌, 33,533 ಬಿಪಿಲ್‌, 4,168 ಅಂತ್ಯೋದಯ ಪಡಿತರ ಚೀಟಿಯಿದ್ದು ಒಟ್ಟು 54, 862 ಪಡಿತರ ಕಾರ್ಡ್‌ ಇದೆ.

Advertisement

ಸೌಲಭ್ಯ
ಎಪಿಎಲ್‌ ಕಾರ್ಡ್‌ದಾರರಿಗೆ ಕೆ.ಜಿ.ಯೊಂದಕ್ಕೆ ರೂ. 15ರಂತೆ ತಿಂಗಳಿಗೆ ಗರಿಷ್ಠವಾಗಿ 10 ಕೆ.ಜಿ. ಅಕ್ಕಿ, ಬಿಪಿಎಲ್‌ ಕುಟುಂಬಗಳಿಗೆ ಪ್ರಸ್ತುತ ಓರ್ವ ಸದಸ್ಯನಿಗೆ ತಲಾ 7 ಕೆ.ಜಿ.ಯಂತೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ಅಂತ್ಯೋದಯ ಕಾರ್ಡ್‌ದಾರರಿಗೆ ಕುಟುಂಬಕ್ಕೆ 35 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಇದಲ್ಲದೇ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ದಾರರಿಗೆ ಸರಕಾರದಿಂದ ಅನೇಕ ಸೌಲಭ್ಯಗಳೂ ದೊರೆಯುತ್ತಿವೆ.

ಹಳೆ ಕಾರ್‌ ಹೊಂದಿದ್ದರೂ ಬಿಪಿಎಲ್‌ ಕಾರ್ಡ್‌ ಕಟ್‌
ಸಾಕಷ್ಟು ಆಸ್ತಿಪಾಸ್ತಿ ಹೊಂದಿದವರೂ ಬಿಪಿಎಲ್‌ ಪಡಿತರ ಚೀಟಿ ಹೊಂದಿದವರಿದ್ದಾರೆ. ಆದರೆ, ಕಡಿಮೆ ಆಸ್ತಿಯಿದ್ದಾಗ್ಯೂ ಹಳೆ ಕಾರ್‌ ಹೊಂದಿದ್ದಲ್ಲಿ ಕೂಡ ನಿಯಮದನ್ವಯ ಬಿಪಿಎಲ್‌ ಪಡಿತರ ಚೀಟಿ ರದ್ದಾಗುವುದು. ಇಂತಹ ನಿಯಮ ಸರಿಯಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

ಹೇಗೆ ಅನರ್ಹರು ?
-  ಆದಾಯ ತೆರಿಗೆ ಪಾವತಿದಾರರು.ಸರಕಾರಿ ,ಅರೆ ಸರಕಾರಿ ಉದ್ಯೋಗ ಹೊಂದಿರುವ ಕುಟುಂಬ.
-   ರೂ. 1.20 ಲಕ್ಷಕ್ಕಿಂತ ಅಧಿಕ ವಾರ್ಷಿಕ ಆದಾಯ ಹೊಂದಿರುವ ಕುಟುಂಬ.
-   ಪಡಿತರ ಚೀಟಿ ವಿಳಾಸದಲ್ಲಿ ವಾಸವಾಗಿರದೇ ಇರುವುದು.
-   ಮರಣ ಹೊಂದಿದವರು ಮತ್ತು ಕುಟುಂಬದಲ್ಲಿ ವ್ಯಾಸ್ತವ್ಯ ಹೊಂದದೇ ಇರುವಂತಹ ಸದಸ್ಯರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯದೇ ಉಳಿಸಿಕೊಂಡವರು.
-   ಜೀವನೋಪಾಯಕ್ಕಾಗಿ ಹೊಂದಿರುವ ಒಂದು ಟೂರಿಸ್ಟ್‌ ಕಾರು, ಲಾರಿ ಹೊರತುಪಡಿಸಿ ಕಾರು, ಲಾರಿ, ಜೇಸಿಬಿ ಮೊದಲಾದ ವಾಹನ ಹೊಂದಿರುವವರು.
-   ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ ಭೂಮಿ ಹಾಗೂ ನಗರ ಪ್ರದೇಶದಲ್ಲಿ 1 ಸಾವಿರ ಚದರಡಿ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು.
-  ಒಂದು ಮನೆಯಲ್ಲಿ 1ಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವುದು.

ಅನರ್ಹರು ಕಾರ್ಡ್‌ ತಂದೊಪ್ಪಿಸಿ
ಅನರ್ಹರು ಬಿಪಿಎಲ್‌ ಕಾರ್ಡ್‌ ಒಪ್ಪಿಸಲು ಈಗಲೂ ಅವಕಾಶವಿದೆ. ಅವರಾಗಿಯೇ ತಂದೊಪ್ಪಿಸಲು ವಿಳಂಬ ಮಾಡಿದಲ್ಲಿ ಆಹಾರ ಇಲಾಖೆ ಪತ್ತೆ ಹಚ್ಚಲು ಮುಂದಾಗಲಿದ್ದು, ಅಂತಹವರಿಗೆ ದಂಡ ವಿಧಿಸಲಾಗುವುದು. ಕಾಯ್ದೆಯನ್ವಯ ಕ್ರಿಮಿನಲ್‌ ಕೇಸ್‌ ಹಾಕಲು ಅವಕಾಶವಿದೆ.
-ಬಿ.ಕೆ. ಕುಸುಮಾಧರ್‌, ಉಪನಿರ್ದೇಶಕರು, ಆಹಾರ ಇಲಾಖೆ ಉಡುಪಿ

Advertisement

ದಂಡ ವಿಧಿಸಿಲ್ಲ
ಸರಕಾರದ ಮಾನದಂಡಗಳನ್ನು ಮೀರಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಫ‌‌ಲಾನುಭವಿಗಳಿಗೆ ದಂಡರಹಿತವಾಗಿ ಎಪಿಎಲ್‌ಗೆ ಪರಿವರ್ತಿಸಲು ಅ.30ರವರೆಗೆ ಅವಕಾಶವಿತ್ತು. ಹೀಗಾಗಿ ಯಾರಿಗೂ ದಂಡ ವಿಧಿಸಿಲ್ಲ.
-ಪುರಂದರ ಹೆಗ್ಡೆ, ತಹಶೀಲ್ದಾರರು, ಕಾರ್ಕಳ

ವಿಶೇಷ ವರದಿ- ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next