ಮಣಿಪಾಲ: ಕರ್ನಾಟಕ ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಳೆದು ಕೆಲವು ದಿನಗಳಿಂದ ಬಿಡದೆ ವರ್ಷಧಾರೆ ಸುರಿಯುತ್ತಿದ್ದು, ಹಲವು ಪ್ರದೇಶಗಳ ಜಲಾವೃತವಾಗಿದೆ. ಅದರಲ್ಲೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಬುಧವಾರ (ಜು.31) ವ್ಯಾಪಕ ಮಳೆ ಸುರಿದಿದ್ದು, ಶಾಂಭವಿ (Shambavi River) ಸೇರಿ ಹಲವು ನದಿಗಳು ನದಿಪಾತ್ರದಲ್ಲಿ ತನ್ನ ಗಡಿ ಹಿಗ್ಗಿಸಿ ಹರಿಯುತ್ತಿದೆ.
ರೆಂಜಾಳದಲ್ಲಿ ದಾಖಲೆಯ ಮಳೆ
ಗುರುವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾರ್ಕಳ ತಾಲೂಕಿನ ರೆಂಜಾಳದಲ್ಲಿ ಬರೋಬ್ಬರಿ 319.5 ಮಿ.ಮೀ ಮಳೆಯಾಗಿದೆ. ಕಾರ್ಕಳದ ಸಾಣೂರಿನಲ್ಲಿ 289.5 ಮಿ.ಮೀ, ಕುಂದಾಪುರದ ಮಡಾಮಕ್ಕಿಯಲ್ಲಿ 278.5 ಮಿ.ಮೀ, ಶಿರ್ತಾಡಿಯಲ್ಲಿ 269 ಮಿ.ಮೀ, ಮರೋಡಿಯಲ್ಲಿ 264 ಮಿಮೀ, ಕಾರ್ಕಳ ನಗರದಲ್ಲಿ 241.4 ಮಿ.ಮೀ ಮಳೆಯಾಗಿದೆ.
ಕಾರ್ಕಳದ ಸಾಣೂರಿನಿಂದ ನಿಟ್ಟೆ, ಬೋಳ, ಮುಂಡ್ಕೂರು ಗ್ರಾಮಗಳಲ್ಲಿ ಹರಿಯುವ ಶಾಂಭವಿ ನದಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಣದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಲವಾರು ಮನೆಗಳಿಗೆ, ಅಂಗಡಿಗಳಿಗೆ, ಹಟ್ಟಿಗಳಿಗೆ ನೀರು ನುಗ್ಗಿದೆ.
ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಶೆಟ್ಟಿ, ಸುರೇಶ್ ಶೆಟ್ಟಿ, ಭಾಸ್ಕರ ಶೆಟ್ಟಿ ಯವರ ಮನೆ ಹಟ್ಟಿ ಮುಳುಗಡೆಯಾಗಿದೆ. ಸಾವಿರಕ್ಕೂ ಮಿಕ್ಕಿ ತೆಂಗಿನಕಾಯಿ ನೀರು ಪಾಲಾಗಿದ್ದು ಗೊಬ್ಬರ ಮುಟ್ಟೆ ನೀರಲ್ಲಿ ತೇಲಿ ಹೋಗಿದೆ.