ಬೆಂಗಳೂರು : ಅಣ್ಣಾಮಲೈ ಚುನಾಯಿತ ಪ್ರತಿನಿಧಿಯಲ್ಲ, ಅವರು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಮಾತ್ರ. ಸರಕಾರದ ಭಾಗವಲ್ಲ. ತಮಿಳುನಾಡಿನಲ್ಲಿ ಸರಕಾರದ ಭಾಗವಾಗಿರುವುದು ಕಾಂಗ್ರೆಸ್ ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲವೇ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕೀಯ ಕಾರಣಕ್ಕಾಗಿ ಈ ಆರೋಪ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಹಂಚಿಕೆಯಾದ ನೀರಿನ ಬಗ್ಗೆ ವಿವಾದ ತೆಗೆಯಬೇಡಿ ಎಂದು ತಮಿಳುನಾಡು ಕಾಂಗ್ರೆಸ್ ಶಾಸಕರಿಗೆ ಮೊದಲು ಬುದ್ಧಿ ಹೇಳಿ ಎಂದು ಟೀಕಿಸಿದರು.
ಕಾಂಗ್ರೆಸ್ ಪಾದಯಾತ್ರೆಗೆ ನಮ್ಮ ವಿರೋಧವಿಲ್ಲ. ಆದರೆ ಕೋವಿಡ್ ಹೆಚ್ಚುತ್ತಿರುವಾಗ 25 ಸಾವಿರ ಜನರನ್ನು ಸೇರಿಸಿ ಹೋರಾಟ ಮಾಡುವುದು ಎಷ್ಟು ಸರಿ ? ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಯಾವುದೇ ಕೆಲಸ ಮಾಡಲಿಲ್ಲ. ಈಗ ಹೋರಾಟ ಮಾಡುತ್ತಾರೆ. ಚುನಾವಣಾ ಸಂದರ್ಭದಲ್ಲಿ ವೋಟ್ ಬ್ಯಾಂಕ್‌ಗಾಗಿ ಇಂಥ ರಾಜಕಾರಣ ಸರಿಯಲ್ಲ. ಕೋವಿಡ್ ಹೆಚ್ಚುತ್ತಿರುವುದರಿಂದ ಹೋರಾಟ ಕೈ ಬಿಡಿ ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು.
ಮೇಕೆದಾಟು ಯೋಜನೆಗಾಗಿ ಬಿಜೆಪಿ ಏನನ್ನೂ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸುವುದರಲ್ಲಿ ಅರ್ಥವಿಲ್ಲ. ನಾವು ಕಾನೂನು ತಜ್ಞರ ತಂಡದ ಜತೆಗೆ ಕೇಂದ್ರಕ್ಕೆ ತೆರಳಿ ಪರಿಸರ ಅನುಮತಿ ಪಡೆಯಲು ಹೋರಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡು ಸರಕಾರ ಸಲ್ಲಿಸಿರುವ ಅರ್ಜಿಯ ವಿರುದ್ಧ ಸೂಕ್ತ ರೀತಿಯಲ್ಲಿ ಕಾನೂನು ಸಮರ ಮಾಡುತ್ತಿದ್ದೇವೆ ಎಂದರು.
ಕೋವಿಡ್ ನಿಯಂತ್ರಣ ಮಾಡುವುದು ಸರಕಾರದ ಜವಾಬ್ದಾರಿ. ಆದರೆ ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಹೇಳಿದರು.