Advertisement

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

08:40 PM Oct 20, 2021 | Team Udayavani |

ಬ್ರಹ್ಮಾವರ: ಗ್ರಾಮೀಣ ಪ್ರದೇಶದ ಜನರು ಇಲಾಖೆಗಳ ಸವಲತ್ತು ಪಡೆಯಲು ಅರ್ಜಿ ಸಲ್ಲಿಸುವುದೇ ಒಂದು ರೀತಿಯ ಹರಸಾಹಸ. ಈ ನಡುವೆ ಬ್ರಹ್ಮಾವರ ತಾಲೂಕಿನ ಗ್ರಾಮಾಂತರ ಭಾಗದ ಕರ್ಜೆ ಗ್ರಾಮ ಪಂಚಾಯತ್‌ನಲ್ಲಿ ತೆರೆಯಲಾದ ಹೆಲ್ಪ್ ಡೆಸ್ಕ್ ಮಾದರಿ ಹಾಗೂ ವಿಶಿಷ್ಟ ಪ್ರಯೋಗವಾಗಿದೆ.

Advertisement

ಸಂಪೂರ್ಣ ಉಚಿತ ಸೇವೆ
ಗ್ರಾ.ಪಂ.ನಲ್ಲೇ ಎಲ್ಲ 63 ಇಲಾಖೆಗಳ ಅರ್ಜಿ ನಮೂನೆಗಳು ಲಭ್ಯವಿದ್ದು, ಅರ್ಜಿಗಳನ್ನು ಭರ್ತಿ ಮಾಡಿ ಕೊಡಲಾಗುತ್ತಿದೆ. ಇದು ಗ್ರಾಮಸ್ಥರಿಗೆ ಸಂಪೂರ್ಣ ಉಚಿತವಾದ ಸೇವೆಯಾಗಿದೆ.

ನಿತ್ಯ 30 ಮಂದಿಗೆ ಪ್ರಯೋಜನ
ಪಂಚಾಯತ್‌ನ ನೂತನ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ ಅವರು ಚುನಾಯಿತರಾದ ಪ್ರಾರಂಭದ ದಿನದಲ್ಲಿ ಓರ್ವ ಕೃಷಿ ಕಾರ್ಮಿಕ ಮಹಿಳೆ ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಪರದಾಡುತ್ತಿರುವುದು ಗಮನಿಸಿದರು. ಶೇ.50ಕ್ಕಿಂತ ಹೆಚ್ಚು ಕಾರ್ಮಿಕರು, ವಯಸ್ಕರು, ಅನಕ್ಷರಸ್ಥರಿರುವ ನಮ್ಮ ಪಂಚಾಯತ್‌ನಲ್ಲೇ ಯಾಕೆ ಎಲ್ಲ ಅರ್ಜಿಗಳನ್ನು ಇಟ್ಟು ಭರ್ತಿ ಮಾಡಿ ಕೊಡಬಾರದು ಎಂದು ಯೋಚಿಸಿದರು. ತತ್‌ಕ್ಷಣ ಹೆಲ್ಪ್ ಡೆಸ್ಕ್ ಕಾರ್ಯ ರೂಪಕ್ಕೆ ತಂದು ಪ್ರಾರಂಭದಲ್ಲಿ ಅತೀ ಅಗತ್ಯದ 5, 6 ಅರ್ಜಿಗಳನ್ನು ಇರಿಸಿದರು. ಅನಂತರ ಅಗತ್ಯತೆಯನ್ನು ಮನಗಂಡು ಹೆಚ್ಚಿಸಿ ಈಗ ಎಲ್ಲ 63 ಇಲಾಖೆಗಳ ಅರ್ಜಿಗಳು ದೊರೆಯುತ್ತಿವೆ. ಪಂಚಾಯತ್‌ ಸದಸ್ಯೆ ಸುಗುಣಾ ರವೀಂದ್ರ ನಾಯ್ಕ ಅವರೇ ಸ್ವತಃ ಗ್ರಾಮಸ್ಥರಿಗೆ ಉಚಿತವಾಗಿ ಅರ್ಜಿ ಭರ್ತಿ ಮಾಡಿ ನೀಡುತ್ತಿದ್ದಾರೆ. ಪ್ರತಿನಿತ್ಯ ಸರಾಸರಿ 30 ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಜನರು ಪಂಚಾಯತ್‌ ಸಹಿತ ವಿವಿಧ ಇಲಾಖೆಗಳಿಂದ ಸೌಲಭ್ಯಗಳನ್ನು ತ್ವರಿತವಾಗಿ ಪಡೆಯಲು ಇದು ಸಹಕಾರಿಯಾಗಿದೆ. ಅಲ್ಲದೆ ಒಂದು ದಿನದ ಒಳಗೆಯೇ ಪಂಚಾಯತ್‌ ಶಿಫಾರಸು ಪತ್ರ ಸಹ ದೊರೆಯಲು ಸಾಧ್ಯವಾಗಿದೆ.ಪಂಚಾಯತ್‌ ಅಧ್ಯಕ್ಷರು, ಕೆಲವು ಸದಸ್ಯರು ತಮ್ಮ ಗೌರವ ಧನವನ್ನು ಈ ಕಾರ್ಯಕ್ಕೆ ವಿನಿಯೋಗಿಸುತ್ತಿದ್ದಾರೆ. ದಾನಿಗಳು ಕೂಡ ಅರ್ಜಿಯನ್ನು ಖರೀದಿಸಿ ಹೆಲ್ಪ್  ಡೆಸ್ಕ್ ಗೆ ನೀಡುತ್ತಿದ್ದಾರೆ.

ಇದನ್ನೂ ಓದಿ:ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

Advertisement

6 ತಿಂಗಳುಗಳಿಂದ ಕಾರ್ಯ
ವಿನೂತನ ಯೋಜನೆಯಿಂದ ವಯಸ್ಕರು, ಮಹಿಳೆಯರಿಗೆ ವರದಾನವಾಗಿದೆ. ಹಣ, ಸಮಯ ಉಳಿಯುತ್ತಿದೆ. 6 ತಿಂಗಳುಗಳಿಂದ ಯಶಸ್ವಿ ಯಾಗಿ ನಡೆಯುತ್ತಿದೆ. ರಜಾ ದಿನಗಳನ್ನು ಹೊರತುಪಡಿಸಿ ಪ್ರತಿನಿತ್ಯ ಬೆಳಗ್ಗೆ 10ರಿಂದ ಅಪರಾಹ್ನ 2 ಗಂಟೆಯವರೆಗೆ ಹೆಲ್ಪ್ ಡೆಸ್ಕ್ ಪಂಚಾಯತ್‌ನಲ್ಲಿ ಕಾರ್ಯಾಚರಿಸುತ್ತಿದೆ.

ಕರ್ಜೆ ಗ್ರಾಮ ಪಂಚಾಯತ್‌ ಜನಪ್ರತಿನಿಧಿಗಳ ಈ ಪರಿಕಲ್ಪನೆ ಇತರರಿಗೆ ಮಾದರಿಯಾಗಿದೆ. ಇದರ ಅನುಕರಣೆಯಿಂದ ಗ್ರಾಮೀಣ ಪ್ರದೇಶಗಳ ವಯಸ್ಕರು, ಅನಕ್ಷರಸ್ಥರಿಗೆ ಸಹಾಯವಾಗಲಿದೆ.

ಬಹಳಷ್ಟು ಅನುಕೂಲ
ಕರ್ಜೆ ಗ್ರಾಮಸ್ಥರು ಹಲವು ಅರ್ಜಿಗಳನ್ನು ಪಡೆಯಲು ಸುಮಾರು 20 ಕಿ.ಮೀ. ದೂರದ ಬ್ರಹ್ಮಾವರಕ್ಕೆ ತೆರಳಬೇಕಿತ್ತು. ಅಲ್ಲದೆ ಗ್ರಾಮೀಣ ಪ್ರದೇಶವಾದ್ದರಿಂದ ಬಹುತೇಕ ಮಂದಿ ಅರ್ಜಿ ಬರೆಯಲು ಪರದಾಡುತ್ತಿದ್ದರು. ವಿನೂತನ ಹೆಲ್ಪ್ ಡೆಸ್ಕ್ ಪ್ರಾರಂಭದಿಂದ ಬಹಳಷ್ಟು ಅನುಕೂಲವಾಗಿದೆ.

ಅವಶ್ಯ ಸೇವೆ
ಚರಂಡಿ, ರಸ್ತೆ ನಿರ್ಮಾಣ ಮಾತ್ರವೇ ಜನರ ಆವಶ್ಯಕತೆಯಲ್ಲ. ಮೂಲ ಸಮಸ್ಯೆ ನಿವಾರಣೆ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಜನರ ಸಹಾಯಕ್ಕಾಗಿ ಪ್ರಾರಂಭಿಸಲಾದ ಹೆಲ್ಪ್ ಡೆಸ್ಕ್ ಯಶಸ್ವಿಯಾಗಿದೆ.
-ರಾಘವೇಂದ್ರ ಶೆಟ್ಟಿ,
ಅಧ್ಯಕ್ಷರು, ಕರ್ಜೆ ಗ್ರಾ.ಪಂ.

-ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next