Advertisement

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಮೌನ ಸೇವಕ ಕರಿಯಪ್ಪ !

11:50 AM Jul 20, 2019 | Suhan S |

ಹಾವೇರಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳು, ಹೋರಾಟಕ್ಕೆ ರೂಪಕೊಟ್ಟ ಮೌಲ್ಯಗಳು ಜಿಲ್ಲೆಯಲ್ಲಿ ಸಮೃದ್ಧವಾಗಿವೆ. ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರ ಆತ್ಮಾರ್ಪಣೆಯ ರೋಮಾಂಚಕ ಕಥೆಗಳಲ್ಲಿ ಸಂಗೂರ ಕರಿಯಪ್ಪನವರ ಹೋರಾಟ ವಿಶಿಷ್ಟವಾಗಿದ್ದು, ರೋಮಾಂಚನಕಾರಿಯಾಗಿದೆ.

Advertisement

ಸಂಗೂರಿನ ಕರಿಯಪ್ಪ ಯರೇಶಿಮೆ ಅವರು ತಿಲಕರ ‘ಕೇಸರಿ’ ಪತ್ರಿಕೆ ಹಾಗೂ ಗಾಂಧಿಧೀಜಿಯವರ ‘ಯಂಗ್‌ ಇಂಡಿಯಾ’ ಪತ್ರಿಕೆ ಓದಿ ಪ್ರಭಾವಿತರಾದವರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳು ಯಾವ ರೀತಿ ಕೆಲಸ ಮಾಡಿದವು ಎಂಬುದಕ್ಕೆ ಕರಿಯಪ್ಪ ಅವರೇ ಸಾಕ್ಷಿಯಾಗಿದ್ದಾರೆ.

ಡಾ| ಎನ್‌.ಎಸ್‌. ಹರ್ಡೀಕರ ಅವರ ಸಾನ್ನಿಧ್ಯದಲ್ಲಿ ಸೇವಾದಳ ಶಿಕ್ಷಣ ಪಡೆದು ಸಾಮೂಹಿಕ ಅಸಹಕಾರ ಚಳವಳಿ, ವೈಯಕ್ತಿಕ ಕಾಯಿದೆ ಭಂಗ ಚಳವಳಿಗಳ ಪ್ರಾತಿನಿಧಿಕ ಸತ್ಯಾಗ್ರಹದಲ್ಲಿ ಕರಿಯಪ್ಪನವರ ಪಾತ್ರ ಹಿರಿದಾಗಿತ್ತು. ಸುಮಾರು 10 ವರ್ಷಗಳ ಕಾಲ ಸೆರೆವಾಸ ಕಂಡ ಕರಿಯಪ್ಪ, ‘ದಶರಥ’ ಎಂಬ ಗುಪ್ತನಾಮದಿಂದ ಬ್ರಿಟಿಷರಿಗೆ ತಲೆನೋವಾಗಿದ್ದರು. ಶಾಂತಿ ಮತ್ತು ಕ್ರಾಂತಿಗಳ ಸಂಗಮವೆನಿಸಿದ್ದ ಸಂಗೂರು ಕರಿಯಪ್ಪ, ಖಾದಿ ತೊಟ್ಟು ಮೈಲಾರ ಮಹಾದೇವಪ್ಪ ನವರೊಡನೆ ಬೆರತು ಚಳವಳಿಯಲ್ಲಿ ಸಕ್ರಿಯರಾಗಿ ಹೋರಾಡಿದರು.

1940ರಲ್ಲಿ ಮಹಾತ್ಮಗಾಂಧೀಜಿ ಬೆಂಬಲ ಹಾಗೂ ಆಶೀರ್ವಾದ ದೊಂದಿಗೆ ಅವರ ಸಾಕು ಮಗಳು ಎಂದೇ ಕರೆಯಲಾಗುತ್ತಿದ್ದ ಬೀರಮ್ಮ ಅವರನ್ನು ಮದುವೆಯಾದರು. ಪತಿ ಪತ್ನಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾಗಿ ದುಡಿದರು.

ಬ್ರಿಟಿಷರಿಗೆ ಸಿಂಹಸ್ವಪ್ನ: ಬ್ಯಾಡಗಿ ರೈಲು ನಿಲ್ದಾಣ ಭಸ್ಮ, ಮಾಸೂರು ಚಾವಡಿ ಸುಟ್ಟಿದ್ದು, ಅರಣ್ಯ ಅಧಿಕಾರಿಯ ಹಣ ಕೊಳ್ಳೆ ಹೊಡೆದಿದ್ದು, ಸರ್ಕಾರಿ ದಾಖಲೆಗಳ ನಾಶ, ಅಂಚೆ ತಂತಿ ಕತ್ತರಿಸಿದ್ದು ಹೀಗೆ ಹತ್ತಾರು ಬಗೆಯಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪ ಅವರನ್ನು ಹುಡುಕಿಕೊಟ್ಟರೆ 500ರೂ. ಬಹುಮಾನ ನೀಡುವುದಾಗಿ ಬ್ರಿಟಿಷ್‌ ಸರ್ಕಾರ ಘೋಷಿಸಿ, ಜಿಲ್ಲೆಯ ವಿವಿಧೆಡೆ ಈ ಕುರಿತು ಭಿತ್ತಿಪತ್ರಗಳನ್ನು ಅಂಟಿಸುವ ವ್ಯವಸ್ಥೆ ಮಾಡಿತ್ತು. ಇದಕ್ಕೆ ಜಗ್ಗದ ಸಂಗೂರ ಕರಿಯಪ್ಪ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಹೋರಾಟ ಮಾಡಿ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದರು.

Advertisement

ಸಂಗೂರ ಕರಿಯಪ್ಪನವರ ತಂಡ ಜೋಳದ ಹೊಲದಲ್ಲಿ, ಪೊದೆ, ಕಾನುಗಳಲ್ಲಿ ಬೀಡುಬಿಡುತ್ತಿತ್ತು. ಇಲ್ಲಿಂದ ಸ್ವಾತಂತ್ರ್ಯ ಹೋರಾಟಗಾರರ ಮೂಲಕ ಹತ್ತಿರದ ಮನೆಗಳಿಗೆ ಮಾಹಿತಿ ರವಾನಿಸಿ ಅಲ್ಲಿಂದ ಊಟ ತರಿಸಿಕೊಳ್ಳುತ್ತಿದ್ದರು. ಹಲವು ವೇಳೆ ಅವರಿಗೆ ಊಟವೂ ಸಿಗುತ್ತಿರಲಿಲ್ಲ. ಸ್ಥಳ ಬದಲಾಯಿಸುತ್ತಲೇ ಇರುತ್ತಿದ್ದರು.

1943ರಲ್ಲಿ ಒಮ್ಮೆ ಹಿರೇಕೆರೂರು ತಾಲೂಕು ಸುಣಕಲ್ ಬಿದರಿಗೆ ಬಂದು ಜೋಳದ ಹೊಲದಲ್ಲಿ ಅಡಗಿರುವ ಮಾಹಿತಿ ಬ್ರಿಟಿಷರ ಕಿವಿಗೆ ಬಿತ್ತು. ಆಗ ಪೊಲೀಸರು 15 ಎಕರೆ ಹೊಲದ ಸುತ್ತ ಕಾವಲು ಹಾಕಿದರು. ಇದನ್ನು ತಿಳಿದ ಕರಿಯಪ್ಪ ತಂಡ ಮಧ್ಯ ರಾತ್ರಿಯೇ ಅಲ್ಲಿಂದ ಬೇರೆ ಕಡೆ ಹೋಗಲು ತೀರ್ಮಾನಿಸಿತು. ಆಗ ಕರಿಯಪ್ಪನವರಿಗೆ ಹೊಲದಲ್ಲಿ ಪೊಲೀಸರು ಬಾಂಬ್‌ ಇಟ್ಟಿರುವುದು ಗೋಚರಿಸಿತು. ಬಾಂಬ್‌ ಸಿಡಿದರೆ ತಾವೆಲ್ಲ ಪೊಲೀಸರ ವಶವಾಗುವುದು ಖಚಿತ ಎಂದರಿತ ಕರಿಯಪ್ಪನವರು ಬಾಂಬನ್ನು ಕೈಯಲ್ಲಿ ಒತ್ತಿ ಹಿಡಿದರು. ಎಲ್ಲರೂ ಮುಂದೆ ಹೋದ ಬಳಿಕ ಕೈ ಬಿಟ್ಟು ಓಡಿದರು. ಆದರೂ ಬಾಂಬ್‌ ಸಿಡಿದು ಬಲಗೈಯ ಮುಂಗೈ ಛಿದ್ರಗೊಂಡಿತು.

ಗರ್ಭಿಣಿ ವೇಷ: ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಕರಿಯಪ್ಪನವರ, ಪಕ್ಕದ ಹಳ್ಳಿಗೆ ಹೋಗಿ ಮನೆಯೊಂದರ ಕದ ತಟ್ಟಿ, ಅಲ್ಲಿ ಉಪಚರಿಸಿಕೊಂಡರು.

ಛಿದ್ರಗೊಂಡ ಕೈಗೆ ವೈದ್ಯರ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿತ್ತು. ಆಗ ಅವರು ದಾವಣಗೆರೆಯ ವೈದ್ಯರ ಬಳಿ ಹೋಗಲು ನಿರ್ಧರಿಸಿದ್ದರು. ಆದರೆ, ಬ್ರಿಟಿಷ್‌ ಪೊಲೀಸರ ಕಣ್ಣು ತಪ್ಪಿಲು ಅವರು ಚಕ್ಕಡಿಯೊಂದರಲ್ಲಿ ಹುಲ್ಲು ಹಾಕಿ ಕರಿಯಪ್ಪನವರ ಹೊಟ್ಟೆ, ಹಾಗೂ ಮುಖದ ಸುತ್ತ ಬಟ್ಟೆ ಸುತ್ತಿ ಗರ್ಭಿಣಿಯಂತೆ ಮಲಗಿಸಿಕೊಂಡು ಮೂವರು ಹೆಂಗಸರು, ಮೂವರು ಗಂಡಸರು ಕುಳಿತು ಆಸ್ಪತ್ರೆಗೆ ಕರೆದೊಯ್ದರು. ಮಾರ್ಗ ಮಧ್ಯೆ ಪೊಲೀಸರು ಬಂದಾಗ ಕರಿಯಪ್ಪನವರು ಗರ್ಭಿಣಿಯಂತೆ ನರಳಾಡಿದರೆ, ಉಳಿದ ಹೆಂಗಸರು ಹೆರಿಗೆ ನೋವು ಬಂದಿದೆ ಎನ್ನುತ್ತ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಗಂಭೀರ ಗಾಯದ ಕಾರಣ ವೈದ್ಯರು ಮುಂಗೈ ಕತ್ತರಿಸಿ ಚಿಕಿತ್ಸೆ ನೀಡಿದರು.

ಈ ವಿಷಯ ಪೊಲೀಸರಿಗೆ ಗೊತ್ತಾದಾಗಿದೆ ಎಂದು ತಿಳಿದಾಗ ಕರಿಯಪ್ಪನವರು ಆಸ್ಪತ್ರೆಯ ಹಿಂಬಾಗಿಲಿನಿಂದ ಓಡಲು ಯತ್ನಿಸಿದರು. ಆದರೆ, ಆ ಯತ್ನ ವಿಫಲವಾಗಿ ಪೊಲೀಸರ ವಶವಾದರು. ಮರುದಿನ ಕರಿಯಪ್ಪನವರ ಮೈಗೆ ಬಣ್ಣ ಬಳಿದ ಪೊಲೀಸರು ದಾವಣಗೆರೆ ಪಟ್ಟಣದಲ್ಲಿ ಮೆರವಣಿಗೆ ಮಾಡಿಕೊಂಡು ಒಯ್ದರು. ತುಂಡಾದ ಕೈ ನೋವು, ಬ್ರಿಟಿಷರ ಹಿಂಸೆ ಅನುಭವಿಸುತ್ತಲೇ ಜೈಲುಪಾಲಾದರು.

ಬಳಿಕ ಗಾಂಧೀಜಿಯವರ ಅಣತಿಯಂತೆ ತಡಸ ಗ್ರಾಮದಲ್ಲಿ ಆಶ್ರಮ ಸ್ಥಾಪಿಸಿ ಗ್ರಾಮ ಸ್ವರಾಜ್ಯದ ಗಾಂಧೀಜಿ ಕನಸನ್ನು ನನಸಾಗಿಸಲು ದುಡಿದು ‘ಮೌನ ಸೇವಕ’ ಎಂದು ಕರೆಸಿಕೊಂಡರು. 20-7-1981ರಲ್ಲಿ ಇಹಲೋಕ ತ್ಯಜಿಸಿದರು.

ಇಂದು ಪುಣ್ಯಸ್ಮರಣೆ: ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪ ಸ್ಮಾರಕ ಟ್ರಸ್ಟ್‌ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪನವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ತಾಲೂಕಿನ ಸಂಗೂರು ಗ್ರಾಮದಲ್ಲಿ ಜು. 20ರಂದು ಬೆಳಗ್ಗೆ 10ಗಂಟೆಗೆ ಸಂಘಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next