ಬದಿಯಡ್ಕ: ತುಳುನಾಡಿನ ದೈವಾರಾಧನೆಯು ಐತಿಹ್ಯದ ಪುಟಗಳನ್ನು ಒಂದೊಂದಾಗಿ ತೆರೆದಿಟ್ಟು ಜನರಿಗೆ ಆದರ ಪರಿಚಯವನ್ನು ಮಾಡುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಹಿಂದೆ ಇದ್ದ ಆಚಾರ ವಿಚಾರಗಳನ್ನು, ರೀತಿ ನೀತಿಗಳನ್ನು ಇಂದಿಗೂ ಜೀವಂತವಾಗಿಸಿಡುವಲ್ಲಿ ಯಶಸ್ವಿಯಾಗಿದೆ.
ಇಂತಹ ಆಚರಣೆಗಳ ಮೂಲಕ ಜನರ ನಡುವೆ ಇದ್ದ ಸಾಮರಸ್ಯದ ಬಾಗಿಲು ತೆರೆಯುವುದು ಕೆಲವೊಮ್ಮೆ ಗೋಚರವಾಗುತ್ತದೆ. ಇಂತಹ ಒಂದು ಪ್ರಸಂಗ ಆನಾವರಣವಾಗುವುದು ಬಬ್ಬರ್ಯನ ಕೋಲ ನಡೆಯು ಮಾಂಚಿಯ ತಮಾಷೆ, ಬಬ್ಬರ್ಯನ ಕಾರಣಿಕ ನೋಡುವ ಭಕ್ತರ ಹೃದಯದಲ್ಲಿ ವಿಶೇಷವಾದ ಭಾವವನ್ನು ಆರಳಿಸುತ್ತದೆ.
ಇತ್ತೀಚಿಗೆ ಪಳ್ಳತ್ತಡ್ಕ ಕರಿಪಾಡಗಂ ತರವಾಡಿನಲ್ಲಿ ಸಂಪನ್ನಗೊಂಡ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಭಕ್ತ ಜನರಿಗೆ ಈ ದೈವಗಳ ನರ್ತನವನ್ನು ಕಂಡು, ಕಥೆಯನ್ನು ಶ್ರವಿಸುವ ಭಾಗ್ಯ ದೊರೆಯಿತು.
ಮಾಂಚಿ ತೆಯ್ಯಂ-ಹಿನ್ನೆಲೆ
ಮುಸ್ಲಿಂ ದೈವವಾದ ಆಲಿಯ ಜತೆ ಪೀಯಾಯಿ ಎಂಬ ಹಾಸ್ಯಾಗಾರ ದೈವವಿರುವಂತೆ ತುಳುನಾಡಿನ ಕೆಲವೆಡೆ ಬೊಬ್ಬರ್ಯನ ದೈವಕಟ್ಟಿನಲ್ಲಿ ಅವನ ಸಹಾಯಕನಾಗಿ ಲೆಕ್ಕ ಬರೆಯುವ ವ್ಯಕ್ತಿಯಾಗಿ ದೈವವೊಂದನ್ನು ಕಟ್ಟಿ ಕೊಂಡಾಡಲಾಗುತ್ತದೆ. ಸರಳ ವೇಷದ ಇದು ಲೆಕ್ಕಣಿಕೆ ಬರೆಯುವಂತೆ ಹಾಸ್ಯಪೂರಿತ ಅಭಿನಯ ಮಾಡುತ್ತದೆ. ಕುಂಬಳೆ ಸೀಮೆಯಲ್ಲಿ ಇದೇ ಬಬ್ಬರ್ಯನ ನೇಮೋತ್ಸವದಲ್ಲಿ ಮಾಂಚಿ ಎಂಬ ಸ್ತ್ರೀ ಬೊಬ್ಬರ್ಯನಿಂದಾಗಿ ಮಾಯಕಗೊಂಡು ಅವನೊಡನೆ ಸೇರಿಕೊಂಡಿತೆಂಬ ಹೇಳಿಕೆಯಿದೆ. ಕೆಲವೆಡೆ ಪೈಕ ಮಣವಾಟಿ ಬೀವಿಯ ಅಂಶಾವತಾರವೇ ಮಾಂಚಿ ತೆಯ್ಯಂ ಎಂದು ಹೇಳಲಾಗುತ್ತದೆ.
ಬೊಬ್ಬರ್ಯನ್ ದೈವದ ಆರಂಭಿಕ ದರ್ಶನ, ಕುಣಿತಗಳು ಕಳೆದ ಬಳಿಕ ಮಧ್ಯಾಂತರದಲ್ಲಿ ಮಾನಿc ಪ್ರವೇಶವಾಗುತ್ತದೆ. ಈ ದೈವಕ್ಕೆ ಯಾವದೇ ದರ್ಶನ ಪಾತ್ರಿಯಿರುವುದಿಲ್ಲ . ಅಲ್ಲದೆ ದೈವಾವೇಶವಾಗುವುದೂ ಇಲ್ಲ. ಮುಸ್ಲಿಂ ಸ್ತ್ರೀ ಧರಿಸುವ ವೇಷಭೂಷಣದಲ್ಲಿಯೇ ಶೋಭಿಸುವ ಮಾಂಚಿಯ ಸಾಧಾರಣವಾಗಿ ಕೆಂಪು ಜರಿತಾರಿ ಸೀರೆ (ಪಟ್ಟೆ ಸೀರೆ) ಮೈಮೇಲೆ ಹೊದೆದು ತಲೆಗೆ ಶಾಲನ್ನು (ತಟ್ಟಂ) ಹಾಸಿಕೊಳ್ಳುತ್ತದೆ ಮುಖಕ್ಕೆ ಸ್ತ್ರೀಯಂತೆಯೇ ಅಲಂಕಾರ ಮಾಡಿ ಕೈಯಲ್ಲಿ ಮಣಿಗಂಟೆ, ಚವಲ (ಚಮರ ಮೃಗದ ಉದ್ದವಾದ ಕೂದಲಿನ ನವಿರಾದ ಎಳೆಗಳ ಗೊಂಚಲು) ಹಿಡಿಯುತ್ತದೆ.
ಮಾಂಚಿ ತೆಯ್ಯವು ಆರಂಭವಾದೊಡನೆ ಬೊಬ್ಬರ್ಯನೊಂದಿಗೆ ಮಲೆಯಾಳ ಭಾಷೆಯಲ್ಲಿ ಕುಶಲ ಸಮಾಚಾರವನ್ನು ಮಾತನಾಡುತ್ತಾ ತನ್ನ ಅಸ್ತಿತ್ವವನ್ನು ತಿಳಿಸುತ್ತದೆ. ಮುಸ್ಲಿಂ ತೆಯ್ಯವಾದರೂ ಬೊಬ್ಬರ್ಯನ ಮೂಲಕ ಇಸ್ಲಾಂನ ಬಗ್ಗೆ ಮಾಹಿತಿ ಸಿಗುವುದಿಲ್ಲ. ಆದರೆ ಬೊಬ್ಬರ್ಯನು ಆಚಾರಗಳನ್ನು ಪ್ರಾತಕ್ಷಿಕೆ ನಡೆಸುತ್ತದೆ. ಮಾನಿc ಹಾಗೂ ಬೊಬ್ಬರ್ಯ ದೈವದ ನಡುವೆ ನಡೆಯುವ ಸಂಭಾಷಣೆಯು ಹಾಸ್ಯದಿಂದ ಕೂಡಿದ್ದು ನೆರೆದ ಭಕ್ತರಿಗೆ ಅಲ್ಲಿ ಮನರಂಜನೆ ಸಿಗುತ್ತದೆ.
ಮಾಂಚಿ ಓರ್ವಳು ಸಂಪ್ರದಾಯಸ್ಥ ಪ್ರತಿಭಾವಂತ ಹೆಣ್ಣು ಎಂಬುದನ್ನು ಬೊಬ್ಬರ್ಯನ್ ದೈವವು ನೇಮೋತ್ಸವದಲ್ಲಿ ಆಕೆಯ ಪ್ರತಿಭೆಯನ್ನು ಹೊರಗೆಡಹುತ್ತಾ ತೋರಿಸಿ ಕೊಡುತ್ತದೆ. ನಿನಗೆ ಹಾಡಲು ಬರುತ್ತದೆಯೇ ? ಶಾಸ್ತ್ರ ಓದಿದ್ದೀಯಾ ? ನಮಾಜು ಮಾಡಲು ಗೊತ್ತಿದೆಯೇ ? ಎಂದೆಲ್ಲಾ ಕೇಳಿ, ಓರ್ವಳು ಮುಸ್ಲಿಂ ಸ್ತ್ರೀ ತನ್ನ ಮತಕ್ಕನುಯಾಯಿಯಾಗಿ ಏನೆಲ್ಲಾ ಕಲಿತಿರಬೇಕೆಂಬುದನ್ನು ಸಮಾಜಕ್ಕೆ ತೋರಿಸಿಕೊಡುತ್ತದೆ.
ನೀನು ಯಾವುದೆಲ್ಲ ಮಸೀದಿಗೆ ಹೋಗಿದ್ದಿ ? ಎಂದು ಬೊಬ್ಬರ್ಯನ್ ಕೇಳಿದ್ದಕ್ಕೆ ಮಾನಿcಯು ಉತ್ತರವಾಗಿ ನಾನು ಪೂರ್ವದಲ್ಲಿ ಪೈಕ ಮಣವಾಟಿ ಬೀವಿ ಜಾರಂ, ಪಶ್ಚಿಮದಲ್ಲಿ ನೆಲ್ಲಿಕುನ್ನು ಮುಹಿಯಿದ್ದೀನ್ ಪಳ್ಳಿ, ದಕ್ಷಿಣದಲ್ಲಿ ಮಾಲಿಕ್ ದೀನಾರ್ ಪಳ್ಳಿ , ಹಾಗೂ ಉಳ್ಳಾಲ ದರ್ಗ, ಇಚ್ಲಂಗೋಡು, ಕಯ್ನಾರು, ಬಾಯಾರು ಪಳ್ಳಿಯನ್ನೆಲ್ಲಾ ನೋಡಿದ್ದೇನೆ ಎಂದು ಹೇಳುತ್ತದೆ.
ಬೊಬ್ಬರ್ಯನ್ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ ಸೊಗಸಾಗಿ ಮಾಂಚಿ ಮಲಯಾಳ ಭಾಷೆಯಲ್ಲಿ ಉತ್ತರ ನೀಡುತ್ತಾ ಮಾಪಿಳ್ಳೆ ಹಾಡುಗಳನ್ನು ಹಾಡಿ ನಮಾಜು ಮಾಡಿ ಉತ್ತಮ ಹುಡುಗಿ ಎಂದು ಶಹಬ್ಟಾಸ್‌ಗಿರಿ ಗಿಟ್ಟಿಸುತ್ತದೆ. ಮಾಂಚಿಯ ಪ್ರತಿಭೆ, ಸಾಮರ್ಥ್ಯವನ್ನು ಕಂಡು ಮೆಚ್ಚಿದ ಬಬ್ಬರ್ಯನ್ ಆಕೆಯನ್ನು ಬಂಬತ್ತಿ ಪೆಣ್ಣ್ (ಬೊಂಬಾಟ್ ಹುಡುಗಿ) ಎಂದು ಹೊಗಲಿ ಕರೆಯುತ್ತದೆ. ಮಾಂಚಿ ತೆಯ್ಯವನ್ನು ನಲಿಕೆ ಸಮುದಾಯದ ಕಲಾವಿದರು ಕಟ್ಟುವುದಾಗಿದೆ.
*ಅಖೀಲೇಶ್ ನಗುಮುಗಂ