ಪುಂಜಾಲಕಟ್ಟೆ: ಬ್ರಹ್ಮಕಲಶೋತ್ಸವಗಳು ದೇವರ ಸಾಕ್ಷಾತ್ಕಾರದ ಜತೆ ಸಮಾಜದ ಉನ್ನತಿಗೆ ಕಾರಣವಾಗಬೇಕು. ದೇಗುಲಗಳೊಂದಿಗೆ ಪ್ರತಿಯೊಬ್ಬರ ಆತ್ಮದ ಶುದ್ಧೀಕರಣವೂ ನಡೆಯಬೇಕು. ಆಗ ಸುಂದರ ಸಮಾಜದ ನಿರ್ಮಾಣ ಸಾಧ್ಯ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.
ಮಹತೋಭಾರ ಕಾವಳಮೂಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ದಲ್ಲಿ ಬುಧವಾರ ಶ್ರೀ ಪಾರ್ವತಿ ಸನ್ನಿಯ ಸುತ್ತುಗೋಪುರದ ಉದ್ಘಾಟನೆ ಬಳಿಕ ನಡೆದ ಸುಧರ್ಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀಕ್ಷೇತ್ರ ಕಾರಿಂಜದ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಇದನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಅತಿಥಿಗೃಹ ನಿರ್ಮಾಣ, ಶೌಚಾಲಯ, ವಿವಿಧ ಸಂದರ್ಭಗಳಲ್ಲಿ ಒಟ್ಟು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಅಭಿವೃದ್ಧಿ ಕಾರ್ಯ, ದೇವಸ್ಥಾನದ ಮೆಟ್ಟಿಲು ರಚನೆ, ಅರಣ್ಯ ಇಲಾಖೆ ಸಹಯೋಗದಲ್ಲಿ ಅಪರೂಪವಾದ ದೈವೀವನ, ಸ್ತ್ರೋತ್ರವನಗಳ ನಿರ್ಮಾಣವಾಗಿದೆ. ವಾಮದಪದವು-ವಗ್ಗ ರಸ್ತೆ ಸಹಿತ ಕಾರಿಂಜವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸುತ್ತುಗೋಪುರವನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ವಿವಿಯ ಕಾಲೇಜು ಪ್ರಾಂಶುಪಾಲ ಡಾ| ಉದಯ ಕುಮಾರ್ ಇರ್ವತ್ತೂರ್ ಧಾರ್ಮಿಕ ಉಪನ್ಯಾಸ ನೀಡಿ, ಮನುಷ್ಯನ ಶುಭ್ರ, ಕಲ್ಮಶರಹಿತವಾಗಿರುವ ಸ್ವಭಾವವೇ ಧರ್ಮವಾಗಿದ್ದು, ಇಂತಹ ಉದಾತ್ತ ಚಿಂತನೆಯಿಂದ ಗೌರವಯುತ ಸ್ಥಾನದ ಸಾಧನೆಗೆ ಮುಂದುವರಿಯುವುದಕ್ಕೆ ಸಂಘ ಸಂಸ್ಥೆಗಳ, ಆಚರಣೆಗಳ ಅಗತ್ಯವಿದೆ ಎಂದರು. ಶ್ರೀಕ್ಷೇತ್ರ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ವಿವಿಧ ದೇವಸ್ಥಾನಗಳಿಗೆ ಅನ್ನದಾನದ ವ್ಯವಸ್ಥೆ ನಡೆಸಲಾಗುತ್ತಿದೆ ಎಂದರು.
ರಾಜ್ಯ ಧಾರ್ಮಿಕ ಪರಿಷತ್ತ್ನ ಸದಸ್ಯ ಜಗನ್ನಿವಾಸ ರಾವ್ ಮಾತನಾಡಿ, ಸರಕಾರದ ಆದೇಶದಂತೆ ಧಾರ್ಮಿಕ ಪರಿಷತ್ ಮೂಲಕ ಸದೃಢವಾದ ಎ ಗ್ರೇಡ್ ದೇವಸ್ಥಾನಗಳಿಂದ ಆದಾಯ ರಹಿತ ಸಿ ಗ್ರೇಡ್ ದೇಗುಲಗಳ ಅಭಿವೃದ್ಧಿಗೆ ಸಹಕಾರ ನೀಡಲಾಗುತ್ತಿದೆ. ಈಗಾಗಲೇ ಹಲವಾರು ದೇವಸ್ಥಾನಗಳಿಂದ ಸುಮಾರು 1 ಕೋಟಿ 10 ಲಕ್ಷ ರೂ. ವಿನಿಯೋಗಿಸಲಾಗಿದೆ ಎಂದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ ಪುರಾಣಿಕ್, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ ಧರ್ಮದರ್ಶಿ ರಘುನಾಥ್ ಸೋಮಯಾಜಿ ಶುಭ ಹಾರೈಸಿದರು.
ಸಮಿತಿ ಉಪಾಧ್ಯಕ್ಷರಾದ ಬಿ. ಪದ್ಮಶೇಖರ ಜೈನ್, ಶಾಂತಿ ಪ್ರಸಾದ ಹೆಗ್ಡೆ, ವೀರೇಂದ್ರ ಅಮೀನ್, ಪದಾಧಿಕಾರಿಗಳಾದ ವೇದವ, ವೆಂಕಟರಾಜ ಎಳಚಿತ್ತಾಯ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಆಚಾರ್ಯ ಬಾಳ್ತಬೈಲ್, ಸದಾಶಿವ ಪ್ರಭು, ಕೃಷ್ಣಪ್ಪ ಗೌಡ ತಾಳಿತ್ತೂಟ್ಟು, ವಿಶ್ವನಾಥ ಪೂಜಾರಿ ಪೀರ್ಯ, ವೆಂಕಪ್ಪ ನಾಯ್ಕ ಕಾರಿಂಜಬೈಲ್, ಸುಜಲಾ ಶೆಟ್ಟಿ, ಸವಿತಾ, ವ್ಯವಸ್ಥಾಪಕ ಸತೀಶ್ ಪ್ರಭು, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ ಪಚ್ಚಾಜೆ ಗುತ್ತು ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಗಣಪತಿ ಮುಚ್ಚಿನ್ನಾಯ ವಂದಿಸಿದರು.ಆದಿರಾಜ ಜೈನ್ ಕೊಯಿಕುಡೆ ಕಾರ್ಯಕ್ರಮ ನಿರೂಪಿಸಿದರು.