Advertisement
ಇದೇ ವೇಳೆ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ ಈ ಸಿನಿಮಾದಲ್ಲಿ ಬರುವ “ಗುಳಿಗ’ ದೈವಕ್ಕೆ ದೇವಸ್ಥಾನ ನಿರ್ಮಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅಂದಹಾಗೆ, ಇಂಥದ್ದೊಂದು ಕಾರ್ಯಕ್ಕೆ ಬಲವಾದ ಕಾರಣ “ಕರಿಹೈದ ಕೊರಗಜ್ಜ’ ಚಿತ್ರೀಕರಣದ ವೇಳೆ ನಡೆದ ಅನೇಕ ಪವಾಡಗಳು ಎನ್ನುವುದು ಚಿತ್ರತಂಡದ ಮಾತು.
Related Articles
Advertisement
ಇನ್ನು ಚಿತ್ರದಲ್ಲಿ “ಗುಳಿಗ’ ದೈವದ ಪಾತ್ರವನ್ನು ಹಾಲಿವುಡ್ ನಟ, ಫ್ರೆಂಚ್ ಹಾಗೂ ಬಾಲಿವುಡ್ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಅಭಿನಯಿಸಿದ್ದು, ಮಂಗಳೂರಿನ ಸೋಮೆಶ್ವರ ಸಮುದ್ರ ಕಿನಾರೆಯಲ್ಲಿ ಗುಳಿಗ ದೈವದ ಚಿತ್ರೀಕರಣವನ್ನು ನಡೆಸುತ್ತಿದ್ದಾಗಲೂ, ತಂಡಕ್ಕೆ ಹಲವಾರು ರೀತಿಯ ಅಡೆತಡೆಗಳು ಎದುರಾಯಿತು. ಈ ಬಗ್ಗೆ ತಿಳಿದವರಲ್ಲಿ ಚಿಂತನ -ಮಂಥನ ನಡೆಸಿದಾಗ ನಿರ್ದೇಶಕ ಸುಧೀರ್ ಅತ್ತಾವರ್ ರವರ ಹಿರಿಯರಿದ್ದ ಮನೆಯಲ್ಲಿ ಗುಳಿಗ ದೈವದ ಸಾನಿಧ್ಯವಿದ್ದು, ಹಲವಾರು ವರ್ಷಗಳಿಂದ ಆ ಮನೆಯಲ್ಲಿ ಯಾರೂ ವಾಸವಿರದೆ, ಪಾಳು ಬಿದ್ದಕಾರಣ ದೈವಕ್ಕೆ ಪೂಜೆ ಪುರಸ್ಕಾರಗಳು ನಡೆಯದಿರುವ ವಿಚಾರ ಗೋಚರಿಸಿತು. ಕೂಡಲೇ ನಿರ್ದೇಶಕರು ದೈವಕ್ಕೆ ಗುಡಿ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿ, ಚಿತ್ರದ ಎಡಿಟಿಂಗ್ ಕೆಲಸ ಮುಗಿದ ಕೂಡಲೇ, ದೈವಸ್ಥಾನದ ಕಾರ್ಯ ಮುಗಿಸಿ, ಗುಳಿಗ ಹಾಗೂ ಕಲ್ಲುಟಿಗ ದೈವಗಳಿಗೆ ಅದ್ದೂರಿಯ ಕೋಲ ಸೇವೆಯನ್ನು ನಡೆಸಿದರು.
ಈ ಸಮಯದಲ್ಲಿ ಹಿರಿಯ ನಟಿ ಭವ್ಯಾ, ನಿರ್ಮಾಪಕರಾದ ತ್ರಿವಿಕ್ರಮ ಸಾಫಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ, ಕಲಾವಿದರಾದ ಭರತ್ ಸೂರ್ಯ, ರಿತಿಕ ಹಾಗೂ ಹಲವು ತಂತ್ರಜ್ಞರು ಅಹೋರಾತ್ರಿ ವಿಜೃಂಭಣೆಯಿಂದ ನಡೆದ ಕೋಲಸೇವೆಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಚಿತ್ರತಂಡವು ಚಿತ್ರೀಕರಣ ಮುಗಿದ ಕೂಡಲೇ ಕೊರಗಜ್ಜನಿಗೂ ಕೋಲಸೇವೆಯನ್ನು ಅದ್ದೂರಿಯಾಗಿ ನೆರವೇರಿಸಿತ್ತು. ಅದಾದ ಬಳಿಕ ಸಿನಿಮಾದ ಕೆಲಸಗಳು ಶರವೇಗದಲ್ಲಿ ಪೂರ್ಣಗೊಳ್ಳುತ್ತ ಬಂದಿದ್ದು, ಆಗಸ್ಟ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ. ಈ ಸಂದರ್ಭದಲ್ಲಿ ತಮ್ಮ ಸಂಕಲ್ಪದಂತೆ “ಗುಳಿಗ’ ದೈವದ ದೇವಸ್ಥಾನಕ್ಕೆ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತು ಚಿತ್ರತಂಡ ಚಾಲನೆ ನೀಡಿದ್ದು, ಇದೆಲ್ಲವೂ ದೈವದ ಪವಾಡ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.