ಭಾರತ ಪ್ರತಿ ವರ್ಷವೂ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುತ್ತದೆ. 2024ರಲ್ಲಿ ಶುಕ್ರವಾರದಂದು ಆಚರಿಸಲ್ಪಡುವ ಕಾರ್ಗಿಲ್ ವಿಜಯ ದಿವಸ, ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದ ದಿನದ 25ನೇ ವರ್ಷಾಚರಣೆಯಾಗಿದೆ. 1999ರ ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ, ದೇಶಕ್ಕಾಗಿ ಮಹಾನ್ ತ್ಯಾಗಗಳನ್ನು ಮಾಡಿದ ಯೋಧರ ನೆನಪಿಗಾಗಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಯೋಧರ ಬಲಿದಾನಗಳನ್ನು ಕಾರ್ಗಿಲ್ ವಿಜಯ ದಿವಸ ನೆನಪು ಮಾಡುತ್ತದೆ.
ಕಾರ್ಗಿಲ್ ವಿಜಯ ದಿವಸ ಸಮಸ್ತ ಭಾರತೀಯರಿಗೆ ಹೆಮ್ಮೆಯ ಮತ್ತು ಸೈನಿಕರಿಗೆ ಕೃತಜ್ಞತೆ ಸಲ್ಲಿಸುವ ಮಹತ್ವದ ದಿನ. 2024ರ ಕಾರ್ಗಿಲ್ ವಿಜಯ ದಿವಸದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದ 25ನೇ ವರ್ಷಾಚರಣೆಯಲ್ಲಿ ಭಾಗವಹಿಸಲು ಲಡಾಖ್‌ನ ದ್ರಾಸ್‌ಗೆ ಭೇಟಿ ನೀಡಲಿದ್ದಾರೆ. ಜುಲೈ 26ರಂದು ಭಾರತ ತನ್ನ ‘ಆಪರೇಶನ್ ವಿಜಯ್’ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಈ ಕಾರ್ಯಾಚರಣೆಯ ಮೂಲಕ, ಭಾರತೀಯ ಸೇನೆ ಪಾಕಿಸ್ತಾನಿ ಸೇನೆ ಮತ್ತು ಭಯೋತ್ಪಾದಕರು ವಶಪಡಿಸಿಕೊಂಡಿದ್ದ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಭಾಗಗಳನ್ನು ಮರಳಿ ವಶಪಡಿಸಿಕೊಂಡಿತು.
ವಿವಾದಕ್ಕೆ ಗುರಿಯಾದ ಫಿರಂಗಿಗಳು:
1986ರಲ್ಲಿ, ಭಾರತ ಎಬಿ ಬೋಫೋರ್ಸ್ ಎಂಬ ಸ್ವೀಡಿಷ್ ಕಂಪನಿಯೊಡನೆ 400 ಹವಿಟ್ಜರ್ ಗನ್‌ಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿತು. ಸ್ವೀಡಿಷ್ ರೇಡಿಯೋ ಬೋಫೋರ್ಸ್ ಒಪ್ಪಂದದಲ್ಲಿ ಲಂಚದ ವ್ಯವಹಾರವೂ ನಡೆದಿತ್ತು ಎಂದು ವರದಿ ಮಾಡಿದ ಬಳಿಕ, ಬೋಫೋರ್ಸ್ ಒಪ್ಪಂದ ಭಾರೀ ಹಗರಣದ ರೂಪ ಪಡೆದುಕೊಂಡಿತು. 1989ರ ಚುನಾವಣಾ ಪ್ರಚಾರದಲ್ಲಿ ವಿಪಿ ಸಿಂಗ್ ಅವರು ಬೋಫೋರ್ಸ್ ಹಗರಣವನ್ನು ಬಹುದೊಡ್ಡ ವಿಷಯವನ್ನಾಗಿಸಿದರು. 1989ರಲ್ಲಿ ರಾಜೀವ್ ಗಾಂಧಿ ಸರ್ಕಾರದ ಸೋಲಿಗೆ ಬಹುಮಟ್ಟಿಗೆ ಬೋಫೋರ್ಸ್ ಹಗರಣವೇ ಕಾರಣವಾಗಿತ್ತು. ಆದರೆ, ಬಳಿಕ ರಾಜೀವ್ ಗಾಂಧಿಯವರು ಬೋಫೋರ್ಸ್ ಹಗರಣದಲ್ಲಿ ಯಾವುದೇ ತಪ್ಪು, ಅವ್ಯವಹಾರ ನಡೆಸಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು.
ಬಹಳಷ್ಟು ಜನರಿಗೆ, ಬೋಫೋರ್ಸ್ ಎಂದರೆ ರಕ್ಷಣಾ ಒಪ್ಪಂದದಲ್ಲೂ ಜರುಗಬಹುದಾದ ಹಗರಣದ, ಮತ್ತು ಭಾರತೀಯ ಸೇನೆಗೆ ಹವಿಟ್ಜರ್‌ಗಳನ್ನು ಪರಿಚಯಿಸಿದ ಸರ್ಕಾರವನ್ನೇ 1989ರ ಚುನಾವಣೆಯಲ್ಲಿ ಸೋಲಿಸಿದ್ದರ ಸಂಕೇತವಾಗಿ ನೆನಪಿಗೆ ಬರಬಹುದು. ಆದರೆ, ಇವೆಲ್ಲ ವಿವಾದಗಳ ಹೊರತಾಗಿಯೂ, ಬೋಫೋರ್ಸ್ ಫಿರಂಗಿಗಳನ್ನು ಖರೀದಿಸಿದ ಹತ್ತು ವರ್ಷಗಳ ಬಳಿಕ ಅದು ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ಭಾರತ ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿತ್ತು. ಬೋಫೋರ್ಸ್ ಫಿರಂಗಿಗಳು ಪಾಕಿಸ್ತಾನಿ ಪಡೆಗಳಿಗೆ ಹೇಗೆ ಮಾರಣಾಂತಿಕ ಹೊಡೆತ ನೀಡಿದವು ಎನ್ನುವುದು ಯುದ್ಧರಂಗದಲ್ಲಿ ಶತ್ರುವನ್ನು ಹೇಗೆ ಮಣಿಸಬೇಕು ಎನ್ನುವ ಆಧುನಿಕ ಕದನದ ಪಾಠದಂತಿದೆ!
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಅದೇ ಮೊದಲ ಬಾರಿಗೆ ಬೋಫೋರ್ಸ್ ಗನ್‌ಗಳನ್ನು ನೇರವಾಗಿ ಯುದ್ಧದಲ್ಲಿ ಬಳಸಲಾಗಿತ್ತು. ಆದರೆ, ಮೊದಲ ಯುದ್ಧದಲ್ಲೇ ಬೋಫೋರ್ಸ್ ಗನ್‌ಗಳು ತಮ್ಮ ಉಪಯುಕ್ತತೆಯನ್ನು ಸಾಬೀತುಪಡಿಸಿದ್ದವು. ಭಾರತ 2018ರಲ್ಲಿ ಅಮೆರಿಕಾದಿಂದ ಎಂ777 ಹವಿಟ್ಜರ್‌ಗಳನ್ನು ಖರೀದಿಸುವ ತನಕ, ಬೋಫೋರ್ಸ್ ಗನ್‌ಗಳನ್ನು ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಭಾರತೀಯ ಸೇನೆ ತನ್ನ ಮುಖ್ಯ ಹವಿಟ್ಜರ್‌ಗಳಾಗಿ ಬಳಸುತ್ತಿತ್ತು.
ಕಾರ್ಗಿಲ್ ವಲಯದ ಬಹುತೇಕ ಭೂಪ್ರದೇಶಗಳು 8,000 ಅಡಿಗಳಿಗಿಂತ ಹೆಚ್ಚಿನ ಎತ್ತರ ಹೊಂದಿದ್ದವು. ಇಂತಹ ಅಗಾಧ ಎತ್ತರ ಆರ್ಟಿಲರಿಗಳ ಉಪಯುಕ್ತತೆಯನ್ನು ಕುಂಠಿತಗೊಳಿಸುತ್ತದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಭಾರತ ಸರ್ಕಾರ ವಾಯು ಸೇನೆಯನ್ನು ಅತ್ಯಂತ ಸೀಮಿತ ಪ್ರಮಾಣದಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿತ್ತು. ಇಂತಹ ಸವಾಲಿನ ಪರಿಸ್ಥಿತಿಗಳಲ್ಲಿ, ಭಾರತೀಯ ಸೇನೆಯ ಯೋಧರು, ಅದರಲ್ಲೂ ನಾರ್ದನ್ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟಿನ ಯೋಧರಿಗೆ ಪಾಕಿಸ್ತಾನಿ ಸೈನಿಕರನ್ನು ಹೊರಗಟ್ಟುವ ಅತ್ಯಂತ ಕಷ್ಟಕರ ಗುರಿ ನೀಡಲಾಯಿತು.
ಈ ಸೈನಿಕರು ಸಿಯಾಚಿನ್ ಮತ್ತು ಕಾಶ್ಮೀರ ಕಣಿವೆಯನ್ನು ಭಾರತದ ಭಾಗಗಳೊಡನೆ ಸಂಪರ್ಕಿಸುವ ರಸ್ತೆಯನ್ನು ರಕ್ಷಿಸುತ್ತಾ, ಹಿಮಾಲಯದ ಎತ್ತರದ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದರು. ಎತ್ತರದ ಪ್ರದೇಶಗಳಲ್ಲೂ 35 ಕಿಲೋಮೀಟರ್‌ಗಳಿಗೂ ಹೆಚ್ಚಿನ ವ್ಯಾಪ್ತಿ ಹೊಂದಿದ್ದ ಬೋಫೋರ್ಸ್ ಗನ್‌ಗಳು ಯುದ್ಧದ ಚಿತ್ರಣವನ್ನೇ ಬದಲಿಸಿದ್ದವು. ಬೋಫೋರ್ಸ್ ಗನ್ 12 ಸೆಕೆಂಡುಗಳ ಅವಧಿಯಲ್ಲಿ ಮೂರು ಸುತ್ತು ಸ್ಫೋಟಿಸಬಲ್ಲವಾಗಿದ್ದು, ಬಹುತೇಕ 90 ಡಿಗ್ರಿ ಕೋನದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲವಾಗಿದ್ದವು. ಪಾಕಿಸ್ತಾನಿ ಯೊಧರು ಬೆಟ್ಟಗಳ ತುದಿಗಳಲ್ಲಿದ್ದರೂ, ಭಾರತೀಯ ಯೋಧರಿಗೆ ಅವರ ಮೇಲೆ ಪರಿಣಾಮಕಾರಿ ದಾಳಿ ನಡೆಸಲು ಬೋಫೋರ್ಸ್ ಅನುವು ಮಾಡಿಕೊಟ್ಟಿತ್ತು.
155 ಎಂಎಂ ಎಫ್ಎಚ್77 ಬೋಫೋರ್ಸ್ ಗನ್‌ಗಳು ಪಾಕಿಸ್ತಾನಿ ಸೇನೆ ಹೊಂದಿದ್ದ ಯಾವುದೇ ಮಧ್ಯಮ ವ್ಯಾಪ್ತಿಯ ಆರ್ಟಿಲರಿ ಗನ್‌ಗಳಿಂದ ಹೆಚ್ಚಿನ ಸಾಮರ್ಥ್ಯ ಹೊಂದಿದ್ದವು. ಈ ಅನುಕೂಲತೆಯ ಕಾರಣದಿಂದ, ಭಾರತೀಯ ಸೇನೆಯ ಯೋಧರಿಗೆ 2003ರಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕುವ ತನಕವೂ ಎಲ್ಒಸಿ ಆದ್ಯಂತ ಚಕಮಕಿಗಳ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಗಿತ್ತು.
ಬೋಫೋರ್ಸ್ ಗನ್‌ಗಳಿಗೆ ಮರ್ಸಿಡಿಸ್ ಬೆನ್ಜ್ ಇಂಜಿನ್ ಶಕ್ತಿ ನೀಡುತ್ತಿದ್ದು, ಅವುಗಳು ಸಣ್ಣ ಅಂತರಕ್ಕೆ ಸ್ವತಃ ಚಲಿಸಬಲ್ಲವಾಗಿದ್ದವು. ಕಾರ್ಗಿಲ್ ಯುದ್ಧದ ವೇಳೆ, ಶತ್ರುಗಳ ಮೇಲೆ ದಾಳಿ ನಡೆಸಿದ ಬಳಿಕ, ಬೋಫೋರ್ಸ್ ಗನ್‌ಗಳು ಪಾಕಿಸ್ತಾನಿಗಳ ಪ್ರತಿದಾಳಿಗೆ ತುತ್ತಾಗದ ರೀತಿಯಲ್ಲಿ ತಾವಿದ್ದ ಜಾಗದಿಂದ ಆಚೀಚೆ ಚಲಿಸುತ್ತಿದ್ದವು.
ಕಾರ್ಗಿಲ್ ವಿಜಯ ದಿವಸದ ಆರಂಭ
ಕಾರ್ಗಿಲ್ ವಿಜಯ ದಿವಸದ ಮೂಲಗಳು ಬಹುತೇಕ 1971ರಲ್ಲಿ ಪೂರ್ವ ಪಾಕಿಸ್ತಾನವಾಗಿದ್ದ, ಬಳಿಕ ನವ ದೇಶ ಬಾಂಗ್ಲಾದೇಶದ ನಿರ್ಮಾಣಕ್ಕೆ ಕಾರಣವಾದ ಭಾರತ ಪಾಕಿಸ್ತಾನದ ಯುದ್ಧದಲ್ಲಿವೆ. ಈ ಯುದ್ಧದ ಬಳಿಕ, ಭಾರತ ಪಾಕಿಸ್ತಾನಗಳು ನಿರಂತರವಾಗಿ ಚಕಮಕಿಗಳಲ್ಲಿ ನಿರತವಾಗಿದ್ದು, ಇದರಲ್ಲಿ ಸಿಯಾಚಿನ್ ನೀರ್ಗಲ್ಲು ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಲು ನಡೆಸಿದ ಹೋರಾಟವೂ ಸೇರಿದೆ. ಭಾರತ ಮತ್ತು ಪಾಕಿಸ್ತಾನಗಳು 1998ರಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆ ನಡೆಸಿದ್ದು, ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದ್ದವು.
ಶಾಂತಿ ಮತ್ತು ಸ್ಥಿರತೆಯನ್ನು ವೃದ್ಧಿಸುವ ಸಲುವಾಗಿ, ಭಾರತ ಮತ್ತು ಪಾಕಿಸ್ತಾನಗಳು 1999ರ ಫೆಬ್ರವರಿ ತಿಂಗಳಲ್ಲಿ ‘ಲಾಹೋರ್ ಒಪ್ಪಂದ’ಕ್ಕೆ ಸಹಿ ಹಾಕಿದ್ದವು. ಆ ಮೂಲಕ ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದವು. ಆದರೆ ಪಾಕಿಸ್ತಾನಿ ಯೋಧರು ಮತ್ತು ಭಯೋತ್ಪಾದಕರು ಕಾರ್ಗಿಲ್ ಜಿಲ್ಲೆಯಲ್ಲಿ ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ದಾಟಿ, ಭಾರತದ ಗಡಿಯೊಳಗೆ ಪ್ರವೇಶಿಸಿದ್ದರು. ಅವರು ಕಾರ್ಗಿಲ್ ಪ್ರದೇಶದ ಎತ್ತರದ ಜಾಗಗಳನ್ನು ವಶಪಡಿಸಿಕೊಂಡು, ಕಾಶ್ಮೀರ ಮತ್ತು ಲಡಾಖ್ ನಡುವಿನ ಸಂಪರ್ಕವನ್ನು ತುಂಡರಿಸಿ, ಸಮಸ್ಯೆ ಸೃಷ್ಟಿಸುವ ಉದ್ದೇಶ ಹೊಂದಿದ್ದರು.
ಅಪಾರ ಸಂಖ್ಯೆಯಲ್ಲಿ ಪಾಕಿಸ್ತಾನಿಗಳು ಒಳ ನುಸುಳಿದ ವಿಚಾರ 1999ರ ಮೇ ತಿಂಗಳಲ್ಲಿ ಭಾರತದ ಗಮನಕ್ಕೆ ಬಂದಿತು. ಇದರ ಪರಿಣಾಮವಾಗಿ ಭಾರತೀಯ ಸೇನೆ ‘ಆಪರೇಶನ್ ವಿಜಯ್’ ಕಾರ್ಯಾಚರಣೆಗೆ ಚಾಲನೆ ನೀಡಿತು. ಇದು ಬಳಿಕ ಕಾರ್ಗಿಲ್ ಯುದ್ಧದ ಸ್ವರೂಪ ಪಡೆದುಕೊಂಡಿತು. ಭಾರತ ಮತ್ತು ಪಾಕಿಸ್ತಾನಗಳ ನಡುವೆ 1999ರ ಮೇ ತಿಂಗಳಿಂದ ಜುಲೈ ತನಕ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಮತ್ತು ಎಲ್ಒಸಿ ಆದ್ಯಂತ ಚಕಮಕಿಗಳು ನಡೆದವು. ಎರಡು ತಿಂಗಳಿಗೂ ಹೆಚ್ಚು ಕಾಲ, ದುರ್ಗಮವಾದ ಪರ್ವತ ಪ್ರದೇಶಗಳಲ್ಲಿ ತೀವ್ರ ಕದನ ನಡೆಯಿತು.
ಭಾರತೀಯ ಸೇನೆ ಆಪರೇಶನ್ ವಿಜಯ್ ಕಾರ್ಯಾಚರಣೆಯಲ್ಲಿ ಅಂತಿಮವಾಗಿ ಪಾಕಿಸ್ತಾನಿ ನುಸುಳಕೋರರನ್ನು ಹಿಂದಕ್ಕಟ್ಟಿ, ಟೈಗರ್ ಹಿಲ್ ಮತ್ತು ಇತರ ಪ್ರಮುಖ ಪ್ರದೇಶಗಳನ್ನು ಮರಳಿ ವಶಪಡಿಸಿಕೊಂಡಿತು. ಸತತ ಮೂರು ತಿಂಗಳ ಯುದ್ಧದ ಬಳಿಕ, ಭಾರತೀಯ ಯೋಧರು ಜುಲೈ 26, 1999ರಂದು ಗೆಲುವು ದಾಖಲಿಸಿದರು. ಆದರೆ, ಈ ಯುದ್ಧ ಭಾರತ ಮತ್ತು ಪಾಕಿಸ್ತಾನಗಳೆರಡಕ್ಕೂ ಅಪಾರ ಸಾವುನೋವುಗಳನ್ನು ಉಂಟುಮಾಡಿತ್ತು. ಭಾರತೀಯ ಸೇನೆ ಬಹುತೇಕ 490 ಅಧಿಕಾರಿಗಳು, ಯೋಧರನ್ನು ಕಳೆದುಕೊಂಡಿತ್ತು.
ಕಾರ್ಗಿಲ್ ವಿಜಯ ದಿವಸ 2024
ಪ್ರಾಮುಖ್ಯತೆ ಮತ್ತು ಸಂಭ್ರಮಾಚರಣೆ: ಕಾರ್ಗಿಲ್ ವಿಜಯ ದಿವಸ ಭಾರತದ ರಾಷ್ಟ್ರೀಯ ಐಕ್ಯತೆ ಮತ್ತು ದೇಶಭಕ್ತಿಯ ಸಂಕೇತವಾಗಿದೆ. ಕಾರ್ಗಿಲ್ ಯುದ್ಧ ಸಮಸ್ತ ಭಾರತೀಯರನ್ನು ಒಗ್ಗೂಡಿಸಿ, ಸೇನೆಗೆ ಅವಿರತ ಬೆಂಬಲ ಸೂಚಿಸುವಂತೆ ಮಾಡಿತ್ತು. ಸಮಸ್ತ ಭಾರತೀಯರು ತೋರಿಸಿದ್ದ ಒಗ್ಗಟ್ಟು ಮತ್ತು ಐಕ್ಯತೆಯನ್ನು ಇಂದಿಗೂ ಕಾರ್ಗಿಲ್ ವಿಜಯ ದಿವಸದಂದು ಸ್ಮರಿಸಿ, ಪ್ರಜೆಗಳಲ್ಲಿ ರಾಷ್ಟ್ರೀಯತೆಯ ಹೆಮ್ಮೆ ಮೂಡಿಸಲಾಗುತ್ತದೆ.
ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಯೋಧರು ತೋರಿದ ಧೈರ್ಯ ಮತ್ತು ಸಾಹಸಗಳ ಕತೆಗಳು ಭವಿಷ್ಯದ ತಲೆಮಾರುಗಳಿಗೂ ಸ್ಫೂರ್ತಿ ತುಂಬಿದ್ದವು ಮತ್ತು ಅವರಲ್ಲಿ ದೇಶದ ಕುರಿತಾದ ಶ್ರದ್ಧೆ ಮತ್ತು ಭಕ್ತಿಯನ್ನು ನೀಡಿದ್ದವು. ಕಾರ್ಗಿಲ್ ವಿಜಯ ದಿವಸ ಅಂತಹ ವೀರ ಯೋಧರ ತ್ಯಾಗ, ಬಲಿದಾನಗಳನ್ನು ದೇಶ ಮರೆತಿಲ್ಲ ಎಂದು ಸಾರುತ್ತಾ, ಭಾರತದ ಸಾರ್ವಭೌಮತ್ವವನ್ನು ಕಾಪಾಡಿದ ಯೋಧರಿಗೆ ನಮನಗಳನ್ನು ಸಲ್ಲಿಸುತ್ತದೆ. ದೇಶಾದ್ಯಂತ ವಿವಿಧ ಸಮಾರಂಭಗಳು ಮತ್ತು ಕಾರ್ಯಕ್ರಮಗಳನ್ನು ನಡೆಸುತ್ತಾ, ಭಾರತೀಯ ಯೋಧರ ಶೌರ್ಯ ಮತ್ತು ಬಲಿದಾನಗಳನ್ನು ಸ್ಮರಿಸಲಾಗುತ್ತದೆ. ಈ ಚಟುವಟಿಕೆಗಳಲ್ಲಿ ವಿವಿಧ ಆಚರಣೆಗಳು, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಯೋಧರ ಸ್ಮರಣಾರ್ಥ ಸೇವೆಗಳು ಸೇರಿವೆ.
ಕಾರ್ಗಿಲ್ ವಿಜಯ ದಿವಸ ಕಾರ್ಗಿಲ್ ಯುದ್ಧದ ನೆನಪುಗಳನ್ನು ನಿರಂತರವಾಗಿಸಿ, ಆ ದಿನ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ನೆಲೆಯಾಗುವಂತೆ ಮಾಡುತ್ತದೆ. ಈ ದಿನ ಭಾರತೀಯರಲ್ಲಿ ಧೈರ್ಯ, ಒಗ್ಗಟ್ಟು ಮತ್ತು ದೇಶಭಕ್ತಿಯ ಮೌಲ್ಯಗಳನ್ನು ತುಂಬುತ್ತದೆ.
*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)