Advertisement
ಭಾರತ-ಪಾಕಿಸ್ಥಾನದ ನಡುವೆ ನಡೆದ ಕಾರ್ಗಿಲ್ ಯುದ್ಧದಲ್ಲಿ ತಮ್ಮ ಪ್ರಾಣವನ್ನೇ ಲೆಕ್ಕಿಸದೇ ಶತ್ರು ಸೈನಿಕರನ್ನು ಹಿಮ್ಮೆಟ್ಟಿ ಹುತಾತ್ಮರಾದ ಬಿಸಿ ರಕ್ತದ ಯುವ ಸೈನಿಕರ ಪೈಕಿ ಮನೋಜ್ ಕುಮಾರ್ ಪಾಂಡೆ, ಸೌರಬ್ ಕಾಲಿಯಾ, ವಿಕ್ರಮ್ ಬಾತ್ರಾ ಪ್ರಮುಖರು. ಅಸೀಮ ಹೋರಾಟ, ಕೆಚ್ಚು, ಎಷ್ಟೇ ಕಷ್ಟ ಬಂದರೂ ಕಡಿಮೆಯಾಗದ ಯುದ್ದೋತ್ಸಾಹದಿಂದಾಗಿ ಶತ್ರು ಪಾಕಿಸ್ಥಾನಿ ಸೈನಿಕರನ್ನು ಇವರು ಬಗ್ಗು ಬಡಿದಿದ್ದರಿಂದ ಕಾರ್ಗಿಲ್ ವಿಜಯ ಸುಲಭವಾಯಿತು. ಪ್ರಮುಖ ಈ ಮೂವರೂ ಯುದ್ಧದಲ್ಲಿ ಹುತಾತ್ಮ ರಾದರು ಎನ್ನುವುದು ನೋವಿನ ಸಂಗತಿ.
ಕ್ಯಾ| ವಿಕ್ರಮ್ ಬಾತ್ರಾರಿಗೆ ಕೇವಲ 24 ವರ್ಷ. ಯುದ್ಧದಲ್ಲಿ ಇಡೀ ಪಾಕಿಸ್ಥಾನದ ಸೈನ್ಯಕ್ಕೆ ಮಗ್ಗಲ ಮುಳ್ಳಾಗಿದ್ದ ಈತ ಶತ್ರು ಸೈನಿಕರಿಂದಲೇ “ಶೇರ್ ಶಾ’ ಎಂಬ ಬಿರುದು ಪಡೆದಿದ್ದ. ಈತನದು ಸಾಹಸಮಯ ಹೋರಾಟ. ಬಾತ್ರಾ ಅವರು 1974ರ ಸೆಪ್ಟಂಬರ್ 9ರಂದು ಹಿಮಾಚಲ ಪ್ರದೇಶದ ಪಲಂಪುರ್‌ನಲ್ಲಿ ಜನಿಸಿದರು. ತಂದೆ ಜಿ.ಎಲ್. ಬಾತ್ರಾ, ತಾಯಿ ಜೈ ಕಮಲ್ ಬಾತ್ರಾ ಅವರು. ತಾಯಿ ಶಾಲಾ ಶಿಕ್ಷಕಿಯಾಗಿದ್ದರು. ತಾಯಿ ಪಾಠ ಮಾಡುತ್ತಿದ್ದ ಶಾಲೆಯಲ್ಲಿಯೇ ವಿಕ್ರಮ್ ತನ್ನ ಪ್ರಾಥಮಿಕ ಶಾಲಾ ಶಿಕ್ಷಣ ಮುಗಿಸಿದ್ದನು.
Related Articles
Advertisement
ಅಪ್ರತಿಮ ಹೋರಾಟ1999ರಲ್ಲಿ ಪಾಕಿಸ್ಥಾನ ಸೇನೆಯು ಕಾರ್ಗಿಲ್ ವಶಪಡಿಸಿಕೊಳ್ಳಲೆಂದು ಅಲ್ಲಿಲ್ಲಿ ಯುದ್ಧ ಬಂಕರ್‌ಗಳನ್ನು ನಿರ್ಮಿಸಿತ್ತು. ಇದು ಭಾರತೀಯ ಸೇನೆಗೆ ತಿಳಿದ ಬಳಿಕ ಯುದ್ಧದ ವಾತಾವರಣ ನಿರ್ಮಾಣವಾಯಿತು. ಆಗ ರಜೆಯಲ್ಲಿದ್ದ ವಿಕ್ರಮ್ ಬಾತ್ರಾ ಒಂದೇ ಕರೆಗೆ ಯುದ್ಧಭೂಮಿಗೆ ಹಾಜರಾದರು. ಕ್ಯಾ| ವಿಕ್ರಮ್ ಅವರ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಗಿಲ್‌ನ ಶಿಖರ-5140ನ್ನು ವಶಪಡಿಸಿಕೊಳ್ಳಲು ಸೇನೆ ಸೂಚಿಸಿತ್ತು. ವಿಕ್ರಮ್ ಮತ್ತು ಆತನ ತಂಡ ಶತ್ರುಗಳ ಹುಟ್ಟಡಗಿಸಲು ಕೆಚ್ಚೆದೆಯಿಂದ ಕಾರ್ಗಿಲ್‌ಗೆ ಮುನ್ನುಗ್ಗಿತ್ತು. ಅತೀ ಎತ್ತರದ ಕಣಿವೆಯಾದ ಈ ಶಿಖರದಲ್ಲಿ ಅಡಗಿಕೊಂಡಿದ್ದ ಪಾಕ್ ಸೈನಿಕರ ಮೇಲೆ ವಿಕ್ರಮ್ ಅವರ ತಂಡ ನಿರಂತರ ಗುಂಡಿನ ಮಳೆಗೆರೆದು ಸುಮಾರು 9 ಪಾಕ್ ಸೈನಿಕರನ್ನು ಕೊಂದು ಹಾಕಿತ್ತು. ಮುಂದೆ ಅತ್ಯಂತ ಕಠಿನವಾದ ಶಿಖರ 4575 ಅನ್ನು ವಶಪಡಿಸಿಕೊಳ್ಳಲು ಮುಂದಾದಾಗ ಸುಮಾರು 1600 ಅಡಿ ಎತ್ತರದ ಶಿಖರದಲ್ಲಿದ್ದ ಶತ್ರು ಸೈನಿಕರು ದಾಳಿ ಆರಂಭಿಸಿದ್ದರು. ಈ ಹಂತದಲ್ಲಿ ಹಿರಿಯ ಸೇನಾಧಿಕಾರಿಗಳನ್ನು ಹಿಂದಿಕ್ಕಿ “ಜೈ ದುರ್ಗಾ’ ಎಂದು ಘೋಷ ಹಾಕುತ್ತಾ ಬಾತ್ರಾ ತಂಡವನ್ನು ಮುನ್ನಡೆಸಿದ್ದರು. ಇದೇ ರೀತಿಯ ವೀರಾವೇಶದ ಗುಂಡಿನ ದಾಳಿ ನಡೆಸುತ್ತಾ ಪಾಕ್ ಸೈನಿಕರು ಬೆಚ್ಚುವಂತೆ ಮಾಡಿದ್ದ ಬಾತ್ರಾ 1999ರ ಜುಲೈ 7ರಂದು ಭಾರತ್ ಮಾತಾಕೀ ಜೈ ಎಂದು ಹುತಾತ್ಮರಾದರು. “ಯೆ ದಿಲ್ ಮಾಂಗೇ ಮೋರ್’
ಕಾರ್ಗಿಲ್ ವೀರ ವಿಕ್ರಮ್ ಬಾತ್ರಾ ತನ್ನ ಸಹ ಸೈನಿಕರಿಗೆ ಉತ್ಸಾಹ ತುಂಬಲೆಂದು “ಹೇ ದಿಲ್ ಮೋಂಗೆ ಮೋರ್’ ಎಂದು ಘೋಷಣೆ ಕೂಗುತ್ತಿದ್ದ. ಒಮ್ಮೆ ಅವರ ತಂದೆಗೆ ಕರೆ ಮಾಡಿ ಒಂದು ಶಿಖರವನ್ನು ವಶಪಡಿಸಿಕೊಂಡಿದ್ದೇವೆ. ಇನ್ನುಳಿದ ಶಿಖರಗಳನ್ನು ವಶಪಡಿಸಿಕೊಳ್ಳುತ್ತೇವೆ ಎನ್ನುತ್ತಾ “ಯೆ ದಿಲ್ ಮಾಂಗೇ ಮೋರ್’ ಎಂದು ಹೇಳಿದ. ಬಳಿಕ ಯುದ್ಧರಣರಂಗದಲ್ಲಿ ಈ ಘೋಷಣೆ ಸೈನಿಕರಿಗೆ ಉತ್ಸಾಹ ತುಂಬಿತ್ತು. ಪರಮವೀರ ಚಕ್ರ
ರಣರಂಗದಲ್ಲಿ ಹೋರಾಡುತ್ತಲೇ ಪ್ರಾಣವನ್ನು ತ್ಯಾಗ ಮಾಡಿದ ಬಲಿದಾನಕ್ಕಾಗಿ ಕ್ಯಾ| ವಿಕ್ರಮ್ ಬಾತ್ರಾ ಅವರಿಗೆ ಭಾರತ ಸರಕಾರವು ಮರಣೋತ್ತರವಾಗಿ ಪರಮವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ. ಕ್ಯಾ| ವಿಕ್ರಮ್ ಬಾತ್ರಾ ಅವರ ಬಲಿದಾನ ಸ್ಮರಣೀಯವಾಗಿರಲೆಂದು ಅನೇಕ ಸ್ಮಾರಕಗಳು, ಯುದ್ಧಕಟ್ಟಡಗಳಿಗೆ ಇವರ ಹೆಸರನ್ನು ಇಟ್ಟು ಗೌರವಿಸಲಾಗಿದೆ. ಶಿವ ಸ್ಥಾವರಮಠ ಸಿಂಧನೂರು