Advertisement

ಎಲ್ಲರ ಮನೆ-ಮನದಲ್ಲಿ ದೇಶಪ್ರೇಮದ ಕಿಚ್ಚು ಬೆಳೆಯಲಿ

10:57 PM Jul 26, 2019 | mahesh |

ಪುತ್ತೂರು: ಕಾರ್ಗಿಲ್‌ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗಾರಿಗಾಗಿ ಪುತ್ತೂರಿನಲ್ಲಿ ಹುತಾತ್ಮ ಯೋಧರ ಸ್ಮಾರಕ – ಅಮರ್‌ ಜವಾನ್‌ ಜ್ಯೋತಿಯಲ್ಲಿ ಗೌರವ ಸಲ್ಲಿಸುವ ಮೂಲಕ ಕಾರ್ಗಿಲ್‌ ವಿಜಯ ದಿವಸವನ್ನು ಶುಕ್ರವಾರ ವಿಶೇಷವಾಗಿ ಆಚರಿಸಲಾಯಿತು.

Advertisement

ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ನಿರ್ಮಿಸಲಾದ ಅಮರ್‌ ಜವಾನ್‌ ಜ್ಯೋತಿ ಸ್ಮಾರಕದಲ್ಲಿ ಶುಕ್ರವಾರ ರೋಮಾಂಚಕ ಕ್ಷಣ ಕಂಡುಬಂತು. ಜನಪ್ರತಿನಿಧಿಗಳು, ಮಾಜಿ ಸೈನಿಕರು ಪುಷ್ಪಗುತ್ಛ ಹಿಡಿದು ಜವಾನ್‌ ಜ್ಯೋತಿಗೆ ಗೌರವಾರ್ಪಣೆ ಮಾಡಿದರೆ, ಸುರಿಯುವ ಮಳೆಯನ್ನೂ ಲೆಕ್ಕಿಸದೆ ನೂರಾರು ವಿದ್ಯಾರ್ಥಿಗಳು “ಭಾರತ್‌ ಮಾತಾಕೀ ಜೈ’ ಎಂದು ಮುಗಿಲು ಮುಟ್ಟುವಂತೆ ಘೋಷಿಸಿದರು.

ದಿನದ 24 ಗಂಟೆಯೂ ಬೆಳಗುತ್ತಿರುವ ಅಮರ್‌ ಜವಾನ್‌ ಜ್ಯೋತಿ ಸ್ಮಾರಕ ಪುತ್ತೂರಿನಲ್ಲಿ ಲೋಕಾರ್ಪಣೆಗೊಂಡ ಅನಂತರ ಪ್ರತೀ ವರ್ಷ ಜು. 26ರಂದು ಕಾರ್ಗಿಲ್‌ ವಿಜಯ ದಿವಸವನ್ನು ಆಚರಿಸಲಾಗುತ್ತದೆ. ಸ್ಮಾರಕ ನಿರ್ಮಾಣದ ರೂವಾರಿ ನಟ್ಟೋಜ ಫೌಂಡೇಶನ್‌ ಪ್ರವರ್ತಿತ ಅಂಬಿಕಾ ಮಹಾವಿದ್ಯಾಲಯ ಕಾರ್ಯಕ್ರಮದ ನೇತೃತ್ವ ವಹಿಸುತ್ತಿದ್ದು, ಅಮರ್‌ ಜವಾನ್‌ ಜ್ಯೋತಿ ಸಂರಕ್ಷಣ ಸಮಿತಿಯ ಆಶ್ರಯದಲ್ಲಿ ಪುತ್ತೂರಿನ ಮಾಜಿ ಸೈನಿಕರು ಮತ್ತು ವಿದ್ಯಾರ್ಥಿ ಸಮೂಹ ಸೇರಿ ಕೊಂಡು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ನಗರಸಭೆ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಗನ್ನಾಥ ಎಂ., ಅಂಬಿಕಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಸುರೇಶ್‌ ಶೆಟ್ಟಿ, ಸ್ವತ್ಛ ಪುತ್ತೂರು ಮಿಶನ್‌ನ ಮುಂದಾಳು ಶ್ರೀಕೃಷ್ಣ ಉಪಾಧ್ಯಾಯ ಉಪಸ್ಥಿತರಿದ್ದರು.

ಸಮವಸ್ತ್ರಧಾರಿ ಮಾಜಿ ಸೈನಿಕರು, ಅಂಬಿಕಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ದೇಶಭಕ್ತ ಸಾರ್ವಜನಿಕರು ಕಾರ್ಯ ಕ್ರಮಕ್ಕೆ ಮೆರುಗು ತಂದರು. ಗಣ್ಯರು ಅಮರ್‌ ಜವಾನ್‌ ಜ್ಯೋತಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

Advertisement

ಪ್ರಾತಃಸ್ಮರಣೀಯರು
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಶಾಸಕ ಸಂಜೀವ ಮಠಂದೂರು, ದೇಶದ ಪ್ರಜೆಗಳ ಮನೆ ಮನದಲ್ಲಿ ದೇಶ ಪ್ರೇಮದ ಕಿಚ್ಚು ಬೆಳೆಯಬೇಕು.

ಕಾರ್ಗಿಲ್‌ನಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸೌರಭ್‌ ಕಾಲಿಯಾ ಎಂಬ ಯೋಧನ ಕಥೆ ನಮ್ಮಲ್ಲಿ ದೇಶ ಪ್ರೇಮವನ್ನು ಬಡಿದೆಬ್ಬಿಸಬೇಕು. ರಾತ್ರಿ ಹಗಲು ಹೋರಾಡಿ ನಮ್ಮ ದೇಶವನ್ನು ಸಂರಕ್ಷಿಸಿದ ಯೋಧರು, ಹುತಾತ್ಮರಾದ 527 ಅಮರ ಜವಾನ್‌ಗಳು ಪ್ರಾತಃ ಸ್ಮರಣೀಯರು ಎಂದರು. ಭಾರತ ಎಂದರೆ ಪುಣ್ಯಭೂಮಿ. 1971ರಲ್ಲಿ ನಡೆದ ಯುದ್ಧ ಮತ್ತು 1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧ ಎರಡೂ ನಮ್ಮ ಈಗಿನ ಪೀಳಿಗೆಗೆ ದೇಶ ಪ್ರೇಮ ಉಕ್ಕಿಸುವ ಘಟನೆಗಳು ಎಂದವರು ಬಣ್ಣಿಸಿದರು.

ಮಂಗಲ್‌ ಪಾಂಡೆ ಚೌಕ
1857ರಲ್ಲಿ ನಡೆದ ದೇಶದ ಪ್ರಥಮ ಸ್ವಾತಂತ್ರ್ಯದ ಸಂಗ್ರಾಮಕ್ಕೆ 100 ವರ್ಷ ಸಂದ ನೆನಪಿನಲ್ಲಿ 1957ರಲ್ಲಿ ಪುತ್ತೂರಿನಲ್ಲಿ ಧ್ವಜಸ್ತಂಭ ನಿರ್ಮಿಸಲಾಗಿತ್ತು. ಈ ಧ್ವಜಸ್ತಂಭವನ್ನು ಕಳೆದ ವರ್ಷ ಅಂಬಿಕಾ ಮಹಾವಿದ್ಯಾಲಯದ ಆಶ್ರಯದಲ್ಲಿ ನವೀಕರಣ ಮಾಡಲಾಗಿತ್ತು. ಇದಕ್ಕೆ ಮಂಗಲ್‌ ಪಾಂಡೆ ಚೌಕ ಎಂಬ ಹೆಸರಿಡಲಾಗಿದ್ದು, ನಾಮಫಲಕವನ್ನು ಶುಕ್ರವಾರ ಅನಾವರಣ ಮಾಡಲಾಯಿತು. ಇಲ್ಲೇ ಪಕ್ಕದಲ್ಲಿ ಅಮರ್‌ ಜವಾನ್‌ ಜ್ಯೋತಿಯೂ ಇದೆ. ಇಲ್ಲಿ ಬೆಳಗುತ್ತಿರುವ ಜ್ಯೋತಿ ದಿನದ 24 ಗಂಟೆಯೂ ಉರಿಯುತ್ತಿದೆ. ದಕ್ಷಿಣ ಭಾರತದಲ್ಲಿ ಈ ಮಾದರಿಯ ಸ್ಮಾರಕ ಇದೇ ಮೊದಲು ಎನ್ನುವ ಕೀರ್ತಿ ಇದೆ.

ಉಪನ್ಯಾಸಕ ಶ್ರೀಕೃಷ್ಣ ಉಪಾಧ್ಯಾಯ ದಿಕ್ಸೂಚಿ ಭಾಷಣ ಮಾಡಿದರು. ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿ, ಅಧ್ಯಾಪಕ ಸತೀಶ್‌ ಕಾರ್ಯಕ್ರಮ ನಿರ್ವಹಿಸಿದರು.

“ನಮ್ಮ ಕಣ್ಣು ತೇವವಾಯಿತು’
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಮಂಗಲ್‌ಪಾಂಡೆ ಚೌಕ್‌ ನಾಮಫಲಕ ಅನಾವರಣ ಮಾಡಿ, ಕಾರ್ಗಿಲ್‌ ಯುದ್ಧ ದೇಶದ ಸೈನಿಕ ಶಕ್ತಿ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಲೋಕಕ್ಕೆ ಸಾದರಪಡಿಸಿತು. ಈ ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದ ಕೊಪ್ಪಳದ ವೀರ ಯೋಧನ ಮನೆಗೆ ನಾನು ಭೇಟಿ ನೀಡಿದ್ದೆ. ಯೋಧನ ಗರ್ಭಿಣಿ ಪತ್ನಿ ಪತಿಯ ವೀರ ಮರಣಕ್ಕೆ ದುಃಖೀಸುವ ಬದಲಾಗಿ ದೇಶಕ್ಕಾಗಿ ಗಂಡು ಮಗು ಹುಟ್ಟುವಂತೆ ಆಶೀರ್ವದಿಸಿ ಎಂದು ನೆರೆದವರಲ್ಲಿ ಕೇಳಿದ ರೀತಿ ಹೆಮ್ಮೆ ತರಿಸುವಂಥದ್ದು. ಈ ಮಾತು ಆಕೆ ಹೇಳಿದಾಗ ಆಕೆಯ ಕಣ್ಣಲ್ಲಿ ನೀರು ಬರಲಿಲ್ಲ. ಬದಲಾಗಿ ನಮ್ಮ ಕಣ್ಣು ತೇವವಾಯಿತು ಎಂದು ನೆನಪಿಸಿಕೊಂಡರು.

ಪಠ್ಯವಾಗಲಿ
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷರಾದ ಜಗನ್ನಾಥ ಎಂ. ಮಾತನಾಡಿ, ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ 21 ವೀರ ಯೋಧರಿಗೆ ಪರಮವೀರ ಚಕ್ರ ಗೌರವ ನೀಡಲಾಗಿದೆ. ಈ 21 ಯೋಧರ ಜೀವನ ಚರಿತ್ರೆ ಶಾಲಾ ಪಠ್ಯದಲ್ಲಿ ಅಳವಡಿಕೆಯಾಗಬೇಕಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next