ಸಿರುಗುಪ್ಪ: ಮಳೆಗಾಲದ ತರಕಾರಿ ಕಾರ್ಚಿಕಾಯಿ ಲಗ್ಗೆ ಇಟ್ಟಿದ್ದು, ಅನೇಕ ಕಡೆಗಳಲ್ಲಿ ಕಾರ್ಚಿಕಾಯಿ ಮಾರಾಟಮಾಡುವ ವ್ಯಾಪಾರಿಗಳು ಕಂಡು ಬರುತ್ತಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಆರಂಭಕ್ಕೆ ಮುನ್ನವೇ ಹೊಲವನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿದ ಹೊಲಗಳಲ್ಲಿ ಮೊದಲ ಮಳೆ ಬೀಳುತ್ತಿದ್ದಂತೆ ಕಾರ್ಚಿಕಾಯಿ ಬಳ್ಳಿ ಹುಟ್ಟಿಕೊಳ್ಳುತ್ತದೆ. ಈ ಬಳ್ಳಿಯಲ್ಲಿ ನೂರಾರು ಸಂಖ್ಯೆಯಲ್ಲಿಕಾರ್ಚಿಕಾಯಿಗಳು ಹುಟ್ಟಿಕೊಳ್ಳುತ್ತವೆ. ಇವನ್ನು ರೈತ ಮಹಿಳೆಯರು ಮತ್ತು ವ್ಯಾಪಾರ ಮಾಡುವವರು ಹೊಲಗಳಿಗೆ ತೆರಳಿ ಬಳ್ಳಿಯಲ್ಲಿರುವ ಕಾಯಿಗಳನ್ನು ಕಿತ್ತುಕೊಂಡು ಬಂದು ನಗರದ ಸೇರಿದಂತೆ ತಾಲೂಕಿನಾದ್ಯಂತ ಮಳೆಗಾಲದಲ್ಲಿ ಮಾರಾಟ ಮಾಡುತ್ತಾರೆ. ಒಂದು ಕೆಜಿ ಕಾರ್ಚಿಕಾಯಿಗೆ ಸುಮಾರು ರೂ. 150 ಬೆಲೆ ದೊರೆಯುತ್ತಿದ್ದು, ಒಂದು ಸೇರ್‌ಗೆ ರೂ. 50ಕ್ಕೆ ಮಾರಾಟ ಮಾಡಲಾಗುತ್ತಿದ್ದು, ತರಕಾರಿ ಪ್ರಿಯರು ಕಾರ್ಚಿಕಾಯಿಯನ್ನು ಹುಡುಕಿಕೊಂಡು ಬಂದು ಖರೀದಿಸುತ್ತಿದ್ದಾರೆ.
ಹಸಿರು ಬಣ್ಣದ ಕಾರ್ಚಿಕಾಯಿಗಳು ವರ್ಷಕ್ಕೆ ಒಂದು ಭಾರಿ ಮಾತ್ರ ಮಳೆಗಾಲದಲ್ಲಿ ಸಿಗುತ್ತವೆ. ಮಳೆಗಾಲದಲ್ಲಿ ಮಾತ್ರ ದೊರೆಯುವುದರಿಂದ ಒಮ್ಮೆಯಾದರೂ ಇವನ್ನು ತಿಂದರೆ ದೇಹದ ಆರೋಗ್ಯಕ್ಕೆ ಅನುಕೂಲ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದ್ದು, ಕಾರ್ಚಿಕಾಯಿಯನ್ನು ತಿಂದರೆ ಬೊಜ್ಜು ಬರುವುದಿಲ್ಲ. ಮಧುಮೇಹಕ್ಕೆ ಪರಿಣಾಮಕಾರಿಯಾದ ಔಷಧಿಯಾಗಿ ಕೆಲಸ ಮಾಡುತ್ತದೆ. ರಕ್ತದೊತ್ತಡ ಕಡಿಮೆ ಮಾಡುತ್ತದೆ. ಮೂಳೆಗಳಿಗೆ ಶಕ್ತಿ ನೀಡುತ್ತದೆ. ಕಾರ್ಚಿಕಾಯಿ ಬಳ್ಳಿಯ ರಸವು ಚರ್ಮರೋಗಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ ಎನ್ನುವ ಕಾರಣದಿಂದ ಇಲ್ಲಿನ ಜನರು ಕಾರ್ಚಿಕಾಯಿಯನ್ನು ಬಯಸಿ ಬಯಸಿ ತಿನ್ನುತ್ತಾರೆ.
ಎರೆ ಹೊಲದಲ್ಲಿ ವರ್ಷಕ್ಕೊಮ್ಮೆ ಮಳೆಗಾಲದಲ್ಲಿ ಬೆಳೆಯುವ ಕಾರ್ಚಿಕಾಯಿ ತಿಂದರೆ ದೇಹಕ್ಕೆ ಉತ್ತಮ ಆರೋಗ್ಯ ಸಿಗುತ್ತದೆ. ಔಷಧಿ ಗುಣಗಳಿರುವ ಈ ಕಾಯಿಯನ್ನು ತಿನ್ನುವುದರಿಂದ ಅನೇಕ ರೋಗಗಳನ್ನು ತಡೆಯಲು ಸಾಧ್ಯವಾಗುತ್ತದೆ. ಇದರಿಂದಾಗಿ ವರ್ಷಕ್ಕೆ ಒಮ್ಮೆಯಾದರೂ ಕಾರ್ಚಿಕಾಯಿಯನ್ನು ತಿನ್ನುತ್ತೇವೆಂದು ನಗರ ನಿವಾಸಿಗಳಾದ ಲಕ್ಷ್ಮೀ, ಸಿದ್ದಮ್ಮ, ಮಾರೆಮ್ಮ ತಿಳಿಸಿದ್ದಾರೆ.
ಒಂದು ಕೆಜಿಗೆ 150ರೂ., ಒಂದು ಸೇರಿಗೆ 50ರೂನಂತೆ ಕಾರ್ಚಿಕಾಯಿ ಮಾರಾಟ ಮಾಡುತ್ತಿದ್ದೇವೆ. ಜನರು ಕಾರ್ಚಿಕಾಯಿ ಖರೀದಿಗೆ ಹುಡುಕಿಕೊಂಡು ಬರುತ್ತಿದ್ದಾರೆ.ಇದರಿಂದಾಗಿ ಉತ್ತಮ ವ್ಯಾಪಾರವಾಗುತ್ತಿದೆ. –
ಸಿದ್ದಮ್ಮ, ವ್ಯಾಪಾರಿ