ಕಾರವಾರ: ನೀರಿನ ಬವಣೆ ಇರುವ ಹಳ್ಳಿಗಳನ್ನು ಗುರುತಿಸಿ. ಅವುಗಳಿಗೆ ಎಲ್ಲಿಂದ ನೀರಿನ ಮೂಲ ಒದಗಿಸಬಹುದು ಎಂಬುದನ್ನು ಯೋಚಿಸಿ, ಹಣದ ವೆಚ್ಚ ಎಷ್ಟಾಗಬಹುದು ಎಂದು ನಿರ್ಧರಿಸಿ, ಕ್ರಿಯಾಯೋಜನೆ ರೂಪಿಸಿ ತಕ್ಷಣ ಕಳುಹಿಸಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ದೇಶಪಾಂಡೆ ಆದೇಶಿಸಿದರು.
ಡಿಸಿ ಕಚೇರಿ ಸಭಾಭವನದಲ್ಲಿ ಕೆಡಿಪಿ ಸಭೆ ನಡೆಸಿದ ಅವರು, ಬರ ಇರುವ ತಾಲೂಕುಗಳಿಗೆ ತಕ್ಷಣ 50 ಲಕ್ಷ ರೂ. ಬಿಡುಗಡೆ ಮಾಡಿದೆ. ಇತರೆ ತಾಲೂಕಿಗೆ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ನೀರಿವ ಬವಣೆ ನೀಗಲು ಹಣ ಇದೆ. ದನಗಳಿಗೆ ಮೇವು ಸಹ ಸಿಗುವಂತೆ ನೋಡಿಕೊಳ್ಳಿ. ಜನರಿಂದ ದೂರು ಬಾರಂದೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಎಲ್ಲಾ ತಾಲೂಕುಗಳ ಕ್ರಿಯಾಯೋಜನೆ ಸಿದ್ಧವಾಗಿದ್ದು, ಟಾಸ್ಕ್ಫೋರ್ಸ್ ಸಭೆಗಳಲ್ಲಿ ನೀರಿವ ಬವಣೆ ಇರುವ ಗ್ರಾಮಗಳ ಪಟ್ಟಿ ಸಿದ್ಧವಾಗಿದೆ. ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಮೊಹಮ್ಮದ್ ರೋಶನ್ ಹೇಳಿದರು.
ಗಂಗಾವಳಿಯ 36 ಕೋಟಿ ರೂ.ಯೋಜನೆ: 36 ಕೋಟಿ ರೂ. ವೆಚ್ಚದ ಗಂಗಾವಳಿ ಗೋಕರ್ಣ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡಿ. ಅಂಕೋಲಾ ತಾಲೂಕಿನ ಹಳ್ಳಿಗಳ ಜನರಿಗೆ ಸಹ ನೀರು ಸರಬರಾಜು ಮಾಡಲು ಪ್ರತ್ಯೇಕ ಯೋಜನೆ ರೂಪಿಸಿ, ತಕ್ಷಣ ಸರ್ಕಾರಕ್ಕೆ ಕಳುಹಿಸಿ. ಸಚಿವ ಸಂಪುಟದಲ್ಲಿಟ್ಟು ಅನುಮೋದನೆ ಕೊಡಿಸುವೆ ಎಂದರು. ಶಾಸಕಿ ರೂಪಾಲಿ ನಾಯ್ಕ ಅಂಕೋಲಾ ತಾಲೂಕಿನ ಕೆಲ ಗ್ರಾಮಸ್ಥರ ಬೇಡಿಕೆ ಮುಂದಿಟ್ಟಾಗ, ಮಂಜೂರಾದ ಕಾಮಗಾರಿ ತಡೆಯುವುದು ಬೇಡ. ಗ್ರಾಮಸ್ಥರಿಗೆ ಪೈಪ್‌ಲೈನ್ ಹಾಕಲು ಸಹಕರಿಸಲು ತಿಳಿಸಿ ಎಂದರು. ಪೊಲೀಸರು ರಕ್ಷಣೆ ಪಡೆದು ಕಾಮಗಾರಿ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ನಗರ ನೀರು ಸರಬರಾಜು ಎಂಜಿನಿಯರ್‌ಗೆ ಸೂಚಿಸಿದರು. ಕರಾವಳಿ ಭಾಗದಲ್ಲಿ ಉಪ್ಪು ನೀರು ನುಗ್ಗುವ ಪ್ರದೇಶಗಳಿಗೆ ಕಿರು ಕಿಂಡಿ ಅಣೆಕಟ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಕೆಡಿಪಿ ಸಭೆಯಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಕಂದಾಯ ಸಚಿವರು ಸೂಚನೆ ನೀಡಿದರು.
ಗ್ರಾಮಾಂತರ ಭಾಗದಲ್ಲಿ ಶಾಲಾ ಮಕ್ಕಳು ಹಳ್ಳಗಳನ್ನು ದಾಟಬೇಕಾದ ಕಡೆಗೆ ಫುಟ್ ಬ್ರಿಜ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿಕೊಳ್ಳಿ. ಅದಕ್ಕೆ ಪ್ರತ್ಯೇಕ ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ ಎಂದ ಸಚಿವ ದೇಶಪಾಂಡೆ, ಶಾಲಾ ಕಟ್ಟಡ ರಿಪೇರಿ ಕಾಮಗಾರಿಗಳು ತಕ್ಷಣ ಆರಂಭವಾಗಬೇಕು. ಶಿಕ್ಷಣ ಇಲಾಖೆಗೆ ಬಂದ ಅನುದಾನ ಸರಿಯಾಗಿ ಬಳಸಿ. ಶಿಕ್ಷಕರ ಕೊರತೆ ಆಗಬಾರದು. ಹೆಚ್ಚುವರಿ ಶಿಕ್ಷಕರೆಂದು ವರ್ಗ ಮಾಡಿದವರನ್ನು ಶೈಕ್ಷಣಿಕ ವರ್ಷದ ಕೊನೆಗೆ ಮೂಲ ಕೆಲಸ ಮಾಡುತ್ತಿದ್ದ ಶಾಲೆಗಳಿಗೆ ಕಳುಹಿಸಿ. ಸರ್ಕಾರ ಈ ವರ್ಷ ಹೆಚ್ಚುವರಿ ವರ್ಗಾವಣೆ, ಕೌನ್ಸೆಲಿಂಗ್ ಅವೈಜ್ಞಾನಿಕ ಎಂದು ರದ್ದು ಮಾಡಿದೆ. ಹಾಗಾಗಿ ಸರ್ಕಾರ ಇಡೀ ವರ್ಗಾವಣೆ ಪ್ರಕ್ರಿಯೆಯನ್ನು ತಡೆದಿದೆ. ಸರ್ಕಾರದ ಆದೇಶಕ್ಕಿಂತ ಮೊದಲೇ ವರ್ಗಾಯಿಸಿದವರನ್ನು ಮರಳಿ ಅವರಿದ್ದ ಶಾಲೆಗೆ ಕಳುಹಿಸಿ, ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದರು. ಶಾಸಕ ಸುನೀಲ್ ನಾಯ್ಕ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಜಯಶ್ರೀ ಮೊಗೇರಾ ಸಭೆಯಲ್ಲಿದ್ದರು.