ಕಾರವಾರ: ಮಹಾತ್ಮಾ ಗಾಂಧೀಜಿಯವರ ಬದ್ಧತೆ, ಆದರ್ಶ ಹಾಗೂ ತತ್ವಗಳು ಜಗತ್ತಿಗೆ ಮಾದರಿಯಾಗಿವೆ. ಅವರ ಹೆಜ್ಜೆಗುರುತುಗಳ ಮಾಹಿತಿಯನ್ನು ರಾಜ್ಯದಲ್ಲಿ ಯುವ ಪೀಳಿಗೆಗೆ ತಲುಪಿಸಲು ಸಮಗ್ರ ಮಾಹಿತಿ ಸಂಗ್ರಹಿಸಿ ವ್ಯಾಪಕ ಪ್ರಚಾರ ಮಾಡುವ ಕಾರ್ಯವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಡುತ್ತಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಹೇಳಿದರು.
ನಗರದ ರವೀಂದ್ರನಾಥ ಠಾಗೋರ ಕಡಲತೀರದ ಮಕ್ಕಳ ಉದ್ಯಾವನದಲ್ಲಿ ಬುಧವಾರ ಗಾಂಧೀಜಿರವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಗಾಂಧೀಜಿಗೆ ನಮನ ಕಾರ್ಯಕ್ರಮದಲ್ಲಿ ಗಾಂಧಿ ವಿಚಾರಧಾರೆ ಕುರಿತು ಅವರು ಮಾತನಾಡಿದರು.
ಗಾಂಧೀಜಿ ಅವರು 21 ವರ್ಷ ದಕ್ಷಿಣ ಆಫ್ರಿಕಾದಲ್ಲಿ ಕಳೆದರು. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭದಲ್ಲಿ ಅವುಗಳ ವಿರುದ್ಧ ಹೋರಾಡಿದ ಅವರು, ಅನೇಕ ಸಂದರ್ಭಗಳಲ್ಲಿ ಅವಮಾನಕ್ಕೆ ಒಳಗಾದರು. ಭಾರತಕ್ಕೆ ಹಿಂದಿರುಗಿದ ಸಂದರ್ಭದಲ್ಲಿ ಅವರು ದೇಶದುದ್ದಕ್ಕೂ ರೈಲಿನಲ್ಲಿ ಸಂಚರಿಸಿ ಜನ ಸಾಮಾನ್ಯರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುವ ಮೂಲಕ ಜನಸಮಾನ್ಯರನ್ನು ಮುಖ್ಯವಾಹಿನಿಗೆ ತಂದರು. ಇಂತಹ ನಾಯಕತ್ವ ಗುಣಗಳಿಂದ ಅವರನ್ನು ಮಹಾತ್ಮಾ, ರಾಷ್ಟ್ರಪಿತ ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಸುಗಮ ಸಂಗೀತದ ಖ್ಯಾತ ಗಾಯಕಿ ಕಾರವಾರದ ದೀಪ್ತಿ ಅರ್ಗೇಕರ ಹಾಗೂ ಗಾಯಕ ರಾಮಾ ಬಾಂದೇಕರ್ ಹಾಗೂ ತಂಡದವರಿಂದ ಗಾಂಧೀಜಿ ಅವರಿಗೆ ಪ್ರಿಯವಾದ ರಘುಪತಿ ರಾಘವ ರಾಜಾ ರಾಮ ಭಜನ ಗೀತೆಗಳನ್ನು ಹಾಡಿದರು.
ಸಾಕ್ಷಚಿತ್ರ ಪ್ರದರ್ಶನ: ವೇದಿಕೆಯಲ್ಲಿ ಬೃಹತ್ ಎಲ್‌ಇಡಿ ಪರದೆಯ ಮೂಲಕ ಗಾಂಧೀಜಿ ಅವರ ಜೀವನ ದರ್ಶನ ಕುರಿತ ಸಾಕ್ಷಚಿತ್ರ ಪ್ರದರ್ಶನ ನೀಡಲಾಯಿತು.
ಛಾಯಾಚಿತ್ರ ಪ್ರದರ್ಶನ: ಮಹಾತ್ಮ ಗಾಂಧೀಜಿಯವರ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಸೆರೆಹಿಡಿಯಲಾದ ಅಪೂರ್ವ ಛಾಯಾಚಿತ್ರ ಪ್ರದರ್ಶನ ಜರುಗಿತು. ಐವರು ಪೌರಕರ್ಮಿಕರಿಗೆ ಸನ್ಮಾನ: ಸ್ವಚ್ಚತಾ ಹೀ ಸೇವಾ ವಾಕ್ಯದೊಂದಿಗೆ ಗಾಂಧಿಜಿಯವರ ಜನ್ಮ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಸ್ವಚ್ಚತೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾರವಾರ ನಗರಸಭೆಯ ಐದು ಜನ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.