ಗದಗ: ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದರೂ, ಕನ್ನಡಿಗರ ಆಶಯ ಈಡೇರಿಸುವಲ್ಲಿ ವಿಫಲವಾಗಿದೆ. ರಾಜ್ಯಕ್ಕೆ ಅಪ್ಪಟ ಕನ್ನಡಿಗರ ಪಕ್ಷದ ಅಗತ್ಯವಿದ್ದು, ಕರ್ನಾಟಕ ರಕ್ಷಣಾ ವೇದಿಕೆಯನ್ನು ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರವೇ ಸಂಘಟನೆಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಡೆಯಿದ್ದು, ರಾಜಕೀಯ ಪಕ್ಷವಾಗಿ ಹೊರ ಹೊಮ್ಮಲು ಸಶಕ್ತವಾಗಿದೆ. ಅನೇಕ ಸಂದರ್ಭಗಳಲ್ಲಿ ಮಠಾ ಧೀಶರು, ಸಾಹಿತಿಗಳು, ವಿಚಾರವಾದಿಗಳು, ಪ್ರಗತಿಪರ ಚಿಂತಕರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಅನ್ಯ ಭಾಷಿಗರ ಪರವಾಗಿ ನಿಲ್ಲುವ ರಾಷ್ಟ್ರೀಯ ಪಕ್ಷಗಳು ಕನ್ನಡಿಗರ ಬೇಡಿಕೆಗಳಿಗೆ ಕಿವಿಗೊಡುತ್ತಿಲ್ಲ. ಇತ್ತೀಚೆಗೆ ಉಂಟಾದ ಪ್ರವಾಹ ಪರಿಹಾರಕ್ಕೆ 38,000 ಕೋಟಿ ರೂ.ನೆರವು ಕೋರಿದರೆ ಕೇಂದ್ರದ ಬಿಜೆಪಿ ಸರ್ಕಾರ ಭಿಕ್ಷೆ ಎಂಬಂತೆ 1,200 ಕೋಟಿ ರೂ.ನೀಡಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಜೆಡಿಎಸ್ ಪ್ರಾದೇಶಿಕ ಪಕ್ಷ ಎಂಬಂತೆ ನಡೆದುಕೊಳ್ಳುತ್ತಿಲ್ಲ.
ಕಾವೇರಿ, ಮಹದಾಯಿ ಪರ ಜೆಡಿಎಸ್ ಗಟ್ಟಿ ಧ್ವನಿ ಎತ್ತುವುದಿಲ್ಲ. ಭಾಷಾ ಸಮಸ್ಯೆಗಳು, ಸಾಹಿತ್ಯಿಕ ವಿಚಾರಗಳು ಬಂದಾಗ ಹಾಗೂ ಕರ್ನಾಟಕದ ಹಿತದೃಷ್ಟಿಯಿಂದ ರಾಜ್ಯದ ಪರ ಜೆಡಿಎಸ್ ಮಾತನಾಡಿದ್ದು ಇವತ್ತಿನವರೆಗೂ ನಾನು ನೋಡಿಯೇ ಇಲ್ಲ. ರಾಜ್ಯದ ಹಿತಕಾಯಲು ಅಪ್ಪಟ ಕನ್ನಡದ ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂದರು. ಮುಂದಿನ ದಿನಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಕರವೇಯಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು.
ಈಗಾಗಲೇ ರಾಜ್ಯದ ವಿವಿಧ ಗ್ರಾಪಂಗಳಲ್ಲಿ 680 ಸದಸ್ಯರಿದ್ದು, ಮೊದಲ ಹಂತದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕರವೇಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಬಳಿಕ ತಾಪಂ, ಜಿಪಂ ಹಾಗೂ ನಗರಸಭೆ, ವಿಧಾನಸಭೆ ಸ್ಪ ರ್ಧೆಗೆ ಸಿದ್ಧತೆ ನಡೆಸಲಾಗುತ್ತದೆ ಎಂದರು.