ಕಾರವಾರ: ಆಗಸದಲ್ಲಿ ಹಾರುತ್ತಿದ್ದ ಪ್ಯಾರಾ ಮೊಟಾರ್ ಒಂದು ತಾಂತ್ರಿಕ ದೋಷದಿಂದ ಟ್ಯಾಗೋರ್ ಕಡಲಿನಲ್ಲಿ ಬಿದ್ದಿದ್ದು, ಓರ್ವ ಮೃತಪಟ್ಟ ಘಟನೆ ನಡೆದಿದೆ.
ಪೈಲೆಟ್ ಜೊತೆಗೆ ಪ್ಯಾರಾ ಮೊಟಾರ್ ನಲ್ಲಿ ಹಾರಾಟ ನಡೆಸುತ್ತಿದ್ದ ಸೀಬರ್ಡ್ ನೌಕರ ಕ್ಯಾಪ್ಟನ್ ಬಿ.ಎಸ್.ಮಧುಸೂದನ್ ರೆಡ್ಡಿ (54) ಮೃತಪಟ್ಟವರು.
ಪ್ಯಾರಾ ಮೋಟರ್ ಪತನದ ವೇಳೆ ಸಮುದ್ರದಲ್ಲಿ ಬಿದ್ದ ಪೈಲೆಟ್ ಮತ್ತು ಪ್ರವಾಸಿಗರನ್ನೂ ಕೂಡಲೇ ನೀರಿನಿಂದ ಮೇಲೆಕ್ಕೆತ್ತಲಾಗಿತ್ತು. ಪೈಲೆಟ್ ಅಪಾಯದಿಂದ ಪಾರಾಗಿದ್ದು, ಮಧುಸೂದನ್ ರೆಡ್ಡಿ ಆಸ್ಪತ್ರೆಯಲ್ಲಿ ಕೊನೆಯಿಸಿರೆಳೆದಿದ್ದಾರೆ.
ಪ್ಯಾರಾ ಗ್ಲೈಡಿಂಗ್ ಹಾರಿಸುವ ಪೈಲೆಟ್ ಪೂನಾದ ವಿ. ವೈದ್ಯ ಅಪಾಯದಿಂದ ಪಾರಾಗಿದ್ದಾರೆ. ಮಧುಸೂದನ್ ರೆಡ್ಡಿ ಅವರ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಡೆದ ಕಡಲತೀರದಿಂದ ಹತ್ತಿರದಲ್ಲೇ ಮೆಡಿಕಲ್ ಕಾಲೇಜು ಅಧೀನದ ಜಿಲ್ಲಾ ಆಸ್ಪತ್ರೆ ಇದ್ದರೂ, ಅರ್ಧ ಗಂಟೆಗೂ ಅಧಿಕ ಕಾಲ ಅಂಬ್ಯುಲೆನ್ಸ್ ಸ್ಥಳಕ್ಕೆ ಬಂದಿರಲಿಲ್ಲ ಎಂದು ವರದಿಯಾಗಿದೆ.
ಕೂಡಲೇ ನಗರ ಠಾಣೆಯ ಪಿಎಸ್ಐ ಸಂತೋಷ್ ತಮ್ಮ ಜೀಪಿನಲ್ಲೇ ಮಧುಸೂದನ್ ರೆಡ್ಡಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಿಸದ ಮೃತಪಟ್ಟಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.