Advertisement

ಮುರಿದು ಬಿತ್ತು ನಿರಾಶ್ರಿತರ ಬದುಕು

03:18 PM Aug 15, 2019 | Team Udayavani |

ನಾಗರಾಜ ಹರಪನಹಳ್ಳಿ
ಕಾರವಾರ:
ಕಾಳಿ ನದಿಯ ದಂಡೆಗ್ರಾಮಗಳಲ್ಲಿ ಜನರ ಬದುಕು ಮುರಿದು ಬಿದ್ದಿದೆ. ಕಾಳಿ ನದಿ ದಂಡೆಯ 28 ಗ್ರಾಮಗಳ ಪೈಕಿ ನಾಲ್ಕಾರು ಗ್ರಾಮಗಳ ಜನರ ಬದುಕು ದಯನೀಯವಾಗಿದೆ. ಎರಡು ದ್ವೀಪಗಳ ಜನರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. 50 ವರ್ಷಗಳಿಂದ ಕಟ್ಟಿದ ಬದುಕು 5 ದಿನಗಳಲ್ಲಿ ಎಲ್ಲವನ್ನು ಕಸಿದುಕೊಂಡಿದೆ. ಆ. 5ರಿಂದ ಆ. 10ರವರೆಗೆ ಸುರಿದ ಮಳೆ, ಅಣೆಕಟ್ಟುಗಳಿಂದ ಬಿಟ್ಟ ನೀರು ಜನರ ಬದುಕನ್ನು ಇನ್ನಿಲ್ಲವಾಗಿಸಿತು. ಈಗ ಅವರಿಗೆ ಆಕಾಶವೇ ಚಪ್ಪರ, ಭೂಮಿಯೇ ಹಾಸಿಗೆ ಎಂಬಂತಾಗಿದೆ.

Advertisement

ನದಿಯ ನೀರು ಇಳಿದ ನಂತರ ಮನೆಗಳಲ್ಲಿ ವಾಸಮಾಡುವ ಸನ್ನಿವೇಶವೂ ಇಲ್ಲ. ಇದ್ದ ಬಟ್ಟೆ ಬರೆ, ಕಾಳು ಕಡಿ, ಮನೆಯ ಅಗತ್ಯ ಸಾಮಾಗ್ರಿ, ಎಲೆಕ್ಟ್ರಾನಿಕ್‌ ವಸ್ತುಗಳು ಎಲ್ಲವೂ ಬಳಸದ ಸ್ಥಿತಿ ಇದೆ. ಇದನ್ನೆಲ್ಲ ಸರ್ಕಾರ ತುಂಬಿಕೊಡುವುದು ಕಷ್ಟ. ಸಂಘ ಸಂಸ್ಥೆಗಳು ಸಹ ತಾತ್ಕಲಿಕ ಆಹಾರ, ಒಂದಿಷ್ಟು ಹೊದಿಕೆ ಕೊಡಬಹುದು. ಅದನ್ನು ಮೀರಿ ಬದುಕು ಕಟ್ಟಲು ಎಲ್ಲವನ್ನು ಕಳೆದುಕೊಂಡವರೇ ಶ್ರಮಪಡಬೇಕಾಗಿದೆ.

ಕದ್ರಾ, ಮಲ್ಲಾಪುರ ಹಿಂದವಾಡ, ಕುರ್ನಿಪೇಟ, ಕಿನ್ನರ, ವೈಲವಾಡ ಗ್ರಾಮಗಳ ನಿವಾಸಿಗಳ ಮನೆಗೆ ನದಿಯ ನೀರು ಹೊಕ್ಕಿದ್ದು, ಇಡೀ ಬದುಕನ್ನು ಮೂರಾಬಟ್ಟಿಯಾಗಿಸಿದೆ. ಇಲ್ಲಿಗೆ ಉದಯವಾಣಿ ಭೇಟಿ ನೀಡಿದಾಗ ಜನರು ತಮ್ಮ ಮನೆಗಳಲ್ಲಿನ ಮಣ್ಣರಾಡಿಯನ್ನು ತೊಳೆಯುವುದರಲ್ಲಿ, ಬಳಸಬಹುದಾದ ಸಾಮಾನುಗಳನ್ನು ಹುಡುಕಿ ಮತ್ತೆ ಮನೆಯೊಳಗೆ ಇಟ್ಟುಕೊಳ್ಳುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಮನೆಗಳು ಎರಡು ದಿನವಾದರೂ ಸ್ವಚ್ಛವಾಗಿಲ್ಲ. ಆರು ಅಡಿ ಎತ್ತರಕ್ಕೆ ನುಗ್ಗಿದ ನೀರಿನಿಂದಾಗಿ ಕದ್ರಾ ಬಸ್‌ ನಿಲ್ದಾಣದ ಆಜೂ ಬಾಜಿನ ಮನೆಗಳು, ಅಂಗಡಿಗಳು ತೀವ್ರಹಾನಿಗೆ ತುತ್ತಾಗಿವೆ. ಕೆಪಿಸಿ ಶಾಲೆಯಲ್ಲಿ ಆಶ್ರಯ ಪಡೆದಿರುವ ಅವರು ದಿನವಿಡೀ ಮನೆ ಸ್ವಚ್ಛ ಮಾಡಿ, ಕೊನೆಗೆ ಗಂಜಿ ಕೇಂದ್ರದ ಆಶ್ರಯಕ್ಕೆ ಮರಳುತ್ತಾರೆ. ಜಿಲ್ಲಾಡಳಿತ ಬದುಕು ಕಳೆದುಕೊಂಡ ಜನರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಿದ್ದು, ಪೂರ್ಣ ಮನೆ ಕಳೆದುಕೊಂಡವರಿಗೆ ತಾತ್ಕಲಿಕವಾಗಿ ಬಾಡಿಗೆ ಮನೆ ಕೊಡಿಸಲು ಮುಂದಾಗಿದೆ. ಹಾಗೆ ಪೂರ್ಣ ಮನೆಕಳೆದುಕೊಂಡ ಕುಟುಂಬಗಳ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಅಧಿಕಾರಿ ವರ್ಗ ಮುಂದಾಗಿದೆ. ಹೊಸದಾಗಿ ಮನೆ ನಿರ್ಮಾಣ ಮಾಡಿಕೊಡುವ ತನಕ ಅವರಿಗೆ ಅವರ ಗ್ರಾಮ ಸಮೀಪ ಅಥವಾ ಪಕ್ಕದ ಗ್ರಾಮದಲ್ಲಿ ಬಾಡಿಗೆ ಮನೆಗಳು ಸಿಗಬಹುದೇ ಎಂಬ ಹುಡುಕಾಟವೂ ನಡೆದಿದೆ.

ಇನ್ನೂ ಮನೆಗೆ ತೆರಳದ ಉಂಬಳಿ ಜೂಗ್‌ ಗ್ರಾಮಸ್ಥರು: ಕಾಳಿ ನದಿಯ ದ್ವೀಪಗ್ರಾಮಗಳಾದ ಉಂಬಳಿಜೂಗ, ಖಾರ್ಗೆಜೂಗಗಳಲ್ಲಿ ಜನರು ಇನ್ನು ಮನೆಗಳಿಗೆ ಮರಳದ ಸ್ಥಿತಿ ಇದೆ. ಈ ದ್ವೀಪಗ್ರಾಮಗಳ ಜನರು ಇನ್ನೂ ಗಂಜಿಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸಿದ್ಧರದಿಂದ ಕಾಳಿ ನದಿ ಮಧ್ಯೆ ಇರುವ ಗ್ರಾಮ ಉಂಬಳಿಜೂಗ್‌ ದ್ವೀಪ ಗ್ರಾಮ. ಇಲ್ಲಿ 35 ಕುಟುಂಬಗಳು ವಾಸವಾಗಿವೆ. ದೋಣಿ ಮೂಲಕವೇ ಈ ಗ್ರಾಮ ತಲುಪಬೇಕು. ಇವರ ಸ್ಥಿತಿ ಇತರೆ ಗ್ರಾಮಗಳ ಜನರಿಗಿಂತ ಕಷ್ಟಕರವಾಗಿದೆ. ಮಳೆ ಸ್ವಲ್ಪ ಕಡಿಮೆಯಾದ ಮೇಲೆ ಸಹ ದ್ವೀಪಕ್ಕೆ ತೆರಳಿ ಮನೆಗಳನ್ನು ನೋಡಿ ಬರುವುದೇ ಆಗಿದೆ. ಅಲ್ಲಿ ವಾಸವಾಗುವ ಸ್ಥಿತಿ ಇಲ್ಲ. ಎಲ್ಲವೂ ಮುರಿದು ಬಿದ್ದಿದೆ. ಮಣ್ಣಿನ ಗೋಡೆಯ ಮನೆಗಳು ಕುಸಿದಿವೆ. ಬಾವಿ ನೀರು ಕೆಂಪು ರಾಡಿಯಾಗಿದೆ. ಕುಡಿಯುವ ನೀರಿಗೂ ಈಗ ಕಾಳಿ ನದಿ ದಂಡೆಯ ಗ್ರಾಮಗಳು ಸಮಸ್ಯೆ ಎದುರಿಸುತ್ತಿವೆ. ಹಾಗಾಗಿ ಇನ್ನು ಅನೇಕ ಕುಟುಂಬಗಳು ಗಂಜಿಕೇಂದ್ರ ಅವಲಂಬಿಸಿವೆ. ಉಂಬಳಿಜೂಗ್‌, ಖಾರ್ಗೆಜೂಗ್‌ ಜನರು ಮುಂದೇನು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಅಧಿಕಾರಿಗಳು ಈ ಗ್ರಾಮಗಳ ಜನರ ಸಮಸ್ಯೆ ಅರಿತಿದ್ದು, ಪರ್ಯಾಯಕ್ಕೆ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಮಳೆ ಇನ್ನು ನಿಂತಿಲ್ಲ. ಆಗಾಗ ಸುರಿಯುತ್ತಲೇ ಇದೆ. ಇನ್ನು ಒಂದು ವಾರ ಮಳೆಯ ಸೂಚನೆ ಇದೆ. ಅಣೆಕಟ್ಟು ಭರ್ತಿಯಾದರೆ ಮತ್ತೆ ನದಿ ನಡುವಿನಿಂದ ದಡದ ಗ್ರಾಮಗಳಿಗೆ ಬರಬೇಕು. ಹಾಗಾಗಿ ಉಂಬಳಿಜೂಗ್‌ ಗ್ರಾಮಸ್ಥರನ್ನು ಅಧಿಕಾರಿಗಳು ಗಂಜಿಕೇಂದ್ರದಲ್ಲೇ ಉಳಿಸಿಕೊಂಡಿದ್ದಾರೆ. ಮಾನಸಿಕವಾಗಿ ಆತ್ಮಸ್ಥೈರ್ಯ ತುಂಬುವ ಕಾರ್ಯವೂ ನಡೆದಿದ್ದು, ದ್ವೀಪ ಗ್ರಾಮಗಳ ಜನರಿಗೆ ಸಹ ಶಾಶ್ವತ ಪರ್ಯಾಯದ ಹಾದಿಯನ್ನು ಸರ್ಕಾರ ಹುಡುಕಬೇಕಾಗಿದೆ.

ನೆರೆ ಸಂತ್ರಸ್ತರ ಮೊಗದಲ್ಲಿ ದುಗುಡ
ಕಾಳಿ ನದಿ ದಂಡೆಯ ಗ್ರಾಮಗಳಿಗೆ ತೆರಳಿದರೆ ಅಲ್ಲಿ ಸಿಗುವುದು ಭಾರಹೊತ್ತ ಹೃದಯಗಳು, ದುಗುಡಹೊತ್ತ ಮುಖಗಳು. ಮುಂದೇನು ಎಂದು ಆಕಾಶದತ್ತ ಮುಖ ಮಾಡಿರುವ ವೃದ್ಧರು. ಇದ್ದ ಮನೆಯನ್ನೇ ತೊಳೆದು ಬಳಿದು ಸ್ವಚ್ಛ ಮಾಡಿಕೊಳ್ಳುತ್ತಿರುವ ಯುವಕರು. ಆತಂಕ ಹೊದ್ದಿರುವ ಮಕ್ಕಳು. ಅಲ್ಲಲ್ಲಿ ಸಹಾಯದ ನೆಪದಲ್ಲಿ ಫೋಟೋ ತೆಗೆಸಿಕೊಳ್ಳುವ ಸುದ್ದಿವೀರರು. ಸರ್ಕಾರ ನೀಡಲಿರುವ ನೆರವನ್ನು ನಾವು ಕೊಡಿಸುತ್ತೇವೆ. ನೀವೇನು ಚಿಂತೆ ಮಾಡಬೇಡಿ ಎಂಬ ಗುಂಪುಗಳು. ಇಡೀ ವ್ಯವಸ್ಥೆಯಲ್ಲಿ ನೋವಿನ ಮೌನ ಅಡಗಿದೆ. ಎಲ್ಲವನ್ನೂ ಕಳೆದುಕೊಂಡವರ ಮನಸ್ಸಿನ ತಳಮಳ ಅರ್ಥ ಮಾಡಿಕೊಳ್ಳುವ ಸೂಕ್ಷ ್ಮ ಸಂವೇದಿಗಳು ನೆರೆ ತಿಂದ ಗ್ರಾಮಗಳಲ್ಲಿ ಕಾಣುವುದು ಕಷ್ಟ. ಯುದ್ಧದ ನಂತರದ ಸ್ಮಶಾನ ಮೌನ ಮಾತ್ರ ನದಿ ದಂಡೆಯ ನೆರೆ ಬಲಿ ಪಡೆದ ಗ್ರಾಮಗಳಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next