ಕಾರವಾರ: ಕಾರವಾರ ಸೇರಿದಂತೆ ಉತ್ತರ ಕನ್ನಡದ ಕರಾವಳಿಯಲ್ಲಿ ಬಣ್ಣಗಳ ಹಬ್ಬ ಹೋಳಿಯನ್ನು ಉಲ್ಲಾಸದಿಂದ ಆಚರಿಸಲಾಯಿತು. ಹಿರಿ, ಕಿರಿಯರು, ಯುವಕ ಯುವತಿಯರು, ಮಹಿಳೆಯರು ಭೇದವಿಲ್ಲದೇ ಎಲ್ಲರೂ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದರು.
ಮುಂಜಾನೆಯಿಂದಲೇ ಯುವಕರ ಗುಂಪು ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿತ್ತು. ದಾರಿ ಹೋಕರು ಹಾಗೂ ಬೈಕ್‌ನಲ್ಲಿ ಸಾಗುತ್ತಿದ್ದವರಿಗೆ ಬಣ್ಣ ಹಚ್ಚಿ ‘ಹ್ಯಾಪಿ ಹೋಳಿ’ ಎನ್ನುತ್ತಾ ಸಂಭ್ರಮಿಸಿದರು. ಕೆಲವರು ರಸ್ತೆ ಬದಿಯಲ್ಲಿ ನಿಂತು ಬಣ್ಣದ ನೀರು ಎರಚುತ್ತಿದ್ದರು. ಕೆಲವರು ನೀರನ್ನಷೇr ಜನರ ಮೇಲೆ ಹಾರಿಸಿ ಸಡಗರಪಟ್ಟರು. ಮಕ್ಕಳು ಪಿಚ್ಕಾರಿಗಳಲ್ಲಿ ಬಣ್ಣದ ನೀರು ಹಾರಿಸಿ ಖುಷಿ ಪಟ್ಟರು. ಒಂದು ವಾರದಿಂದ ಸುಗ್ಗಿ ಮೇಳ ಕಟ್ಟಿ ತಿರುಗಾಟ ನಡೆಸಿದವರು ಹೋಳಿ ಹಬ್ಬದ ದಿನ ವರ್ಷದ ಸುಗ್ಗಿಯ ಸಡಗರಕ್ಕೆ ತೆರೆಬಿತ್ತು.
ಕಾರವಾರದ ಹಬ್ಬುವಾಡ, ಅಂಬೇಡ್ಕರ್ ವೃತ್ತ, ಗೀತಾಂಜಲಿ ಚಿತ್ರಮಂದಿರದ ಬಳಿ ಬಣ್ಣ ಹಚ್ಚಲೆಂದೇ ಯುವಕರ ತಂಡ ನೆರೆದಿತ್ತು. ಕುಂಠಿ ಮಹಾಮಾಯಿ ದೇವಸ್ಥಾನ, ಕಾಜುಬಾಗ ಮತ್ತಿತರ ಕಡೆಗಳಲ್ಲಿ ಯುವಕ, ಯುವತಿಯರು ಸಿನಿಮಾ ಹಾಡುಗಳಿಗೆ ಹಜ್ಜೆ ಹಾಕಿದರು. ಕಾರವಾರದ ಕೋಣೆವಾಡ, ಕಳಸವಾಡ ಮತ್ತಿತರೆಡೆ ಗುಜರಾತಿಗಳು ಹೋಳಿಯನ್ನು ವಿಶೇಷವಾಗಿ ಆಚರಿಸಿದರು. ಎಲ್ಲರೂ ಒಂದೆಡೆ ಸೇರಿ ವಿಶೇಷ ಪಾಯಸ ಸವಿದು ಕುಣಿದು ಕುಪ್ಪಳಿಸಿದರು.
ಸಮುದ್ರಕ್ಕೂ ಸಡಗರ: ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಓಕುಳಿಯಾಡಿದ ಜನ ಜಿಲ್ಲೆಯ ವಿವಿಧ ಕಡಲತೀರಗಳಿಗೆ ತೆರಳಿ ಸಮುದ್ರ ಸ್ನಾನ ಮಾಡಿದರು. ಸಮುದ್ರದಲ್ಲಿ ಯಾವುದೇ ಅವಘಡ ಆಗದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ಬೆಳಗ್ಗೆಯಿಂದಲೇ ಕಾರವಾರದ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಸಂಜೆ ಆರರ ತನಕ ಮುಚ್ಚಿದ್ದವು. ಪ್ರಮುಖ ಬೀದಿಗಳಲ್ಲಿ ಜನಸಂಚಾರವೂ ವಿರಳವಾಗಿತ್ತು.
ಹೋಳಿ ವಸೂಲಿ ತಂಡಗಳಿಂದ ಕಿರಿಕಿರಿ: ಬುಧವಾರ ರಾತ್ರಿ ಹೋಳಿಯ ಸಲುವಾಗಿ ಮನೆ ಮನೆಗಳ ಮುಂದೆ ಬಂದ ಯುವಕರು ಹೋಳಿ ಹೋಳಿ ಎಂದು ಕೂಗಿ ಗದ್ದಲ ಎಬ್ಬಿಸಿ ಹಣ ವಸೂಲಿ ಮಾಡಿದರು. ನಗರದ ಕೆಎಚ್‌ಬಿ ಕಾಲೋನಿಯಲ್ಲಿ ಕೆಲ ಯುವಕರ ಗುಂಪುಗಳ ಹಾವಳಿ ಹೆಚ್ಚಿತ್ತು. ಕೊನೆಗೆ ಪೊಲೀಸರಿಗೆ ದೂರು ಹೋಯಿತು. ಪೊಲೀಸರು ಗಸ್ತು ಆರಂಭಿಸಿದ ನಂತರ ಪರಿಸ್ಥಿತಿ ಹತೋಟಿಗೆ ಬಂತು.