Advertisement

ಸ್ಕ್ಯಾನಿಂಗ್‌ ಸೆಂಟರ್‌ಗೆ ಸಿಸಿಟಿವಿ ಕಡ್ಡಾಯ

01:39 PM Jun 05, 2019 | Team Udayavani |

ಕಾರವಾರ: ಗರ್ಭಧಾರಣೆ ಮತ್ತು ಭ್ರೂಣಲಿಂಗ ಪತ್ತೆ ವಿಧಾನಗಳ ನಿಷೇಧ ಕಾಯ್ದೆ ಅನ್ವಯ ಎಲ್ಲ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕಿದ್ದು ಅದರ ಚಿತ್ರಣಗಳ ಸಂಗ್ರಹ ಕೇಂದ್ರೀಕೃತ ವಾಗಿರ ಬೇಕು ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಡಿಎಚ್ಒಗೆ ಸೂಚಿಸಿದ್ದಾರೆ.

Advertisement

ಗರ್ಭಧಾರಣೆ ಮತ್ತು ಭ್ರೂಣಲಿಂಗ ಪತ್ತೆ ವಿಧಾನಗಳ ನಿಷೇಧ ಕಾಯ್ದೆ (ಪಿಸಿಪಿಎನ್‌ಡಿಟಿ) ಜಿಲ್ಲಾ ಮಟ್ಟದ ಸಮಿತಿ ಸೇರಿದಂತೆ ಆರೋಗ್ಯ ಇಲಾಖೆ ಸಂಬಂಧಿಸಿದ ವಿವಿಧ ವಿಭಾಗಗಳ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಯಮಾನುಸಾರ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಸಿಸಿಟಿವಿ ಅಳವಡಿಸಿರಬಹುದು, ಆದರೆ ಅಲ್ಲಿ ದಾಖಲಾಗುವ ಚಿತ್ರಣವನ್ನು ಯಾರು ಪರಿಶೀಲಿಸುತ್ತಾರೆ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿಯವರು ಎಲ್ಲ ಸೆಂಟರ್‌ಗಳ ಸಿಸಿಟಿವಿ ದಾಖಲಿಸಿದ ಚಿತ್ರಣವನ್ನು ಒಂದೇ ಕಡೆ ವೀಕ್ಷಿಸುವ ಹಾಗೂ ದಾಖಲಿಸುವಂತೆ ವ್ಯವಸ್ಥೆ ಮಾಡಲು ಸೂಚಿಸಿದರು.

ಗರ್ಭಧಾರಣೆ ಮತ್ತು ಭ್ರೂಣಲಿಂಗ ಪತ್ತೆ ವಿಧಾನಗಳ ನಿಷೇಧ ಕಾಯ್ದೆ ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದ ಅವರು, ಯಾರು ಕಾಯ್ದೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಾರೋ ಆ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಮಾತ್ರ ಪರವಾನಗಿ ನವೀಕರಿಸಬೇಕು ಎಂದು ತಿಳಿಸಿದರು.

ಸರ್ಕಾರೇತರ ಸಂಘ ಸಂಸ್ಥೆಗಳು ಹಾಗೂ ಮಹಿಳಾ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ಇರುವಂತೆ ಜಿಲ್ಲಾ ಮಟ್ಟದ ಸಮಿತಿಯನ್ನು ಕ್ರಿಯಾಶೀಲ ಸದಸ್ಯರನ್ನೊಳಗೊಂಡಂತೆ ಪುನಾರಚಿಸಲು ಸೂಚಿಸಿದ ಅವರು, ಸಮಿತಿಯ ಸದಸ್ಯರು ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ಸ್ಕ್ಯಾನಿಂಗ್‌ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಅದರ ವರದಿಯನ್ನು ಜಿಲ್ಲಾ ಮಟ್ಟದ ಸಮಿತಿಯಲ್ಲಿ ಚರ್ಚಿಸುವಂತಾಗಬೇಕು ಎಂದು ಅವರು ತಿಳಿಸಿದರು.

Advertisement

ಸುರಕ್ಷಿತ ಹೆರಿಗೆ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ವ್ಯಾಪಕ ಪ್ರಚಾರದ ಅಗತ್ಯವಿದೆ ಎಂದ ಜಿಲ್ಲಾಧಿಕಾರಿಯವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಪ್ರೋತ್ಸಾಹಿಸುವ ಸಂಬಂಧ ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಹೆರಿಗೆ ಸಂದರ್ಭದಲ್ಲಿ ತಾಯಿ-ಮಗುವಿನ ಸುರಕ್ಷೆ ಅತಿಮುಖ್ಯ ಎಂದು ಅವರು ತಿಳಿಸಿದರು.

ಎಚ್ಐವಿ ಸೋಂಕು, ಕ್ಷಯರೋಗ, ಕುಷ್ಠರೋಗ, ಅಂಧತ್ವ ಇತ್ಯಾದಿ ರೋಗಗಳ ನಿಯಂತ್ರಣ ಕಾರ್ಯಕ್ರಮಗಳೂ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು ಎಂದು ಸೂಚಿಸಿದ ಅವರು, ಮುಂಗಾರು ಆರಂಭವಾಗುತ್ತಿರುವುದರಿಂದ ಮಳೆಗಾಲದಲ್ಲಿ ಸಂಭವಿಸಬಹುದಾದ ರೋಗಗಳ ಬಗ್ಗೆ ಮುಂಚಿತವಾಗಿಯೇ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಡಿಎಚ್ಒ ಡಾ| ಜಿ.ಎನ್‌. ಅಶೋಕ್‌ಕುಮಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜೇಂದ್ರ ಬೇಕಲ್, ಡಾ| ಶಿವಾನಂದ ಸೇರಿದಂತೆ ವಿವಿಧ ವಿಭಾಗಗಳ ಆರೋಗ್ಯಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಸಾಂಕ್ರಾಮಿಕ ರೋಗಗಳು ಹಾಗೂ ಇನ್ನಿತರ ಕೀಟಜನ್ಯ ರೋಗಗಳ ತಡೆಗಟ್ಟುವ ನಿಟ್ಟಿನಲ್ಲಿ ನೌಕಾನೆಲೆ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಸಹಕಾರ ಪಡೆಯಬೇಕು ಎಂದು ಅವರು ನೌಕಾನೆಲೆಯಲ್ಲಿ ವಿವಿಧ ಖಾಸಗಿ ಕಂಪನಿಗಳು ವಿವಿಧ ಕಾಮಗಾರಿ ಹೆಸರಿನಲ್ಲಿ ಬೇರೆ ಬೇರೆ ರಾಜ್ಯಗಳಿಂದ ಕಾರ್ಮಿಕರನ್ನು ಕರೆ ತರುತ್ತವೆ. ಅವರೊಂದಿಗೆ ಕೆಲವು ರೋಗಗಳ ವೈರಾಣುಗಳು ಇಲ್ಲಿ ಹರಡುವ ಸಾಧ್ಯತೆ ಇರುವುದರಿಂದ ನೌಕಾನೆಲೆ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸಬೇಕಿದೆ.
ಡಾ| ಹರೀಶಕುಮಾರ್‌
ಜಿಲ್ಲಾಧಿಕಾರಿ, ಉತ್ತರ ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next