Advertisement

ಅಗತ್ಯವಿದ್ದೆಡೆ ಸಿಆರ್‌ಜೆಡ್‌ ನಿಯಮ ಸರಳೀಕರಣ: ಡಿಸಿ

01:42 PM Jul 18, 2019 | Naveen |

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡ್‌ ಪರಿಸರ ಸ್ನೇಹಿ ಕಡಲತೀರ ಬ್ಲೂಫ್ಲಾಗ್‌ ಯೋಜನೆಗೆ ಆಯ್ಕೆಯಾಗಿ ಅಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿರುವ ಬೆನ್ನೆಲ್ಲೆ ಕರಾವಳಿ ನಿಯಂತ್ರಣ ವಲಯ 2019ರ ಅಧಿಸೂಚನೆ ಜಾರಿಯಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯುದ್ದಕ್ಕೂ ಪ್ರವಾಸೋದ್ಯಮ ಅಭಿವೃದ್ಧಿಗೆ ಇದ್ದ ನಿಯಂತ್ರಣದ ತೊಡಕುಗಳು ನಿವಾರಣೆಯಾದಂತಾಗಿವೆ.

Advertisement

2011ರ ಅಧಿಸೂಚನೆಯಂತೆ ಕರಾವಳಿ ನಿಯಂತ್ರಣ ವಲಯದ ನಿಯಮಗಳು ಸಿಆರ್‌ಜಡ್‌-3ರ ಗ್ರಾಮೀಣ ಪ್ರದೇಶದ ಕರಾವಳಿ ಸಮುದ್ರದ ಏರಲೆಯಿಂದ 200 ಮೀಟರ್‌ ಹಾಗೂ ಸಮುದ್ರ ಸೇರುವ ನದಿ ಉದ್ದಕ್ಕೂ ದಡದಿಂದ 100 ಮೀಟರ್‌ವರೆಗಿನ ನಿಬಂಧನೆಗೆ ಸಡಿಲ, ಸೇರಿದಂತೆ 2019ರ ಅಧಿಸೂಚನೆಯಲ್ಲಿ ಹಲವಾರು ಉಪಯುಕ್ತ ಹಾಗೂ ಈ ಹಿಂದೆ ಇದ್ದ ಕಠಿಣ ನಿಯಮಗಳನ್ನು ಸರಳಗೊಳಿಸಲಾಗಿದೆ. ಇದರಿಂದಾಗಿ ಕರಾವಳಿ ಭಾಗದಲ್ಲಿ ಕೈಗೊಳ್ಳಬಹುದಾದ ಪ್ರವಾಸೋದ್ಯಮ ಯೋಜನೆಗಳಿಗೆ ಪರಿಷ್ಕೃತ ಅಧಿಸೂಚನೆ ವರದಾನವಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಕೆ. ತಿಳಿಸಿದ್ದಾರೆ.

ಬ್ಲ್ಯೂಫ್ಲಾಗ್‌ ಜಾಗತಿಕ ಮನ್ನಣೆಗಾಗಿ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರದಿಂದ ಆಯ್ಕೆಯಾದ ದೇಶದ 12 ಬೀಚ್‌ಗಳ ಪೈಕಿ ಹೊನ್ನಾವರ ತಾಲೂಕು ಕಾಸರಕೋಡ್‌ ಪರಿಸರ ಸ್ನೇಹಿ ಕಡಲತೀರವೂ ಆಯ್ಕೆಯಾಗಿ ಈಗಾಗಲೇ ಅಲ್ಲಿ ಜಾಗತಿಕ ಮನ್ನಣೆಗೆ ಬೇಕಾದ ಮಾನದಂಡದಂತೆ ಕಾಮಗಾರಿಗಳು ನಡೆಯುತ್ತಿವೆ. ಇನ್ನೊಂದೆಡೆ ಬಹು ನಿರೀಕ್ಷಿತ ಕರಾವಳಿ ನಿಯಂತ್ರಣ ವಲಯದ 2011ರ ಅಧಿಸೂಚನೆ ನಿಯಮಗಳು ಪರಿಷ್ಕೃತಗೊಂಡು 2019ರ ಹೊಸ ಅಧಿಸೂಚನೆ ಬಿಡುಗಡೆಯಾಗಿದೆ. ಇದೀಗ ಈ ಹಿಂದೆ ಇದ್ದ ಹಲವು ಕಠಿಣ ನಿಯಮಗಳು ಸರಳಗೊಂಡಿವೆ ಎಂದು ಅವರು ತಿಳಿಸಿದರು.

ಹೊಸ ನಿಯಮದ ಪ್ರಕಾರ ಸಿಆರ್‌ಜಡ್‌-ವಲಯ 3ರಲ್ಲಿ ಗ್ರಾಮೀಣ ಪ್ರದೇಶದ ಕರಾವಳಿಯಲ್ಲಿ 2151ಕ್ಕಿಂತ ಹೆಚ್ಚಿನ ಜನಸಾಂದ್ರತೆ ಇರುವ ಪ್ರದೇಶದಲ್ಲಿ ಸಮುದ್ರದ ಏರಲೆಯಿಂದ 200 ಮೀಟರ್‌ ಬದಲಾಗಿ ಕೇವಲ 50 ಮೀಟರ್‌ನಲ್ಲಿ ಅಭಿವೃದ್ಧಿಗೆ ಅವಕಾಶವಿದೆ. ಉತ್ತರ ಕನ್ನಡ ಜಿಲ್ಲೆಯ ಸ್ವಲ್ಪ ಪ್ರದೇಶದಲ್ಲಿ ಇದರ ಲಾಭ ಪಡೆಯಬಹುದಾಗಿದೆ ಎಂದರು.

ಸಮುದ್ರ ಸೇರುವ ನದಿಯ ಉದ್ದಕ್ಕೂ ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳಿಗೆ ಸಾಕಷ್ಟು ಅವಕಾಶಗಳಿವೆ. ಈ ಹಿಂದಿನ ನಿಯಮದ ಪ್ರಕಾರ ನದಿ ದಡದಿಂದ 100 ಮೀ.ಒಳಗೆ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತಿರಲಿಲ್ಲ. ಆದರೀಗ ಅದನ್ನು ಕೇವಲ 10 ಮೀಟರ್‌ವರೆಗೆ ಇಳಿಸಲಾಗಿದೆ. ಇದರಿಂದ ನದಿಗುಂಟ ಅಭಿವೃದ್ಧಿಗೂ ಅವಕಾಶ ಕಲ್ಪಿಸಲಾಗಿದೆ.

Advertisement

1991ರ ನಂತರ ಸಮುದ್ರ ದಡದಲ್ಲಿ ಈಗಾಗಲೇ ಇರುವ ಪ್ರವಾಸೋದ್ಯಮ ಪೂರಕ ಕಟ್ಟಡಗಳ ವಿಸ್ತರಣೆ ಅಥವಾ ನವೀಕರಣಕ್ಕೆ ಅವಕಾಶವಿರಲಿಲ್ಲ. ಆದರೀಗ ಶೇ.25ರಷ್ಟು ವಿಸ್ತರಣೆ ಅಥವಾ ನವೀಕರಣಕ್ಕೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕರಾವಳಿ ನಿಯಂತ್ರಣ ವಲಯದ ಅಧಿಕಾರಿ ಪ್ರಸನ್ನ ಪಟಗಾರ್‌, 2011ರ ಅಧಿಸೂಚನೆ ನಿಯಮಗಳು 2019ರ ಜನೆವರಿಯಲ್ಲಿ ಪರಿಷ್ಕೃತಗೊಂಡಿದ್ದು ಶೀಘ್ರವೇ ಕರಾವಳಿ ವಲಯ ನಿರ್ವಹಣಾ ಯೋಜನೆ (ಕೆಜಡ್‌ಎಂಪಿ)ಯಲ್ಲಿ ಅಳವಡಿಸಲಾಗುವುದು. ಇದರಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ವಿಶೇಷವಾಗಿ ಸಮುದ್ರದಂಚಿನ ಮೀನುಗಾರರು ಹೋಮ್‌ಸ್ಟೆ, ರೆಸಾರ್ಟ್‌ಗಳನ್ನು ನಿಯಮಾನುಸಾರ ಮಾಡುವುದಾದರೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಸಿಆರ್‌ಜಡ್‌ ವಲಯ 1ರಲ್ಲಿ ಬರುವ ಕಾಂಡ್ಲಾ ಮತ್ತಿತರ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೂ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೊಸ ನಿಯಮಾವಳಿಗಳು ಬಹುಪಾಲು ಪ್ರವಾಸೋದ್ಯಮಕ್ಕೆ ಪೂರಕವಾಗಿದ್ದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ವೇಗ ಕೊಡಲಾಗುವುದು.
ಡಾ| ಹರೀಶಕುಮಾರ್‌, ಡಿಸಿ

Advertisement

Udayavani is now on Telegram. Click here to join our channel and stay updated with the latest news.

Next