Advertisement

ಈ ವರ್ಷ ಕರಾವಳಿ ಉತ್ಸವ ಅನುಮಾನ ! ಆರ್ಥಿಕ-ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಡೆತ

01:30 AM Mar 06, 2021 | Team Udayavani |

ಮಹಾನಗರ: ಕರಾವಳಿಯ ಜನರು ಪ್ರತಿವರ್ಷ ಸಂಭ್ರಮದಿಂದ ಪಾಲ್ಗೊಳ್ಳುವ ಕರಾವಳಿ ಉತ್ಸವ ಕೊರೊನಾದಿಂದಾಗಿ ಈ ಬಾರಿ ಆಯೋಜನೆಗೊಳ್ಳುವುದು ಅನು ಮಾನ. ಹೀಗಾಗಿ, ಮಂಗಳೂರಿನಲ್ಲಿ ಕಲೆ-ಮನೋರಂಜನೆಯ ಜತೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವಲ್ಲಿ ಪೂರಕವಾಗುವ ಈ ಸಾಂಸ್ಕೃತಿಕ ಉತ್ಸವ ರದ್ದುಗೊಂಡರೆ ಕಲಾಸಕ್ತರನ್ನು ನಿರಾಸೆಗೊಳಿಸುವುದಷ್ಟೇ ಅಲ್ಲ, ವ್ಯಾಪಾರ-ಚಟುವಟಿಕೆಗಳಿಗೂ ಹಿನ್ನಡೆಯಾಗಲಿದೆ.

Advertisement

ಸಾಮಾನ್ಯವಾಗಿ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಕರಾವಳಿ ಉತ್ಸವವು ಮಂಗ ಳೂರು ಕೇಂದ್ರೀಕೃತವಾಗಿ ಅದ್ದೂರಿಯಾಗಿ ನಡೆಯುತ್ತಿತ್ತು. ಕಡಲ ಕಿನಾರೆಯಲ್ಲಿ ಬೀಚ್‌ ಉತ್ಸವ, ಕದ್ರಿ ಪಾರ್ಕ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ, ಉತ್ಸವ ಮೈದಾನಿನಲ್ಲಿ ಸಾಂಸ್ಕೃತಿಕ ಉತ್ಸವ, ವಸ್ತು ಪ್ರದರ್ಶನ ಸಹಿತ ಹತ್ತು ಹಲವು ಕಾರ್ಯ ಕಲಾಪಗಳು ಜನರ ಮನ ಸೆಳೆಯುತ್ತಿದ್ದವು. ಇದನ್ನು ವೀಕ್ಷಿಸಲು ಹಾಗೂ ಸಂಭ್ರಮಿಸಲು ಲಕ್ಷಾಂತರ ಜನರು ವಿವಿಧ ಕಡೆಗಳಿಂದ ಆಗಮಿಸುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಕಾರಣದಿಂದ ಈ ಎಲ್ಲ ಉತ್ಸವಗಳು ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮೂಲಗಳ ಪ್ರಕಾರ ಇಲ್ಲಿಯವರೆಗೆ ಕರಾವಳಿ ಉತ್ಸವ ಸಂಬಂಧಿತ ಪೂರ್ವ ಭಾವಿ ಸಭೆಗಳು ನಡೆದಿಲ್ಲ. ಸಭೆ ನಡೆ ಯುವುದೇ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲಿಯವರೆಗೆ ಲಭ್ಯವಿಲ್ಲ. ಸಾಮಾನ್ಯವಾಗಿ ಕರಾವಳಿ ಉತ್ಸವ ಆಯೋಜನೆಗಿಂತ ಒಂದು ತಿಂಗಳ ಹಿಂದೆಯೇ ಪೂರ್ವಭಾವಿ ಸಭೆ, ಸಿದ್ಧತೆಗಳು ಆರಂಭಗೊಳ್ಳುತ್ತಿದ್ದವು.

ವ್ಯಾಪಾರ ವಹಿವಾಟಿಗೆ ಪೆಟ್ಟು
ಕೊರೊನಾ ಕಾರಣದಿಂದಾಗಿ ಕರಾವಳಿ ಉತ್ಸವದ ಗೌಜಿ ಕಡಿಮೆಯಾದರೆ ಅದರಿಂದ ಸ್ಥಳೀಯ ವ್ಯಾಪಾರ ವಹಿವಾಟಿನ ಮೇಲೆ ದೊಡ್ಡ ಪೆಟ್ಟು ಬೀಳಲಿದೆ. ನಗರದಲ್ಲಿ ಸಾಮಾನ್ಯವಾಗಿ ವಾರಗಳ ಕಾಲ ಕರಾವಳಿ ಉತ್ಸವ ನಡೆಯುತ್ತದೆ. ಸುಮಾರು ಒಂದು ತಿಂಗಳಿಗೂ ಹೆಚ್ಚು ದಿನ ವಸ್ತು ಪ್ರದರ್ಶನ ನಡೆಯುತ್ತದೆ. ಉತ್ಸವ ಆರಂಭಕ್ಕೆ ತಿಂಗಳ ಹಿಂದೆಯೇ ಇ-ಟೆಂಡರ್‌ ಕರೆಯಲಾಗುತ್ತದೆ. ಈ ವೇಳೆ ಲಕ್ಷಾಂತರ ರೂ.ಗೆ (2018ರಲ್ಲಿ 30 ಲಕ್ಷ ರೂ.) ಟೆಂಡರ್‌ ಮಾರಾಟವಾಗುತ್ತದೆ. ಸ್ಥಳೀಯವಾಗಿ ವ್ಯಾಪಾರ-ವಹಿವಾಟು ವೃದ್ಧಿಸುವ ನಿಟ್ಟಿನಲ್ಲಿ ಕರಾವಳಿ ಉತ್ಸವ ಅನುಕೂಲವಾಗುತ್ತದೆ.

ಕರಾವಳಿ ಉತ್ಸವ ಮೈದಾನಿನಲ್ಲಿ ಪ್ರತೀ ವರ್ಷ ನಡೆಯುವ ವಸ್ತು ಪ್ರದ ರ್ಶನದಲ್ಲಿ ವಿವಿಧ ಜಿಲ್ಲೆ/ರಾಜ್ಯಗಳ ಹತ್ತಾರು ಮಳಿಗೆಗಳು ಇರುತ್ತವೆ. ಇದನ್ನು ವೀಕ್ಷಿಸಲೆಂದು ಪ್ರತೀದಿನ ಸಾವಿ ರಾರು ಮಂದಿ ಉತ್ಸವ ಮೈದಾನಕ್ಕೆ ಆಗಮಿಸುತ್ತಾರೆ. ಆಗಮಿಸಿದವರು ಮಳಿಗೆಗಳಿಗೆ ಭೇಟಿ ನೀಡುತ್ತಾರೆ. ಕೊರೊನಾ ಕಾರಣದಿಂದ ವ್ಯಾಪಾರ ವಹಿವಾಟಿಗೆ ಪೆಟ್ಟು ಬಿದ್ದಿದ್ದು, ಕರಾವಳಿ ಉತ್ಸವ ನಡೆದರೆ ಆರ್ಥಿಕ ಚೇತರಿಕೆಯ ನಿಟ್ಟಿನಲ್ಲಿ ವೇದಿಕೆಯಾಗುತ್ತಿತ್ತು. ಕರಾವಳಿ ಉತ್ಸವ ಮಂಗಳೂರಿನಲ್ಲಿ ಹಬ್ಬದ ವಾತಾವರಣ ಇರುತ್ತದೆ. ಜಿಲ್ಲೆ, ಹೊರ ಜಿಲ್ಲೆಯಿಂದಲೂ ಸಾವಿರಾರು ಮಂದಿ ಆಗಮಿಸುತ್ತಾರೆ. ಸಾಮಾನ್ಯವಾಗಿ ನೂರಾರು ಮಂದಿ ಕಲಾವಿದರು ಕರಾವಳಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಜಿಲ್ಲೆಯೊಳಗಿನ ಪ್ರತಿಭೆಗಳಿಗೆ ತಮ್ಮ ಪ್ರತಿಭಾ ಸಾಮರ್ಥ್ಯ ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆ.

Advertisement

ಈ ಹಿಂದೆ 9 ದಿನಗಳ ಉತ್ಸವ
ಕಳೆದ ವರ್ಷ ಜನವರಿ 10ರಿಂದ ಕರಾವಳಿ ಉತ್ಸವ ಆರಂಭವಾಗಿ, 9 ದಿನಗಳ ಕಾಲ ನಡೆದಿತ್ತು. ಉತ್ಸವದುದ್ದಕ್ಕೂ ರಾಜ್ಯದ ವಿವಿಧ ಜಿಲ್ಲೆಗಳ ಕಲಾ ತಂಡಗಳಿಂದ ವೈವಿದ್ಯಮಯ ಕಲಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿತ್ತು. ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಯುವ ಉತ್ಸವ ಕದ್ರಿ ಪಾರ್ಕ್‌ನಲ್ಲಿ, ಪಣಂಬೂರಿನಲ್ಲಿ ಗಾಳಿಪಟ ಉತ್ಸವ ನಡೆದಿತ್ತು. ಬಳಿಕ ಲಾಲ್‌ಬಾಗ್‌ ಬಳಿ ಇರುವ ಕರಾವಳಿ ಉತ್ಸವ ಮೈದಾನದಲ್ಲಿ ವಸ್ತು ಪ್ರದರ್ಶನ ಮುಂದುವರೆದಿತ್ತು.

ಗಾಳಿಪಟ ಉತ್ಸವವೂ ರದ್ದು
“ಕಳೆದ ವರ್ಷ ಕರಾವಳಿ ಉತ್ಸವ ಸಂದರ್ಭ ಪಣಂಬೂರು ಕಡಲ ತೀರದಲ್ಲಿ ನಡೆದ ಗಾಳಿಪಟ ಉತ್ಸವ ಈ ಬಾರಿ ರದ್ದುಗೊಂಡಿದೆ. ಸಾವಿರಾರು ಮಂದಿ ಬೀಚ್‌ ತೀರಕ್ಕೆ ಆಗಮಿಸಿ, ಕಣ್ತುಂಬಿಕೊಳ್ಳುತ್ತಿದ್ದರು. ಕೊರೊನಾ ಕಾರಣದಿಂದ ಈ ಬಾರಿಯ ಗಾಳಿಪಟ ಉತ್ಸವ ರದ್ದುಗೊಳಿಸಲಾಗಿದೆ. ಕಳೆದ ವರ್ಷ ಸುಮಾರು 8 ದೇಶಗಳಿಂದ 16 ಮಂದಿ ಪ್ರತಿನಿಧಿಗಳು ಆಗಮಿಸಿದ್ದರು. ಜನವರಿ ತಿಂಗಳಿನಲ್ಲಿ ಗುಜರಾತ್‌ನಲ್ಲಿ ದೊಡ್ಡ ಮಟ್ಟದ ಗಾಳಿಪಟ ಉತ್ಸವ ನಡೆಯುತ್ತದೆ. ಅಲ್ಲಿಗೆ ಆಗಮಿಸಿದ ಮಂದಿ ಮಂಗಳೂರಿಗೂ ಆಗಮಿಸುತ್ತಿದ್ದರು. ಆದರೆ, ಈ ಬಾರಿ ಗುಜರಾತಿನಲ್ಲಿ ಉತ್ಸವ ರದ್ದುಗೊಂಡಿದೆ. ಮೈಸೂರು ದಸರಾ ವೇಳೆಯೂ ಈ ಬಾರಿ ಗಾಳಿಪಟ ಉತ್ಸವ ನಡೆದಿಲ್ಲ. ಈ ಬಾರಿ ಮಂಗಳೂರಿನಲ್ಲಿಯೂ ಈ ಬಾರಿ ಗಾಳಿಪಟ ಉತ್ಸವ ನಡೆಯುವುದಿಲ್ಲ’ ಎಂದು ಟೀಂ ಮಂಗಳೂರು ಸ್ಥಾಪಕ ಸರ್ವೇಶ್‌ ರಾವ್‌ ಅವರು “ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.

ಚರ್ಚಿಸಲಾಗುವುದು
ಕರಾವಳಿ ಉತ್ಸವ ನಡೆಸುವ ಕುರಿತಂತೆ ಸದ್ಯಕ್ಕೆ ಪ್ರಸ್ತಾವನೆ, ಕೋರಿಕೆ ಇಲ್ಲ. ಮಾ. 8ರಂದು ವಿಪತ್ತು ನಿರ್ವಹಣ ಸಮಿತಿ ಸಭೆ ಇದ್ದು, ಕರಾವಳಿ ಉತ್ಸವ ಆಯೋಜನೆ ಕುರಿತಂತೆ ಚರ್ಚಿಸಲಾಗುವುದು.
– ಡಾ| ರಾಜೇಂದ್ರ ಕೆ.ವಿ. ದ.ಕ. ಜಿಲ್ಲಾಧಿಕಾರಿ

ಅನುದಾನ ಅನುಮಾನ?
“ಕರಾವಳಿ ಉತ್ಸವ ನಡೆಸಲು ರಾಜ್ಯ ಸರಕಾರ ಸುಮಾರು 50 ಲಕ್ಷ ರೂ. ಅನುದಾನವನ್ನು ಜಿಲ್ಲಾಡಳಿತಕ್ಕೆ ನೀಡುತ್ತದೆ. ಕಳೆದ ವರ್ಷ ಈ ಅನುದಾನದಲ್ಲಿ 30 ಲಕ್ಷ ರೂ. ಬಿಡುಗಡೆಮಾಡಲಾಗಿತ್ತು. ಅಬ್ಬಕ್ಕ ಉತ್ಸವಕ್ಕೆ ಸರಕಾರದಿಂದ ಬಿಡುಗಡೆ ಮಾಡಿದ ಅನುದಾನದಲ್ಲಿ ಸುಮಾರು 7 ಲಕ್ಷ ರೂ. ಜಿಲ್ಲಾಡಳಿತದಲ್ಲಿ ಉಳಿದುಕೊಂಡಿದೆೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next