Advertisement

ಕರಾವಳಿ: ಸಿದ್ಧಾಂತಗಳಿಗೆ ಮತದಾರರ ಒಲವು

01:19 AM Apr 06, 2019 | Team Udayavani |

ಮಂಗಳೂರು: ಲೋಕಸಭಾ ಚುನಾವಣೆಗಳಲ್ಲಿ ಕರಾವಳಿಯ ಕ್ಷೇತ್ರಗಳ ಮತದಾರರು ಯಾವೆಲ್ಲಾ ಸಂಗತಿಗಳಿಗೆ ಮತ್ತು ಯಾವೆಲ್ಲ ವಿಚಾರಗಳಿಗೆ ಸ್ಪಂದಿಸಿದ್ದಾರೆ ಅನ್ನುವುದು ಕುತೂಹಲಕರವಾಗಿದೆ.

Advertisement

ಪ್ರಥಮ ಸಾರ್ವತ್ರಿಕ ಚುನಾವಣೆಯಿಂದ ಅನಂತರದ 3-4 ಚುನಾವಣೆಗಳಲ್ಲಿ ಸ್ವಾತಂತ್ರ್ಯ ಗಳಿಕೆಗೆ ಸಂಬಂಧಿಸಿದ ಒಲವೇ ಫಲಿತಾಂಶಗಳಲ್ಲಿ ಕಂಡು ಬಂದಿತ್ತು. ಆಗಿನ್ನೂ ಸಂಪರ್ಕ ಸಂವಹನ ಪ್ರಬಲವಾಗಿರಲಿಲ್ಲ. ಪೂರ್ವಸಿದ್ಧ ನಿರ್ಧಾರಗಳನ್ನೇ ಮತದಾರರು ಚಲಾಯಿಸುತ್ತಿದ್ದರು.

ಆದರೆ ಕರಾವಳಿಯಲ್ಲಿ ಬದಲಾವಣೆಯ ಪ್ರಥಮ ಫಲಿತಾಂಶ ಬಂದಿದ್ದು 1967ರಲ್ಲಿ- ಉಡುಪಿ ಲೋಕಸಭಾ ಕ್ಷೇತ್ರದಲ್ಲಿ. ಆ ಚುನಾವಣೆಯಲ್ಲಿ ಸ್ವತಂತ್ರ ಪಕ್ಷದಿಂದ ಜೆ.ಎಂ. ಲೋಬೋ ಪ್ರಭು ಗೆದ್ದು ಅಚ್ಚರಿಯ ಫಲಿತಾಂಶ ತಂದು ಕೊಟ್ಟರು (1959ರಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಈ ಪಕ್ಷವನ್ನು ಸ್ಥಾಪಿಸಿದ್ದರು. ನಕ್ಷತ್ರ ಈ ಪಕ್ಷದ ಚಿಹ್ನೆಯಾಗಿತ್ತು). ಆ ಕಾಲದ ಜಮೀನ್ದಾರರು, ಉದ್ಯಮಿಗಳು ಈ ಪಕ್ಷದ ಬೆಂಬಲಿಗರೆಂಬ ಮಾತು ಕೇಳಿ ಬಂದಿತ್ತು. ಮೂಲತಃ ಐಸಿಎಸ್‌ ಅಧಿಕಾರಿಯಾಗಿದ್ದ ಲೋಬೋ 1962ರಲ್ಲಿ ಮಂಗಳೂರಿನಲ್ಲಿ ಸೋತಿದ್ದರೂ 1967ರಲ್ಲಿ ಉಡುಪಿಯಲ್ಲಿ ಗೆದ್ದರು.

ಭೂಮಾಲಕತ್ವದ ವಿಚಾರಗಳೆಲ್ಲ ಆ ಕಾಲಕ್ಕೆ ಸಮಾಜದಲ್ಲಿ ಅಲ್ಲಲ್ಲಿ ಸಂಘರ್ಷಗಳಿಗೆ ಕಾರಣವಾಗುತ್ತಿದ್ದವು. ಆದ್ದರಿಂದ ಸ್ವತಂತ್ರ ಪಕ್ಷ ಕೆಲವು ಸ್ಥಾನಗಳನ್ನು ಜಯಿಸಲು ಕಾರಣವಾಯಿತೆಂದು ಆ ಕಾಲಕ್ಕೆ ಅಭಿಪ್ರಾಯಗಳು ಮೂಡಿಬಂದಿದ್ದವು. ಹಾಗೆಂದು ಈ ಬದಲಾವಣೆಯು ತೀವ್ರವಾಗಿ ಮುಂದುವರಿಯಲಿಲ್ಲ.

1971ರ ಚುನಾವಣೆಯಲ್ಲಿ ಆಗಿನ ಆಡಳಿತ ಪಕ್ಷದ ಕೆಲವು ನಿರ್ಧಾರಗಳು ಮತ್ತೆ ಬದಲಾವಣೆಗೆ ಕಾರಣವಾದವು. ಉಳುವವನೇ ಹೊಲದೊಡೆಯ ಎಂಬ ನಿರ್ಧಾರ ಮತದಾರರನ್ನು ಬಹುವಾಗಿ ಪ್ರಭಾವಿಸಿದ್ದವು. ಆ ಕಾಲಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಸಂಪೂರ್ಣವಾಗಿ ಕೃಷಿ ಪ್ರಧಾನ ಜಿಲ್ಲೆ. ಕೃಷಿಕರೇ ಅಧಿಕ ಸಂಖ್ಯೆಯಲ್ಲಿದ್ದರು. ಆದ್ದರಿಂದ ಸಹಜವಾಗಿಯೇ ಆಡಳಿತರೂಢ ಪಕ್ಷದ ಪರವಾಗಿ ಭಾರೀ ಧ್ರುವೀಕರಣ ಸಹಿತ ಫಲಿತಾಂಶ ಬಂತು. ಜಿಲ್ಲೆಯಲ್ಲಿ ಆಗ ಯಾವುದೇ ಬೃಹತ್‌ ಉದ್ಯಮಗಳ ಸ್ಥಾಪನೆ ಆಗಿರಲಿಲ್ಲ.

Advertisement

ಆ ನಡುವೆ ತುರ್ತು ಪರಿಸ್ಥಿತಿಯ ಹೇರಿಕೆ ಆಯಿತು. ಸ್ವಲ್ಪ ವಿಳಂಬ ವಾಗಿ ಚುನಾವಣೆ ನಡೆಯಿತು. ಆ ಸಂದರ್ಭಕ್ಕೆ ದೇಶಾದ್ಯಂತ “ತುರ್ತು ಪರಿಸ್ಥಿತಿ’ಯೇ ಚುನಾವಣೆಯ ವಿಷಯವಾಗಿತ್ತು. ಕಾಂಗ್ರೆಸೇತರ ಪಕ್ಷಗಳು ಒಟ್ಟಾಗಿ ಜನತಾ ಪಕ್ಷ ರಚನೆಯಾಯಿತು. ದೇಶಾದ್ಯಂತ ಸಮಾನ ಒಲವು ವ್ಯಕ್ತಪಡಿಸಿದ ಮತದಾರರು ಜನತಾ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದರು. ಆದರೆ, ಕರಾವಳಿಯಲ್ಲಿ ಮಾತ್ರ ಜನತೆ ವಿಭಿನ್ನವಾಗಿ ಮತದಾನ ಮಾಡಿದರು. ಇಲ್ಲಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಜಯಿಸಿದರು. ಕೃಷಿಕರಿಗೆ ಆಗಿದ್ದ ಅನುಕೂಲ, ತುರ್ತು ಪರಿಸ್ಥಿತಿಯ ಬಗ್ಗೆ ಪ್ರತ್ಯೇಕ ವ್ಯಾಖ್ಯಾನ, ರಾಜ್ಯದಲ್ಲಿದ್ದ ಸರಕಾರದ ಯೋಜನೆಗಳೆಲ್ಲ ಇದಕ್ಕೆ ಕಾರಣವೆಂದು ಆ ಕಾಲಕ್ಕೆ ಚುನಾವಣಾ ಫಲಿತಾಂಶ ವಿಶ್ಲೇಷಕರು ತೀರ್ಮಾನಕ್ಕೆ ಬಂದರು.

ಅಂದ ಹಾಗೆ…
ತುರ್ತು ಪರಿಸ್ಥಿತಿಯ ಆನಂತರದ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಕಾಂಗೈ ಪಕ್ಷ ಸಂಪೂರ್ಣ ನೆಲಕಚ್ಚಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಆದರೆ, ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಮುಂದುವರಿದಿತ್ತು. ಆ ಸಂದರ್ಭದಲ್ಲಿ ಮೂಡುಬಿದಿರೆ ಬಸ್‌ ನಿಲ್ದಾಣದ ಬಳಿ ಕಂಡು ಬಂದ ಬ್ಯಾನರ್‌ನಲ್ಲಿದ್ದ ಒಕ್ಕಣೆ: ಉತ್ತರ ಭಾರತದ ಜನತೆಗೆ ಧನ್ಯವಾದಗಳು!

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next