Advertisement

ಕರಾವಳಿಯಾದ್ಯಂತ ರಾತ್ರಿ ಕರ್ಫ್ಯೂ ಜಾರಿ : ದ.ಕ.: 75, ಉಡುಪಿ 5 ಕಡೆ ಪೊಲೀಸ್‌ ಚೆಕ್‌ಪೋಸ್ಟ್‌

01:16 AM Apr 22, 2021 | Team Udayavani |

ಮಂಗಳೂರು: ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಕಳೆದ ಹನ್ನೊಂದು ದಿನಗಳಿಂದ ಮಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದ ರಾತ್ರಿ ಕರ್ಫ್ಯೂ ಇದೀಗ ಇಡೀ ಜಿಲ್ಲೆಗೆ ಅಳವಡಿಕೆಯಾಗಿದ್ದು, ಅಷ್ಟೇಅಲ್ಲ ರಾತ್ರಿ 10ರ ಬದಲಿಗೆ ರಾತ್ರಿ 9ರಿಂದಲೇ ಪ್ರಾರಂಭಗೊಂಡು ಬೆಳಗ್ಗೆ 6ರ ವರೆಗೆ ದ.ಕ. ಜಿಲ್ಲೆಯಲ್ಲಿ ಈ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.

Advertisement

ಕರ್ಫ್ಯೂ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಪೊಲೀಸರು ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಕರ್ಫ್ಯೂ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 8 ಗಂಟೆಯಿಂದಲೇ ಜನರು ಹಾಗೂ ವಾಹನಗಳ ಓಡಾಟ ಕಡಿಮೆಯಾಗಿತ್ತು. ವ್ಯಾಪಾರಸ್ಥರು ಕೂಡ ರಾತ್ರಿ 8 ಗಂಟೆಗೂ ಮೊದಲೇ ಅಂಗಡಿಗಳನ್ನು ಬಂದ್‌ ಮಾಡಿ ತೆರಳುತ್ತಿದ್ದ ಸನ್ನಿವೇಶ ನಗರದೆಲ್ಲೆಡೆ ಕಂಡುಬಂತು. ಕರ್ಫ್ಯೂ ಜಾರಿಗೊಂಡಿದ್ದರಿಂದ ಮಂಗಳೂರು ನಗರದಲ್ಲಿ ಬಹುತೇಕ ವ್ಯಾಪಾರ -ಚಟುವಟಿಕೆಗಳು ಸ್ತಬ್ಧಗೊಂಡಿತ್ತು.

ದೂರದ ಊರುಗಳಿಗೆ ತೆರಳುವ ಬಸ್‌ ಸೇವೆಯನ್ನು ಹೊರತುಪಡಿಸಿ ಸಿಟಿ ಮತ್ತು ಖಾಸಗಿ ಬಸ್‌ಗಳ ಸೇವೆಯೂ ಬುಧವಾರ ರಾತ್ರಿ 8 ಗಂಟೆಯಾಗುತ್ತಿದ್ದಂತೆ ಕಡಿಮೆಯಾಗಿತ್ತು. ಅಷ್ಟೇ ಅಲ್ಲ, ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದ್ದ ಕಾರಣ ನಾನಾ ಮಾರ್ಗಗಳಿಗೆ ತೆರಳುವ ಬಸ್‌ಗಳ ಸಂಖ್ಯೆಯೂ ಬೆರಳೆಣಿಕೆಯಷ್ಟು ಇತ್ತು. ಅಗತ್ಯ ಸೇವೆಗಳಿಗಾಗಿ ರಾತ್ರಿ 9 ಗಂಟೆಯ ನಂತರವೂ ರಸ್ತೆಗಳಲ್ಲಿ ಓಡಾಡುತ್ತಿದ್ದವರನ್ನು ಪೊಲೀಸರು ಅಲ್ಲಲ್ಲಿ ತಡೆದು ನಿಲ್ಲಿಸಿ ತಪಾಸಣೆಗೆ ಒಳಪಡಿಸುತ್ತಿದ್ದರು.

75 ಚೆಕ್‌ಪೋಸ್ಟ್‌
ಕರ್ಫ್ಯೂವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 45 ಹಾಗೂ ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 30 ಸಹಿತ ಜಿಲ್ಲಾದ್ಯಂತ ಅಂತಾರಾಜ್ಯ ಗಡಿಗಳೂ ಸೇರಿದಂತೆ ಒಟ್ಟು 75 ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಇತರ ಮುಖ್ಯ ರಸ್ತೆಗಳ ಆಯಕಟ್ಟಿನ ಜಾಗಗಳಲ್ಲಿ ಪೊಲೀಸರು 8.45ರ ವೇಳೆಗೆ ಬ್ಯಾರಿಕೇಡ್‌ ಹಾಕಿ ಬಂದೋಬಸ್ತು ವ್ಯವಸ್ಥೆಗೆ ಸಿದ್ಧತೆ ಮಾಡಿಕೊಂಡಿದ್ದರು.
**


ಉಡುಪಿ: ನೈಟ್‌ ಕರ್ಫ್ಯೂ: ಮುನ್ನೆಚ್ಚರಿಕೆ ಕ್ರಮ
ಉಡುಪಿ: ನೈಟ್‌ ಕರ್ಫ್ಯೂ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿ ಬುಧವಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಕೆಲಸಕ್ಕೆ ತೆರಳಿರುವ ನೌಕರರೆಲ್ಲ ರಾತ್ರಿ ವೇಳೆ ತವಕದಲ್ಲಿಯೇ ಮನೆ ಸೇರುತ್ತಿದ್ದರು. ಬುಧವಾರ ರಾತ್ರಿ 9 ಗಂಟೆಯೊಳಗೆ ಬಹುತೇಕ ಅಂಗಡಿಗಳು ಮುಚ್ಚಿಕೊಂಡಿದ್ದವು. ಜನರ ಸಂಚಾರವೂ ವಿರಳವಾಗಿತ್ತು.

Advertisement

5 ಕಡೆ ಚೆಕ್‌ಪೋಸ್ಟ್‌
ಮಲ್ಪೆ-ಉಡುಪಿ- ಮಣಿಪಾಲ ದಲ್ಲಿ ಒಟ್ಟು 5 ಕಡೆ ತಾತ್ಕಾಲಿಕ ಚೆಕ್‌ ಪೋಸ್ಟ್‌ ನಿರ್ಮಿಸಲಾಗುತ್ತದೆ. ಹೆಚ್ಚುವರಿ ಪೊಲೀಸ್‌ ಸಿಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಜನಸಂಚಾರ ಕ್ಷೀಣ
ಬುಧವಾರ ಬೆಳಗ್ಗಿನಿಂದಲೇ ನಗರದೆಲ್ಲೆಡೆ ಜನಸಂಚಾರ ಕ್ಷೀಣ ವಾಗಿತ್ತು. ದೇವಸ್ಥಾನ, ಮಂದಿರ, ಮಾಲ್‌ಗ‌ಳಲ್ಲಿ ಸೀಮಿತ ಸಂಖ್ಯೆಯ ಜನರು ಕಂಡುಬಂದರು. ಆದರೆ ಸಂಜೆಯ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಅಂಗಡಿ, ಮಾಲ್‌ಗ‌ಳಲ್ಲಿನ ಕಂಡುಬಂದರು. ಗುರುವಾರದಿಂದ ಎಲ್ಲ ದೇಗುಲಗಳಲ್ಲಿ ಭಕ್ತರಿಗೆ ಪ್ರವೇಶವಿರುವುದಿಲ್ಲ. “ಭಕ್ತರ ಆರೋಗ್ಯ ಮುಖ್ಯ, ಸರಕಾರದ ಆದೇಶಕ್ಕೆ ಬದ್ಧ’ ಎಂದು ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ಮೆನೇಜರ್‌ ಗೋವಿಂದರಾಜ್‌ ತಿಳಿಸಿದ್ದಾರೆ.

ಶನಿ, ರವಿವಾರ ಬಸ್‌ ಇಲ್ಲ
ಸೋಮವಾರದಿಂದ ಶುಕ್ರವಾರ ದವರೆಗೆ ಬಸ್‌ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಯಥಾಸ್ಥಿತಿ ಸಂಚರಿಸಲಿದೆ. ಆದರೆ ಶನಿವಾರ ಹಾಗೂ ರವಿವಾರ ಯಾವುದೇ ಬಸ್‌ಗಳು ಸಂಚರಿಸುವುದಿಲ್ಲ ಎಂದು ಕೆನರಾ ಬಸ್‌ ಮಾಲಕರ ಸಂಘದ ಪದಾಧಿಕಾರಿ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದ್ದಾರೆ.

ಎ.22ರಿಂದ ಮೇ 4ರ ವರೆಗೆ ಎಲ್ಲ ಪ್ರಯಾಣಿಕ ವಾಹನಗಳಲ್ಲಿ ಆಸನ ಸಾಮರ್ಥ್ಯದ 50 ರಷ್ಟು ಪ್ರಯಾಣಿಕರನ್ನು ಮಾತ್ರ ಕೊಂಡೊಯ್ಯುವಂತೆ ಅವಕಾಶ ಕಲ್ಪಿಸಿ ವಾಹನಗಳನ್ನು ಬಳಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ತಿಳಿಸಿದ್ದಾರೆ.

ಹಾಸ್ಟೆಲ್‌ಗ‌ಳು ಬಂದ್‌
ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಹಾಸ್ಟೆಲ್‌ಗ‌ಳ ಕಾರ್ಯನಿರ್ವ ಹಣೆಯನ್ನು ಸ್ಥಗಿತಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ಇಲಾಖೆಯ ಆಯುಕ್ತರು ಆದೇಶ ನೀಡಿದ್ದಾರೆ.

ಜಿಲ್ಲೆಯಲ್ಲಿ ಸರಕಾರದ ಮಾರ್ಗಸೂಚಿಯನ್ನು ಕಟ್ಟು ನಿಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಟೇಲ್‌, ರೆಸ್ಟೋರೆಂಟ್‌ ಕಡ್ಡಾಯವಾಗಿ ಪಾರ್ಸೆಲ್‌ ಸೇವೆಗಳು ಮಾತ್ರ ನೀಡಬೇಕು. ಸರಕಾರಿ ಹಾಸ್ಟೆಲ್‌ಗ‌ಳನ್ನು ಸ್ಥಗಿತಗೊಳಿಸಲು ಇಲಾಖೆ ಆಯುಕ್ತರು ಆದೇಶ ನೀಡಿದ್ದಾರೆ. ಖಾಸಗಿ ಶಾಲೆ, ಕಾಲೇಜು ವಸತಿ ನಿಲಯಗಳನ್ನು ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವೀಕೆಂಡ್‌ ಕರ್ಫ್ಯೂ ಸಮಯದಲ್ಲಿ ಬಸ್‌ ಸಂಚಾರಕ್ಕೆ ಅವಕಾಶ ಇದ್ದು, ಶೇ.50ರಷ್ಟು ಆಸನ ಭರ್ತಿ ಮಾರ್ಗಸೂಚಿಯನ್ನು ಪಾಲಿಸಬೇಕು.
-ಜಿ.ಜಗದೀಶ್‌, ಜಿಲ್ಲಾಧಿಕಾರಿ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next