ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಶಾರದಾ ನಗರ ನಿವಾಸಿ ಸಂತೋಷ್ (34) ಎಂಬಾತನಿಗೆ 10 ವರ್ಷ ಕಠಿನ ಸಜೆ ಮತ್ತು 10 ಸಾ. ರೂ. ದಂಡ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ (ಪೋಕ್ಸೋ) ಸೋಮವಾರ ತೀರ್ಪು ನೀಡಿದೆ.
ಪ್ರಕರಣದ ವಿವರ
14 ವರ್ಷದ ಬಾಲಕಿ ಅಂಗಡಿಗೆ ಹೋಗುತ್ತಿದ್ದಾಗ ಪಕ್ಕದ ಮೈದಾನಿನಲ್ಲಿ ವಾಲಿಬಾಲ್ ಆಡುತ್ತಿದ್ದ ಸ್ಕಾರ್ಪಿಯೋ ಚಾಲಕ ಸಂತೋಷ್‌ನ ಪರಿಚಯವಾಗಿತ್ತು. ಆತನಿಗೆ ಮದುವೆಯಾಗಿದ್ದರೂ ಬಾಲಕಿಯ ಜತೆ ಸಲುಗೆ ಬೆಳೆಸಿದ್ದ. 2014ರ ಜುಲೈಯಲ್ಲಿ ಬಾಲಕಿಯನ್ನು ಗುಡ್ಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಬಳಿಕ “ಈ ವಿಷಯ ಯಾರಿಗೂ ಹೇಳಬಾರದು, ಹೇಳಿದರೆ ನಾನು ಅಪಪ್ರಚಾರ ಮಾಡುತ್ತೇನೆ’ ಎಂದು ಬೆದರಿಸಿದ್ದ. ಬಳಿಕ ಪ್ರತಿ ರವಿವಾರ ಆಕೆಯನ್ನು ಅದೇ ಪ್ರದೇಶಕ್ಕೆ ಬರಲು ಹೇಳಿ ಅತ್ಯಾಚಾರ ಮಾಡಿದ್ದ ಕಾರಣ ಆಕೆ ಗರ್ಭಿಣಿಯಾಗಿದ್ದು, 2015ರ ಜು.28ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು ಎಂದು ಆರೋಪಿಸಲಾಗಿತ್ತು. ಹೆರಿಗೆ ಬಳಿಕ ಬಾಲಕಿಯು ಆರೋಪಿ ವಿರುದ್ಧ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು, ಆತನ ವಿರು ದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆಯನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ (ಪೋಕ್ಸೋ)ದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ಕೈಗೆತ್ತಿಕೊಂಡಿದ್ದರು. ವಿಚಾರಣೆ ವೇಳೆ ಬಾಲಕಿ, ಮಗು ಮತ್ತು ಆರೋಪಿಯ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ಇಲ್ಲೂ ಆರೋಪ ಸಾಬೀತಾಗಿದ್ದು, ಅದನ್ನು ಸಾಕ್ಷ್ಯವಾಗಿ ಪರಿಗಣಿಸಲಾಗಿತ್ತು. ಒಟ್ಟು 13 ಸಾಕ್ಷಿಗಳು ಹಾಗೂ 19 ದಾಖಲೆಗಳನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಲಾಗಿದೆ.
ಸಾಕ್ಷ್ಯಗಳ ಆಧಾರದಲ್ಲಿ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿದ ಕೋರ್ಟ್, ಐಪಿಸಿ 376 ಹಾಗೂ ಪೋಕ್ಸೋ ಕಾಯ್ದೆಯ ಕಲಂ 6ರನ್ವಯ 10 ವರ್ಷ ಕಠಿನ ಸಜೆ ಮತ್ತು 10 ಸಾ. ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಮೊತ್ತದಲ್ಲಿ 7,500 ರೂ. ಅನ್ನು ಸಂತ್ರಸ್ತ ಬಾಲಕಿಗೆ ನೀಡಬೇಕು. ಅಲ್ಲದೆ ಬಾಲಕಿಯು ಸಿಆರ್‌ಪಿಸಿ 357(ಎ)ರಡಿ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅರ್ಹಳೆಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಆಗಿನ ಇನ್‌ಸ್ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು.