Advertisement
ಬಂಟ್ವಾಳ ತಾಲೂಕಿನ ಬಡತನದ ಒಂದು ಕುಟುಂಬದಲ್ಲಿ ಜನಿಸಿದ ಬಾಲಕಿ ಇಂದು ಕರಾಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಹೆಣ್ಣುಮಕ್ಕಳು ಕೂಡ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾಳೆ. ತಾಲೂಕಿನ ಕುಡಂಬೆಟ್ಟು ಗ್ರಾಮದ ಬಸ್ತಿಕೋಡಿ ಮನೆಯ ಮೊಹಮ್ಮದ್ ಇಕ್ಬಾಲ್ ಮತ್ತು ಶಮೀಮ ದಂಪತಿ ಪುತ್ರಿಯಾದ ದಿಲ್‌ನಾಜ್ ಬಾಲ್ಯದಿಂದಲೇ ಚುರುಕಾಗಿದ್ದಳು. ಪ್ರಾಥಮಿಕ ಶಿಕ್ಷಣವನ್ನು ವಾಮದಪದವು ಚೆನ್ನೈತ್ತೋಡಿಯಲ್ಲಿ ಮಾಡಿದ್ದು ಅನಂತರ ಪ್ರೌಢಶಿಕ್ಷಣವನ್ನು ಕಲ್ಲಬಾಗಿಲು ಬುರೂಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಡೆದಿದ್ದು ಪ್ರಾಥಮಿಕ ಶಾಲೆಯಲ್ಲಿ ಇರುವಾಗಲೇ ಕರಾಟೆಯಲ್ಲಿ ಆಸಕ್ತಿ ಹೊಂದಿದ್ದಳು. ಆದರೆ ಬಡತನ ಎನ್ನುವ ಬೇಲಿ ಅಡ್ಡಬರುತ್ತಿತ್ತು. ತಂದೆ ಕೂಲಿ ಕಾರ್ಮಿಕನಾಗಿದ್ದು ಮೂವರು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತಿದ್ದರು. ಕಳೆದ ನಾಲ್ಕು ವರ್ಷದ ಹಿಂದೆ ಬುರೂಜ್ ಶಾಲೆಯಲ್ಲಿ ಕರಾಟೆ ಅಭ್ಯಾಸ ಆರಂಭಿಸಿದ್ದು ಸಾಧನೆ ಮಾಡಲೇಬೇಕೆನ್ನುವ ಛಲ ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗುವಲ್ಲಿ ಯಶಸ್ವಿಯಾಗಿದೆ.
ಮೂಡಬಿದಿರೆಯ ಮೊಹಮ್ಮದ್ ನದೀಂ ಕರಾಟೆ ಶಿಕ್ಷರಾಗಿದ್ದು ಪ್ರತೀ ರವಿವಾರ ತರಬೇತಿ ನೀಡುತ್ತಿದ್ದಾರೆ. ನಾಲ್ಕು ವರ್ಷದಿಂದ ಹಲವಾರು ಕಡೆ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ದಿಲ್‌ನಾಜ್ 2013ರಲ್ಲಿ ಪುಣೆಯಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅಫ್ಘಾನಿಸ್ತಾನ, ಚೀನಾ, ನೇಪಾಳ, ಶ್ರೀಲಂಕಾ ದೇಶದ ಸ್ಪರ್ಧಿಗಳು ಭಾಗವಹಿಸಿದ್ದು ಅದರಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 2017ರ ಆಗಸ್ಟ್ 5 ಮತ್ತು 6 ರಂದು ಆಂಧ್ರಪ್ರದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯ ಕುಮಿಟೆ 45ರಿಂದ 50ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದು ಒಟ್ಟು 20 ಚಿನ್ನದ ಪದಕ, 2ಬೆಳ್ಳಿ ಪದಕ, 1ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಕಲಿಕೆಯಲ್ಲೂ ಮುಂದು
ಬಡ ಕುಟುಂಬವಾದರೂ ವಿದ್ಯೆಗೆ ಯಾವುದೇ ಕೊರತೆ ಬಾರದಂತೆ ಮಾಡಿದ ಹೆತ್ತವರು ಮಗಳ ಕನಸಿಗೂ ಉತ್ತೇಜನ ನೀಡುತ್ತಾ ಬಂದರು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.75 ಅಂಕ ಗಳಿಸಿದ್ದು ಪ್ರಸ್ತುತ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ. ಕಾಲೇಜಿನ ಪ್ರಾಂಶುಪಾಲ ಜೆರೂಮ್ ಡಿ’ಸೋಜಾ ಕೂಡ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತಾರೆ ದಿಲ್‌ನಾಜ್.
Related Articles
ಡಾಕ್ಟರ್ ಆಗಿ ಸಮಾಜದಲ್ಲಿ ಉತ್ತಮ ಸೇವೆ ಮಾಡುವ ಕನಸು ಇದೆ. ಕರಾಟೆಯಲ್ಲಿ ಈಗಾಗಲೆ ಸೀನಿಯರ್ ರೆಫರಿ ಮಾಡುತ್ತಿದ್ದು ಕರಾಟೆ ಶಿಕ್ಷಕಿಯಾಗುವ ಆಸೆ ಇದೆ. ಮಡಂತ್ಯಾರು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆ ಇದೆ. ಕರಾಟೆ ಗುರುಗಳ ಅನುಮತಿ ಪಡೆದು ಇದನ್ನು ಮುಂದುವರಿಸುತ್ತೇನೆ.
– ದಿಲ್‌ನಾಜ್, ಬಸ್ತಿಕೋಡಿ ಕರಾಟೆ ಪಟು
Advertisement
– ಪ್ರಮೋದ್ ಬಳ್ಳಮಂಜ