ಥಾಣೆ : ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ರೇಪ್ ಮಾಡಿದ ಆರೋಪದ ಮೇಲೆ 34 ವರ್ಷ ಪ್ರಾಯದ ಕರಾಟೆ ಶಿಕ್ಷಕನನ್ನು ಪೊಲೀಸು ಬಂಧಿಸಿದ್ದಾರೆ.
ಥಾಣೆ ಜಿಲ್ಲೆಯ ಕಲ್ಯಾಣ್ ನಗರದಲ್ಲಿನ ತನ್ನ ಮನೆಯಲ್ಲಿ ಕರಾಟೆ ಶಿಕ್ಷಕನು ಕರಾಟೆ ತರಬೇತಿ ನೀಡುತ್ತಿದ್ದ.
ಕಳೆದ ಡಿ.24ರಂದು ಶಿಕ್ಷಕನು ತನ್ನ 11 ವರ್ಷ ಪ್ರಾಯದ ವಿದ್ಯಾರ್ಥಿನಿಗೆ ತರಬೇತಿ ನೀಡುವ ಸಲುವಾಗಿ ಮ್ಯಾಟ್ ಮೇಲೆ ಮಲಗುವಂತೆ ಸೂಚಿಸಿದ. ಬಳಿಕ ಆಕೆಯ ಗುಪ್ತಾಂಗಗಳನ್ನು ಸ್ಪರ್ಶಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗಿಯು ಮೊದಮೊದಲು ತನ್ನ ಮೇಲಾದ ಅತ್ಯಾಚಾರ ಕೃತ್ಯದ ಬಗ್ಗೆ ಹೆದರಿಕೆಯಿಂದ ಯಾರಲ್ಲೂ ಬಾಯಿ ಬಿಟ್ಟಿರಲಿಲ್ಲ. ಆದರೆ ಕೊನೆಗೆ ತನ್ನ ತಾಯಿಗೆ ವಿಷಯ ತಿಳಿಸಿದಳು. ತಾಯಿ ನಿನ್ನೆ ಸೋಮವಾರ ರಾತ್ರಿ ಪೊಲೀಸರಿಗೆ ದೂರು ನೀಡಿದಳು.
ಕಲ್ಯಾಣ ತಾಲೂಕು ಪೊಲೀಸರು ಇಂದು ಮಂಗಳವಾರ ಬೆಳಗ್ಗೆ ಕಾಮುಕ ಆರೋಪಿ ಕರಾಟೆ ಶಿಕ್ಷಕನನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆ.376 ಮತ್ತು ಪೋಕ್‌ಸೋ ಕಾಯಿದೆ ಪ್ರಕಾರ ಕೇಸು ದಾಖಲಿಸಿದರು.