ಕಾರಟಗಿ: ಪುರಸಭೆ ಸಿಬ್ಬಂದಿ ಬೇಜವಾಬ್ದಾರಿ, ಸದಸ್ಯರ ನೀರ್ಲಕ್ಷದಿಂದಾಗಿ ಪಟ್ಟಣದ ವಿವಿಧ ವಾರ್ಡ್‌ಗಳ ಚರಂಡಿಗಳಲ್ಲಿ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿವೆ. ಪಟ್ಟಣದ 13ನೇ ವಾರ್ಡ್ ವ್ಯಾಪ್ತಿಯಲ್ಲಿನ ವಾರದ ಸಂತೆ ಮಾರುಕಟ್ಟೆ ಪಕ್ಕದಲ್ಲಿರುವ ಚರಂಡಿ ದುರ್ವಾಸನೆಗೆ ನಿವಾಸಿಗಳಿಗೂ ಹಾಗೂ ಸಂತೆಗೆ ಬರುವವರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಅನೈರ್ಮಲ್ಯ ವಾತವರಣದಿಂದ ಜನ ಬೆಸತ್ತಿದ್ದಾರೆ.
ಪಟ್ಟಣದ ವಿವಿಧ ವಾರ್ಡ್‌ಗಳ ಚರಂಡಿಗಳ ತ್ಯಾಜ್ಯ, ಕೊಳಚೆ ನೀರು ಆರ್‌ಜಿ ರಸ್ತೆಯ ಲಕ್ಷ್ಮೀ ಚಿತ್ರ ಮಂದಿರದ ಬಳಿಯ ಚರಂಡಿಗೆ ಸೇರಿಸಿದರೆ ಇನ್ನು ಹಲವೆಡೆ ಚರಂಡಿ ನೀರನ್ನು ಪಟ್ಟಣದ ವಾರದ ಸಂತೆ ಮಾರುಕಟ್ಟೆಯ ಬಳಿಯ ಕೆರೆ ಪ್ರದೇಶಕ್ಕೆ ಹರಿಬಿಡಲಾಗಿದೆ. ಆದರೆ ಅದರ ಸಮರ್ಪಕ ನಿರ್ವಹಣೆ ಇಲ್ಲದೇ ಚರಂಡಿಯಲ್ಲಿ ತ್ಯಾಜ್ಯಗಳ ಸಂಗ್ರಹಗೊಂಡು ಕೊಳಚೆ ನಿರ್ಮಾಣವಾಗಿ ದುರ್ವಾಸನೆ ಬೀರುತ್ತಿದೆ. ಬುಧವಾರದಂದು ಸಂತೆಗೆ ಆಗಮಿಸಿದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನ ಮೂಗು ಮುಟ್ಟಿಕೊಂಡು ಸಂತೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಪುರಸಭೆ ಸಿಬ್ಬಂದಿ, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿ ಗಳು ಇದುವರೆಗೂ ಚರಂಡಿ ವ್ಯವಸ್ಥೆ ಸುಧಾರಿಸುವ ಗೋಜಿಗೆ ಮುಂದಾಗಿಲ್ಲ. ಅವರಿಗೆ ಸಮಸ್ಯೆಯ ಗಂಭೀರತೆಯೂ ಅರಿವಾಗುತ್ತಿಲ್ಲ. ವಿಚಾರಿಸಿದರೆ ಬೇಜಾವಾಬ್ದಾರಿಯಿಂದ ಉತ್ತರ ನೀಡುತ್ತಾರೆ ಎಂದು ವಾರ್ಡ್ ನಿವಾಸಿಗಳ ಆರೋಪಿಸುತ್ತಾರೆ. “ಸ್ವಚ್ಛ ಭಾರತ’ದ ಪರಿಕಲ್ಪನೆ, “ಸ್ವಚ್ಛ ಭಾರತ’ದ ಸಾಧನೆ ಬಗ್ಗೆ ಹೇಳಿಕೊಳ್ಳುವ ಅಧಿಕಾರಿಗಳು ಒಮ್ಮೆ ಇತ್ತ ಗಮನ ನೀಡಿದರೆ ವಾಸ್ತವ ತಿಳಿಯುತ್ತದೆ ಎಂದು ಸಂತೆಗೆ ಆಗಮಿಸಿದ್ದ ಗ್ರಾಹಕರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಒಂದು ತಿಂಗಳಿಂದ ಪಟ್ಟಣದಲ್ಲಿ ಸೊಳ್ಳೆಗಳ ಕಾಟ ವೀಪರಿತವಾಗಿದ್ದು, ಇಲ್ಲಿನ ಜನ ಜ್ವರ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ. ಪುರಸಭೆ ಆರೋಗ್ಯಾ ಧಿಕಾರಿ ಕೂಡ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ವಿಪರ್ಯಾಸದ ಸಂಗತಿ. ಜನಪ್ರತಿನಿಧಿ ಗಳಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಸಾಮಾನ್ಯರು ನೆನಪಿಗೆ ಬರುತ್ತಾರೆ. ನಮ್ಮ ವಾರ್ಡ್‌ನಲ್ಲಿ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಒತ್ತಾಯಿಸಿದರೂ ಸಕಾಲಕ್ಕೆ ತ್ಯಾಜ್ಯ ತೆಗೆಯುವ ಕೆಲಸ ನಡೆಯುತ್ತಿಲ್ಲ. ಇದರಿಂದಾಗಿ ಚರಂಡಿಗಳು ನಾಯಿ, ಹಂದಿಗಳ ವಾಸಸ್ಥಾನವಾಗುತ್ತಿವೆ ಎಂದು ವಾರ್ಡ್ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸಿಲ್ಲ. ಕಾಲುವೆ ಸ್ವಚ್ಛಗೊಳಿಸಲು ಪುರಸಭೆ ಅಧಿ ಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಯಾವುದೋ ಯೋಜನೆಯಲ್ಲಿ ಹಣ ಬಂದರೂ ಅಪೂರ್ಣ ಕಾಮಗಾರಿ ಮಾಡಲಾಗಿದೆ. ಅರೆಬರೆ ಕೆಲಸದಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಚರಂಡಿ ಅನತಿ ದೂರದಲ್ಲಿ ಖಾಸಗಿ ಆಸ್ಪತ್ರೆ ಇದ್ದು, ಅಲ್ಲಿಗೆ ಬರುವ ರೋಗಿಗಳಿಗೂ ಈ ದುರ್ವಾಸನೆಯಿಂದ ಮುಕ್ತಿ ಸಿಕ್ಕಿಲ್ಲ.
ವಾರ್ಡ್ ಜನತೆ
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬೈಪಾಸ್ ಚರಂಡಿ ವ್ಯವಸ್ಥೆ ಕೈಗೊಳ್ಳಲು ನಿರ್ಧರಿಸಲಾಗಿದೆ. 2 ಕೋಟಿ ರೂ.ಗಳಲ್ಲಿ ಈ ಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಒಂದು ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು. ಅಲ್ಲದೇ ಸಂತೆ ಮಾರುಕಟ್ಟೆ ಬಳಿಯ 13ನೇ ವಾರ್ಡ್ ವ್ಯಾಪ್ತಿಯ ಚರಂಡಿಯನ್ನು ಕೂಡ ಬೈಪಾಸ್ ಮೂಲಕ ಲಕ್ಷ್ಮೀ ಚಿತ್ರಮಂದಿರದ ಬಳಿಯ ಚರಂಡಿಗೆ ಸೇರಿಸಲಾಗುವುದು.
ಶಿವಲಿಂಗಪ್ಪ ಎನ್.
ಮುಖ್ಯಾಧಿಕಾರಿ