Advertisement

ಕ್ರಾಂತಿ ವೀರ ಲುಕ್‌ ರಿಲೀಸ್‌ : ತೆರೆಮೇಲೆ ಭಗತ್‌ ಸಿಂಗ್‌ ಜೀವನಗಾಥೆ

08:40 AM Oct 26, 2020 | Suhan S |

ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಬಗ್ಗೆ ಈಗಾಗಲೇ ಹಲವು ಭಾಷೆಗಳಲ್ಲಿ ಸಿನಿಮಾಗಳು ಬಂದಿದ್ದು, ನಿಮಗೆ ಗೊತ್ತಿರಬಹುದು. ಹಿಂದಿ, ಮರಾಠಿ, ಪಂಜಾಬ್‌, ಬೆಂಗಾಳಿ ಸೇರಿದಂತೆ ಉತ್ತರ ಭಾರತದ ಹಲವು ಭಾಷೆಗಳಲ್ಲಿ ಭಗತ್‌ ಸಿಂಗ್‌ ಜೀವನ, ಹೋರಾಟಗಳ ಕುರಿತಾಗಿ ಹತ್ತಾರು ಸಿನಿಮಾಗಳು ಬಂದಿದ್ದರೂ, ದಕ್ಷಿಣ ಭಾರತದ ಭಾಷೆಗಳಲ್ಲಿ ಭಗತ್‌ ಸಿಂಗ್‌ ಜೀವನ ಚರಿತ್ರೆ ಚಿತ್ರರೂಪ ಪಡೆದುಕೊಂಡಿದ್ದು ತೀರಾ ವಿರಳ. ಆದರೆ ಈಗ ಕನ್ನಡದಲ್ಲೂ ಭಗತ್‌ ಸಿಂಗ್‌ ಕುರಿತಾದ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ.

Advertisement

ಅಂದಹಾಗೆ, ಆ ಸಿನಿಮಾದ ಹೆಸರು “ಕ್ರಾಂತಿವೀರ’. “ಕ್ರಾಂತಿವೀರ’ ಚಿತ್ರಕ್ಕೆ ನಿರ್ದೇಶಕ ಆದತ್‌ ಎಂ. ಪಿ ಆ್ಯಕ್ಷನ್‌ – ಕಟ್‌ ಹೇಳುತ್ತಿದ್ದಾರೆ. ಅಜಿತ್‌ ಜಯರಾಜ್‌, ಪ್ರಮೋದ್‌ ಶೆಟ್ಟಿ, ಡಾ. ವಿ ನಾಗೇಂದ್ರ ಪ್ರಸಾದ್‌, ಭವಾನಿ, ಮೊದಲಾದವರು “ಕ್ರಾಂತಿವೀರ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ “ಕ್ರಾಂತಿವೀರ’ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಇನ್ನು ಬಾಲನಟ ಮಾ. ನಿಶಾಂತ್‌. ಟಿ ರಾಥೋಡ್‌ “ಕ್ರಾಂತಿವೀರ’ ಚಿತ್ರದಲ್ಲಿ ಬಾಲಕ ಭಗತ್‌ ಸಿಂಗ್‌ ಪಾತ್ರದಲ್ಲಿ ಅಭಿನಯಿಸಿದ್ದು, ಇತ್ತೀಚೆಗೆ ಮಾ. ನಿಶಾಂತ್‌. ಟಿ ರಾಠೊಡ್‌ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ, ಬಾಲಕ ಭಗತ್‌ ಸಿಂಗ್‌ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದೆ. ಕೆಜಿಎಫ್, ಹುಬ್ಬಳ್ಳಿ, ಬಾಗಲ ಕೋಟೆ, ಶಿವಮೊಗ್ಗ ಜೈಲ್‌, ಕಂಠೀರವ ಸ್ಟುಡಿಯೋ ಮೊದಲಾದ ಕಡೆಗಳಲ್ಲಿ “ಕ್ರಾಂತಿವೀರ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಂದ್ರಕಲಾ.ಟಿ ರಾಠೊಡ್‌, ಮಂಜುನಾಥ್‌ ಹೆಚ್‌. ನಾಯಕ್‌ ಮತ್ತು ಆರ್ಜೂರಾಜ್‌ ಜಂಟಿಯಾಗಿ ನಿರ್ಮಿಸುತ್ತಿರುವ “ಕ್ರಾಂತಿವೀರ’ ಚಿತ್ರವನ್ನು ಹೊಸವರ್ಷದ ಆರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ­

ನವೆಂಬರ್‌ನಲ್ಲಿ ಹೊಸಬರ ಮುಖವಾಡ ಬಯಲು :

ಕೆಲವು ಚಿತ್ರಗಳ ಶೀರ್ಷಿಕೆ ಕೇಳಿದರೆ ಆ ಚಿತ್ರ ನೋಡಬೇಕೆಂಬ ಕುತೂಹಲ ಹುಟ್ಟಿಸುತ್ತದೆ. ಆ ಸಾಲಿಗೆ “ಮುಖವಾಡ ಇಲ್ಲದವನು 84′ ಚಿತ್ರವೂ ಸೇರುತ್ತದೆ. ಸಸ್ಪೆನ್ಸ್‌ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸೆನ್ಸಾರ್‌ ಕೂಡ ಮುಗಿದಿದೆ. ನವೆಂಬರ್‌ನಲ್ಲಿ ತೆರೆಗೆ ಬರಲಿದೆ.

ಒಬ್ಬ ಮನುಷ್ಯ ತಾನು ಹುಟ್ಟಿದಾಗಿನಿಂದ ಸಾಯುವ ತನಕ ಯಾವ್ಯಾವ ರೀತಿ ಮುಖವಾಡ ಹಾಕುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ. ಬೆಂಗಳೂರು, ಕೆಮ್ಮಣ್ಣುಗುಂಡಿ, ಬನ್ನೇರುಘಟ್ಟದ ಸುವರ್ಣಮುಖೀ, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ನಲವತ್ತಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಓಂ ನಮಃ ಶಿವಾಯ ಮೂವೀಸ್‌

Advertisement

ಲಾಂಛನದಲ್ಲಿ ಗಣಪತಿ ಪಾಟೀಲ್‌ ಬೆಳಗಾವಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಶಿವಕುಮಾರ್‌ ಬರೆದಿದ್ದಾರೆ. ನಿರ್ದೇಶಕರ ಹೆಸರನ್ನು ಗೌಪ್ಯವಾಗಿಡಲಾಗಿದ್ದು, ಮುಂದಿನ ದಿನಗಳಲ್ಲಿ ಪರಿಚಯಿಸುವ ಉದ್ದೇಶ ನಿರ್ಮಾಪಕರದ್ದು. ಮದು ಆರ್ಯ, ವಿನಯ್‌ ಗೌಡ, ಗಿರೀಶ್‌ ಛಾಯಾಗ್ರಹಣ, ದುರ್ಗಾ ಪ್ರಸಾದ್‌ ಸಂಗೀತ ನಿರ್ದೇಶನ ಹಾಗೂ ರುದ್ರೇಶ್‌ ಲಕ್ಯ ಅವರ ಸಂಕಲನ ಈ ಚಿತ್ರಕ್ಕಿದೆ. ಮಹಾರಾಜ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಶಿವಕುಮಾರ್‌, ರಚನಾ ಅಂಬಲೆ, ಅನುಶ್ರೀ, ಕಾವ್ಯಾ ಗೌಡ, ಸಿ. ಎಸ್‌.ಪಾಟೀಲ್, ಹರೀಶ್‌ ಸಾರಾ, ಆನಂದ್‌ ಕೋರಾ, ಜಯಸೂರ್ಯ ಹಾಗೂ ಚಿತ್ರದ ನಿರ್ಮಾಪಕ ಗಣಪತಿ ಪಾಟೀಲ್‌ ಬೆಳಗಾವಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next