Advertisement

ಕಾರಂತ ಕಾಲೇಜು ರಂಗೋತ್ಸವ ನಾಳೆಯಿಂದ

09:29 PM Sep 22, 2019 | Lakshmi GovindaRaju |

ಮೈಸೂರು: ಕಾಲೇಜು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸುವ ದೃಷ್ಟಿಯಿಂದ ಸೆ.24ರಿಂದ ಅ.5ರವರೆಗೆ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ ನಡೆಯಲಿದ್ದು, ಪ್ರತಿದಿನ ಸಂಜೆ 6.30ಕ್ಕೆ ಭೂಮಿಗೀತದಲ್ಲಿ ನಾಟಕ ಪ್ರದರ್ಶನ ಇರಲಿದೆ ಎಂದು ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.

Advertisement

ಪತ್ರಿ ವರ್ಷದಂತೆ ಈ ಬಾರಿಯೂ ರಂಗಾಯಣದ ವತಿಯಿಂದ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಮೈಸೂರಿನ ಜತೆಗೆ ಮಂಡ್ಯ, ಮಳವಳ್ಳಿ, ಕೆ.ಆರ್‌.ಪೇಟೆ, ತಿ. ನರಸೀಪುರ, ಹುಣಸೂರು, ಕೊಡಗು ಸೇರಿದಂತೆ 9 ಕಾಲೇಜು ತಂಡಗಳು ನಾಟಕೋತ್ಸವದಲ್ಲಿ ಭಾಗವಹಿಸಲಿವೆ. ಪಾಟ್ನಾದ ಹಿರಿಯ ರಂಗ ನಿರ್ದೇಶಕ ಸಂಜಯ್‌ ಉಪಾಧ್ಯಾಯ ನಾಟಕೋತ್ಸವ ಉದ್ಘಾಟಿಸಿದ್ದಾರೆ ಎಂದು ರಂಗಾಯಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.24ರಂದು ಭೂಮಿಗೀತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್‌ಗೌಡ, ಮಳವಳ್ಳಿ ಶಾಂತಿ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ನಾಗರಾಜ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಿರಿಯ ರಂಗ ನಿರ್ದೇಶಕ ಚಿದಂಬರ ರಾವ್‌ ಜಂಬೆ ಅಧ್ಯಕ್ಷತೆ ವಹಿಸಿದ್ದಾರೆ. ಈ ಬಾರಿ 9 ಕಾಲೇಜುಗಳು ರಂಗೋತ್ಸವಕ್ಕೆ ಆಯ್ಕೆಯಾಗಿದ್ದು, ಮೈಸೂರು ನಗರದ ಮೂರು ಕಾಲೇಜು ಆಯ್ಕೆಯಾಗಿವೆ. ಮಂಡ್ಯ, ಕೊಡಗು ಭಾಗದಿಂದ ಉಳಿದ ತಂಡಗಳು ಆಯ್ಕೆಯಾಗಿವೆ. ಪ್ರತಿ ತಂಡಕ್ಕೆ ಇಬ್ಬರು ನಿರ್ದೇಶಕರನ್ನು ನೇಮಿಸಲಾಗಿದೆ. ಅವರ ವೆಚ್ಚವನ್ನು ಮತ್ತು ನಾಟಕ ಪರಿಕರಗಳ ವೆಚ್ಚವನ್ನು ರಂಗಾಯಣ ಭರಿಸುತ್ತದೆ ಎಂದು ಹೇಳಿದರು.

ನಾಟಕೋತ್ಸವದಲ್ಲಿ ಒಟ್ಟು 300 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸುತ್ತಿದ್ದು, ರಂಗಾಯಣದಲ್ಲಿ ತಾಲೀಮು ನಡೆಸುತ್ತಿದ್ದಾರೆ. ಪ್ರತಿ ನಾಟಕ ವೀಕ್ಷಣೆಗೆ 30 ರೂ. ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಸೆ.24 ರಿಂದ ಆರಂಭವಾಗುವ ರಂಗೋತ್ಸವದಲ್ಲಿ ಮೊದಲ ಐದು ದಿನಗಳು ಸಂಪೂರ್ಣವಾಗಿ ಕಾಲೇಜು ರಂಗೋತ್ಸವದ ನಾಟಕಗಳೇ ಪ್ರದರ್ಶನಗೊಳ್ಳಲಿವೆ. ಉಳಿದ 4 ತಂಡಗಳು ನವರಾತ್ರಿ ರಂಗೋತ್ಸವದೊಂದಿಗೆ ಸೇರ್ಪಡೆಗೊಂಡು ಪ್ರದರ್ಶನ ನಡೆಯಲಿದೆ ಎಂದರು.

ಕಾಲೇಜು ರಂಗೋತ್ಸವದ ಸಂಚಾಲಕ ಹುಲುಗಪ್ಪ ಕಟ್ಟಿàಮನಿ ಮಾತನಾಡಿ, ಮೈಸೂರಿನ ನೆರೆ ಜಿಲ್ಲೆಯ ವಿದ್ಯಾರ್ಥಿಗಳು ನಾಟಕೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಾರಿ ಗ್ರಾಮೀಣ ಭಾಗದ ಮತ್ತು ರೈತಾಪಿ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಿ.ನರಸೀಪುರ, ಹುಣಸೂರು, ಮಳವಳ್ಳಿ, ಕೆ.ಆರ್‌.ಪೇಟೆ, ಕೊಡಗು, ಮಂಡ್ಯದಿಂದ ತಂಡಗಳು ಆಯ್ಕೆಯಾಗಿವೆ ಎಂದು ಹೇಳಿದರು.

Advertisement

ಹಿರಿಯ ರಂಗ ನಿರ್ದೇಶಕ ಚಿದಂಬರ ರಾವ್‌ ಜಂಬೆ ಮಾತನಾಡಿ, 2005ರಲ್ಲಿ ಬಿ.ವಿ.ಕಾರಂತ ನೆನಪಿಗೆ ಕಾಲೇಜು ನಾಟಕೋತ್ಸವ ಪ್ರಾರಂಭಿಸಲಾಯಿತು. ಇದು ಕಾರಂತರಿಗೆ ಸಲ್ಲಿಸುವ ಗೌರವವೂ ಹೌದು. ರಂಗಭೂಮಿ ಯುವ ಮನಸ್ಸುಗಳನ್ನು ಮುಟ್ಟಲಿ ಎಂಬ ಆಶಯವೂ ಇದರಲ್ಲಿ ಇದೆ ಎಂದರು. ಇದೇ ವೇಳೆ ರಂಗೋತ್ಸವದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಹಿರಿಯ ರಂಗ ನಿರ್ದೇಶಕರಾದ ಸಂಜಯ್‌ ಉಪಾಧ್ಯಾಯ ಇದ್ದರು. ಗಿರೀಶ್‌ ಕಾರ್ನಾಡ್‌ ಅವರ ಬೆಂದ ಕಾಳೂರು ನಾಟಕ ಚಿದಂಬರ ರಾವ್‌ ಜಂಬೆ ನಿರ್ದೇಶನದಲ್ಲಿ ಮತ್ತು ಸಂಜಯ್‌ ಉಪಾಧ್ಯಾಯ ನಿರ್ದೇಶನದಲ್ಲಿ ಪಾರಿಜಾತ ನಾಟಕ ಪ್ರದರ್ಶನಕ್ಕೆ ತಯಾರಾಗುತ್ತಿದ್ದು, ದಿನಾಂಕ ಇನ್ನು ನಿಗದಿಯಾಗಿಲ್ಲ.

ರಂಗೋತ್ಸವ ನಾಟಕಗಳ ವಿವರ
ದಿನಾಂಕ- ನಾಟಕದ ಹೆಸರು- ತಂಡ- ನಿರ್ದೇಶನ
24- ಅನಿಶ್ಚಿತ ಇ ಬದುಕು- ಶಾಂತಿ ಕಲಾ ವಿಜ್ಞಾನ ಕಾಲೇಜು, ಮಳವಳ್ಳಿ- ಅಜ್ಜಯ್ಯ ಮತ್ತು ಗಿರೀಶ್‌

25- ಬೊಂಬಾಟ್‌ ಬೀಚಿ- ಬಿಎಚ್‌ಎಸ್‌ ಹೈಯರ್‌- ವಿನೋದ, ರವಿ ಕ್ಯಾತನಹಳ್ಳಿ

26- ರಾಜ ಲಿಯರ್‌- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್‌.ಪೇಟೆ- ಅರುಣ್‌ ಕುಮಾರ್‌, ಪ್ರದೀಪ

27- ಪುರಾಣ ಪ್ರಹಸನ- ಅರಸು ಪ್ರಥಮ ದರ್ಜೆ ಕಾಲೇಜು, ಹುಣಸೂರು- ಮಹಾಂತೇಶ್‌, ಸುಭಾಷ್‌

28- ರಾವಿ ನದಿಯ ದಂಡೆಯಲಿ- ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಕೊಡಗು)- ಶ್ರೇಯಸ್‌, ವೀರಭದ್ರಪ್ಪ ಅಣ್ಣೀಗೇರಿ

30- ಹೈದರ್‌- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಡ್ಯ- ರಂಗನಾಥ್‌ ವಿ., ಮಿಲನ್‌ ಕೆ.ಗೌಡ

ಅ.2- ಕಂಚು ಗನ್ನಡಿ- ಮಹಾಜನ ಪದವಿ ಕಾಲೇಜು ಮೈಸೂರು- ವಿಕ್ರಂ, ಚಾಂದಿನಿ ಪಿ.

ಅ.4- ಯುದ್ಧ ಮುಗಿವುದಾದರೆ?- ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು- ಶರತ್‌, ಶಿಲ್ಪಾ

ಅ.5- ಬಕಾವಲಿಯ ಹೂ- ಸೇಂಟ್‌ ಫಿಲೋಮಿನಾ ಕಾಲೇಜು ಮೈಸೂರು- ರಿಯಾಜ್‌, ಷರೀಫ್

Advertisement

Udayavani is now on Telegram. Click here to join our channel and stay updated with the latest news.

Next