Advertisement

ಮಹಾ ಬಂದ್‌,ಬೆಂಗಳೂರು ಸ್ತಬ್ಧ:ಕಲ್ಲು ತೂರಾಟ,ಪರದಾಟ!

09:52 AM Jan 25, 2018 | |

ಬೆಂಗಳೂರು : ಮಹದಾಯಿ ನದಿ ನೀರಿನ ಸಮಸ್ಯೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ
ಮಧ್ಯಸ್ಥಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ಗುರುವಾರ ಬೆಂಗಳೂರು, ಗದಗ, ಧಾರವಾಡ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

Advertisement

ಹುಬ್ಬಳ್ಳಿ ನಗರ,ಧಾರವಾಡ ಮತ್ತು ಗದಗದಲ್ಲಿ ಬಂದ್‌ ವಾತಾವರಣ ಕಂಡು ಬಂದಿದ್ದು ಪ್ರತಿಭಟನೆಯ ಕಾವು ಜೋರಾಗಿದೆ. 

ಕನ್ನಡ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು  ಮಲ್ಲೇಶ್ವರಂನಲ್ಲಿ  ಬಾಗಿಲು ತೆರೆದಿದ್ದ ಹೊಟೇಲ್‌ ಮತ್ತು ಬೇಕರಿ ಮೇಲೆ ಪ್ರತಿಭಟನಾ ನಿರತರು ಕಲ್ಲು ತೂರಾಟ ನಡೆಸಿದ್ದಾರೆ. 

ಮುಂಜಾಗೃತಾ ಕ್ರಮವಾಗಿ  ಬಿಎಂಟಿಸಿ ಬಸ್‌ ಸಂಚಾರ ಸ್ಥಗಿತ ಗೊಂಡಿರುವ ಹಿನ್ನಲೆಯಲ್ಲಿ ಸಾವಿರಾರು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಮಿಳುನಾಡಿನಿಂದ ಬರುವ ಮತ್ತು ತೆರಳುವ ಎಲ್ಲಾ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಬೆಳಗ್ಗೆ  ಮೆಜೆಸ್ಟಿಕ್‌ನಿಂದ ಖಾಸಗಿ ವಾಹನಗಳನ್ನು ಪಡೆದರೆ ಈಗ ಆ ಸೇವೆಯೂ ಲಭ್ಯವಾಗುತ್ತಿಲ್ಲ.

ಮಾಲ್‌ಗ‌ಳಿಗೂ ಪೊಲೀಸ್‌ ಭದ್ರತೆ ಒದಗಿಸಲಾಗಿದ್ದು, ಐಟಿ ಕಂಪೆನಿಗಳಿಗೆ ರಜೆ ನೀಡಲಾಗಿದೆ. ಬೆಳಗಿನ ತಿಂಡಿ ಸಿಗದೆ ಹಲವರು ಪರದಾಡುತ್ತಿದ್ದಾರೆ. 

Advertisement

ರಾಜ್ಯದ ವಿವಿಧೆಡೆ ಬಂದ್‌ಗೆ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಗದಗ ಜಿಲ್ಲೆಯಲ್ಲಿ ಬಂದ್‌ ಆಚರಿಸಲಾಗುತ್ತಿದೆ. ಗದಗದ ನರಗುಂದದಲ್ಲಿ ಗೋವಾದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. 

ಮೈಸೂರು ನಗರದ ಬಸ್‌ ನಿಲ್ದಾಣಕ್ಕೆ ಸಂಸದ ಪ್ರತಾಪ್‌ ಸಿಂಹ ಭೇಟಿ ನೀಡಿ ಸಂಚಾರ ಸಾಧ್ಯವಾಗದೆ ಪರದಾಡುತ್ತಿದ್ದ ಪ್ರಯಾಣಿಕರ ಸಂಕಷ್ಟ ಆಲಿಸಿದರು. ಅಧಿಕಾರಿಗಳ ಬಳಿ ಯಾಕೆ ಬಸ್‌ ಸಂಚಾರ ನಿಲ್ಲಿಸಿದ್ದೀರಿ ಎಂದು ಪ್ರಶ್ನಿಸಿದರು. ಪೊಲೀಸರೊಂದಿಗೂ ಮಾತುಕತೆ ನಡೆಸಿದರು. 

ಮಂಗಳೂರು,ಉಡುಪಿಯಲ್ಲಿ ಬಂದ್‌ ಇಲ್ಲ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯಾವುದೇ ರೀತಿಯಲ್ಲಿ ಬಂದ್‌ ವಾತಾವರಣ ಕಂಡು ಬಂದಿಲ್ಲ. ಎಂದಿನಂತೆ ಬಸ್‌ ಸಂಚಾರ , ಶಾಲಾ ಕಾಲೇಜುಗಳು , ಅಂಗಡಿ ಮುಂಗಟ್ಟುಗಳು ತೆರೆದಿವೆ. 

Advertisement

Udayavani is now on Telegram. Click here to join our channel and stay updated with the latest news.

Next